Home ಇನ್ನಷ್ಟು ಕೋರ್ಟು - ಕಾನೂನು ಕೆನೆಪದರ ಹೆಸರಿನಲ್ಲಿ ನಮ್ಮ ಶಿಕ್ಷಣ ಮತ್ತು ಉದ್ಯೋಗವನ್ನು ಕಸಿಯ ಬೇಡಿ!

ಕೆನೆಪದರ ಹೆಸರಿನಲ್ಲಿ ನಮ್ಮ ಶಿಕ್ಷಣ ಮತ್ತು ಉದ್ಯೋಗವನ್ನು ಕಸಿಯ ಬೇಡಿ!

0

-ಹರಿರಾಮ್ ಎ. ವಕೀಲರು

ಇತ್ತೀಚೆಗೆ State of Punjab &Ors V/s Dalvinder Singh & Ors ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯ ವಿಷಯದಲ್ಲಿ ಒಳ್ಳೆಯ ತೀರ್ಪನ್ನು ನೀಡಿದೆ, ಈ ಹಿಂದೆ ಆಂದ್ರಪ್ರದೇಶ, ತಮಿಳುನಾಡು ಹಾಗು ಪಂಜಾಬಿನ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿದ್ದರ ಪರಿಣಾಮ ಅದರ ವಿರುದ್ಧ ಆಯಾ ರಾಜ್ಯಗಳ ಉಚ್ಚನ್ಯಾಯಾಲಯಗಳಲ್ಲಿ ಸರ್ಕಾರದ ತೀರ್ಮಾನಗಳ ವಿರುದ್ದ ಪಿಟೀಶನ್ ದಾಖಲಾಗಿತ್ತು ಕೊನೆಗೂ ಆಂದ್ರಪ್ರದೇಶದ ಉಚ್ಛ ನ್ಯಾಯಾಲಯದಲ್ಲಿ E V ಚೆನ್ನಯ್ಯ ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳು ಒಂದು Homogeneous ಗುಂಪಾಗಿರುವುದರಿಂದ ಒಳ ಮೀಸಲಾತಿ ನೀಡುವುದು ಸರಿಯಲ್ಲಾ ಎಂದು ತೀರ್ಪು ನೀಡಿ ಒಳ ಮೀಸಲಾತಿಗೆ ವಿದಾಯ ಹೇಳಿತ್ರು, ಕೊನೆಗೆ ಅದನ್ನು ಪ್ರಶ್ಬಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು ಅದರಂತೆ State of Punjab &Ors V/s Dalvinder Singh & Ors ಪ್ರಕರಣದಲ್ಲಿ ಏಳು ನ್ಯಾಯಾಧೀಶರ ಪೀಠವು 7-1 ರಂತೆ ತಮ್ಮ ಅಭಿಪ್ರಾಯವನ್ನು ಒಳ ಮೀಸಲಾತಿಯ ಪರ ತಿಳಿಸಿ , SC/ST ಗಳು ಒಂದು Homogeneous ಗುಂಪು ಅಲ್ಲಾ , ಪ್ರತಿಯೊಂದು ಜಾತಿಯು ಸಾಮಾಜಿಕ ಹಾಗು ಆರ್ಥಿಕವಾಗಿ ವಿಭಿನ್ನ ಮಟ್ಟದಲ್ಲಿ ಹಿಂದುಳಿದಿರುವುದರಿಂದ ಪ್ರತಿ ಜಾತಿಗೂ ಅವಕಾಶ ಕಲ್ಪಿಸುವ ಸಲುವಾಗಿ ಜಾತಿಗಳ ವರ್ಗೀಕರಣ ಅವಶ್ಯ ಎಂದು ತೀರ್ಪು ನೀಡಿದೆ. ಈ ತೀರ್ಪು ಸ್ವಾಗತಾರ್ಹವು , ಏಕೆಂದರೆ ದೇಶದಲ್ಲಿ 1200 ಕ್ಕಿಂತ ಹೆಚ್ಚು ಜಾತಿಗಳು SC ಪಟ್ಟಿಯಲ್ಲಿ ಇದ್ದು ಕರ್ನಾಟಕ ರಾಜ್ಯದಲ್ಲಿ 101 ಜತಿಗಳು SC ಪಟ್ಟಿಯಲ್ಲಿ ಇದ್ದು ಸಂವಿಧಾನದ ಅನುಚ್ಛೆದ 15(4) ಹಾಗು 16(4)ರಂತೆ ಶಿಕ್ಷಣ ಹಾಗು ಉದ್ಯೋಗದ ಮೀಸಲಾತಿಯಿದ್ದರು ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳಿಗೂ ಸಮಾನವಾದ ಅವಕಾಶಗಳು ಸಿಗದಿರುವುದು ಮಾತ್ರ ಸತ್ಯ, ಒಟ್ಟು ಮೀಸಲಾತಿಯ ಅನುಷ್ಠಾನದಲ್ಲಿ ಸರ್ಕಾರವು ಬೇಜಬ್ದಾರಿತನ ತೋರಿಸಿರುವುದು ಕಂಡು ಬಂದರು, ಅನುಷ್ಠಾನಗೊಂಡಿರುವ ಮೀಸಲಾತಿಯಲ್ಲಿ ವಿವಿದ ಕಾರಣಗಳಿಂದ ಕೇವಲ ಕೆಲವು ಜಾತಿಗಳಿಗೆ ಮಾತ್ರ ಹೆಚ್ಚು ಅವಕಾಶಗಳು ಸಿಕ್ಕಿ ಬಹಳಷ್ಟು ಜಾತಿಗಳು ಅವಕಾಶ ವಂಚಿತರಾಗಿ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರಾತಿನಿಧಿಕೆ ತಪ್ಪಿರುವುದೂ ಸತ್ಯ, ಹಾಗಾಗಿ ಈ ತಿರ್ಪು ಆಗಿರುವ ತಪ್ಪುಗಳು ಮುಂದುವರಿಯದೆ ಮುಂದೆ ಎಲ್ಲಾ ಜಾತಿಗಳಿಗೂ ಶಿಕ್ಷಣ ಹಾಗು ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಿ ಸಂವಿಧಾನದ ಮೂಲ ಆಶಯವಾದ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಆದರ್ಶವನ್ನು ಈಡೇರುತ್ತದೆ ಎಂಬ ವಿಶ್ವಾಸವಿದೆ.

ಆಘಾತಕಾರಿ ಮತ್ತು ಅಪ್ರಸ್ತುತ Creamy Layer

ಆದರೆ, ಇದೆ ತೀರ್ಪಿನಲ್ಲಿ ಮಾನ್ಯ ನ್ಯಾಯಾಧೀಶರುಗಳಾದ ಜಸ್ಟಿಸ್ ಗವಾಯಿ, ಮಿತ್ತಲ್, S C ಶರ್ಮ ಹಾಗು ವಿಕ್ರಂನಾಥ್ ರವರು ಮಾತ್ರ ‘ಕೆನೆ ಪದರ’ (Creamy Layer) ಎಂಬ ಆಘಾತಕಾರಿ ಹಾಗು ಅಪ್ರಸ್ತುತ ವಿಷಯವನ್ನು ಪ್ರಸ್ತಾನಿಸಿದ್ದಾರೆ, ಅದೇಕೋ ಪ್ರತಿಬಾರಿಯೂ ಮಾನ್ಯ ನ್ಯಾಯಾಲಯಗಳಲ್ಲಿ ಮೀಸಲಾತಿಯ ವಿಷಯವು ಚರ್ಚೆಗೆ ಬಂದಾಗಲೆಲ್ಲಾ ತಮ್ಮ ಮುಂದೆ ಇಟ್ಟಿರುವ ವಿಷಯದ ಬಗ್ಗೆ ಮಾತ್ರ ಚರ್ಚಿಸಿ ತೀರ್ಪು ನೀಡದೆ ತಮ್ಮ ಮುಂದೆ ಕೇಳದ ಹಾಗು ಪ್ರಸ್ತಾಪಿಸದ ವಿಷಯಗಳನ್ನು ಮುಂದಿಟ್ಟುಕೊಂಡು ಮೀಸಲಾತಿಯನ್ನು ಅಪ್ರಸ್ತುತ ಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ! ಈ ಹಿಂದೆ ಕೇಂದ್ರದಲ್ಲಿ V P ಸಿಂಗ್ ರವರ ಸರ್ಕಾರವು ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಸಲುವಾಗಿ ಮಂಡಲ್ ವರದಿಯನ್ನು ಜಾರಿ ಮಾಡಿದಾಗಲೂ ಕೂಡ ಕೆಲವರು ಅದನ್ನು ಪ್ರೆಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದಾಗ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವುದು ಸಂವಿಧಾನಿಕವಾಗಿ ಸರಿಯೋ ಅಥವಾ ತಪ್ಪೋ ಎಂಬುದನ್ನು ಮಾತ್ರ ತಿಳಿಸ ಬೇಕಾಗಿದ್ದ ಸರ್ವೋಚ್ಚ ನ್ಯಾಯಾಲಯವು, ಇಂದಿರ ಸಾನಿ V/S Union of India ಪ್ರಕರಣದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವುದು ಸರಿಯಿದೆ ಅದು ಸಾಂವಿಧಾನಿಕ ಎಂದು ತೀರ್ಪು ನೀಡುವ ಜೊತೆಗೆ ಪ್ರಕರಣದಲ್ಲಿ ಪ್ರಶ್ನಿಸದ ಅಥವ ಕೇಳದ “ಕೆನೆ ಪದರ” Creamy Layer ಹಾಗು” 50% ಮಿತಿ ಅಥವಾ ಸೀಲಿಂಗ್ ” ಎಂಬ ಅಂಶಗಳನ್ನು ಸೇರಿಸಲಾಗಿತ್ತು.

ಮೀಸಲಾತಿ ನೀಡಲು ಕಾರಣ ?

ದುರಂತವೆಂದರೆ ಅವರೆ ನಿಗದಿ ಪಡಿಸಿದ 50% ಮಿತಿ, ಅಂದರೆ, ಮೀಸಲಾತಿಯು ಯಾವುದೇ ಕಾರಣಕ್ಕೂ 50% ಮೀರ ಬಾರದೆಂಬ ನಿಯಮವನ್ನು EWS ಮೀಸಲಾತಿ ಪ್ರಕರಣದಲ್ಲಿ ಮಣ್ಣಿಗೆ ತೂರಿ EWS ಮೀಸಲಾತಿಯಿಂದ ಮೀಸಲಾತಿಯ ಪ್ರಮಾಣವು 50% ದಾಟಿದರು, ಅದು ಸರಿ, ಅದು ಸಂವಿಧಾನ ಬಾಹಿರವಲ್ಲಾ ಎಂದು ಇದೆ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು ಮತ್ತೆ ಇತ್ತೀಚೆಗೆ ಬಿಹಾರ ಸರ್ಕಾರ ನೀಡಿದ್ದ OBC/SC/ST ಮೀಸಲಾತಿಯು 65% ಆಗಿದೆ ಹಾಗಾಗಿ ಅದು 50% ಮಿತಿಯನ್ನು ಮೀರಿದ್ದು ಅದು ಅಸಂವಿಧಾನಿಕ ಎಂದು ತೀರ್ಪು ನೀಡಿ ಸರ್ಕಾರದ ಆದೇಶವನ್ನು ರದ್ದು ಮಾಡಿತ್ತು ! 50% ಮಿತಿ ಅಥವಾ 50% Ceiling principle ಕೇವಲ ದಲಿತ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ ಮೇಲ್ಜಾತಿ ಗಳಿಗಲ್ಲಾ ಎಂಬುದಯ ವಿಪರ್ಯಾಸವಲ್ಲವೆ ? ಮೀಸಲಾತಿಯ ಮೂಲ ಉದ್ದೇಶ ಮತ್ತು ಕಾರಣಗಳನ್ನು ನಮ್ಮ ನ್ಯಾಯಾಲಯಗಳು ಯಾಕೆ ಪರಿಗಣಿಸುತ್ತಿಲ್ಲಾ ?
1950 ರ ಸಂವಿಧಾನದಲ್ಲಿ ಅಳವಡಿಸಲಾಗಿರುವ ಮೀಸಲಾತಿ ಸೌಲಭ್ಯಗಳನ್ನು ನಿರ್ದಿಷ್ಟ ಉದ್ದೇಶ ಮತ್ತು ಕಾರಣಗಳಿಗೆ ನೀಡಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳ ಬೇಕಿದೆ,
ಸಂವಿಧಾನದ Article 15 (4) : Nothing in this article or in clause(2) of article 29 shall prevent the State from making any special provision for the advancement of any socially and educationally backward classes of citizens or for the Scheduled Castes and the Scheduled Tribes. ಎಂಬುದಾಗಿ ಹೇಳಿದರೆ

Article 16(4): (4) Nothing in this article shall prevent the State from making any provision for the reservation of appointments or posts in favour of any backward class of citizens which, in the opinion of the State, is not adequately represented in the services under the State.
ಎಂಬುದಾಗಿ ಹೇಳುತ್ತದೆ, ಅಂದರೆ SC/ST ಗಳಿಗೆ ಶೈಕ್ಷಣಿಕ ಮೀಸಲಾತಿಯನ್ನು ನೀಡಲು ಕಾರಣ ತಮ್ಮ ಸಾಮಾಜಿಕ ಹಾಗು ಶೈಕ್ಷಣಿಕ ಹಿಂದುಳಿಯುವಿಕೆ ಹಾಗೆಯೇ ಅವರಿಗೆ ಔದ್ಯೋಗಿಕ ಮೀಸಲಾತಿ ನೀಡಲು ಕಾರಣ ಪ್ರಾತಿನಿಧಿಕ ಅಥವಾ ಪ್ರಾತಿನಿಧ್ಯ ಇಲ್ಲದೆ ಇರುವುದು, ಹಾಗಾಗಿ ಮೀಸಲಾತಿಯ ಮುಖ್ಯ ಉದ್ದೇಶ ಸಾಮಾಜಿಕ,ಶೈಕ್ಷಣಿಕ ಹಾಗು ಪ್ರಾತಿನಿಧಿಕೆ ಸಾಧಿಸುವುದು, ಇಲ್ಲಿ ದಲಿತರಿಗೆ (SC/ST) ಗಳಿಗೆ ತಮ್ಮ ಬಡತನದ ಕಾರಣಕ್ಕಾಗಿ ಮೀಸಲಾತಿಯನ್ನು ನೀಡುತ್ತಿಲ್ಲಾ ಎಂಬುದನ್ನು ನಾವು ಗಮನಿಸ ಬೇಕಿದೆ. ಹಾಗೆಯೆ,ಸರ್ಕಾರವು ಬಡತನ ನಿರ್ಮೂಲನೆಗಾಗಿ ಎಲ್ಲಾ ಜಾತಿಗಳಿಗೂ ಕಾರ್ಯಕ್ರಮಗಳನ್ನು ಅಥವಾ ಯೋಜನೆಗಳನ್ನು ರೂಪಿಸಿದ್ದಾವೆ ಎಂಬುದು ಕೂಡ ನಮಗೆ ತಿಳಿದಿರುವ ವಿಷಯ, ಹಾಗಾಗಿ ಮೀಸಲಾತಿಯನ್ನು ಬಡತನ ನಿರ್ಮೂಲನ ಕಾರ್ಯಕ್ರಮ ಎಂದು ಭಾವಿಸುವುದು ನಮ್ಮ ಮೂರ್ಖತನ ಎನಿಸುತ್ತದೆ !

ಮೀಸಲಾತಿಯೋ‌? ಪ್ರಾತಿನಿಧ್ಯವೋ ?

ಒಳ ಮೀಸಲಾತಿ ಪ್ರಕರಣದಲ್ಲಿ Creamy Layer ಪರಿಕಲ್ಪನೆಯನ್ನು ತಂದಿರುವುದು ತಾತ್ವಿಕವಾಗಿಯೂ, ಸಾಂವಿಧಾನಿಕವಾಗಿಯೂ ಹಾಗು ವೈಜ್ಞಾನಿಕವಾಗಿಯೂ ಸರಿಯಿಲ್ಲಾ ಏಕೆಂದರೆ SC/ ST ಸಮುದಾಯಕ್ಕೆ ಸೇರಿದ ಯಾವುದೆ ವ್ಯಕ್ತಿ ಮೀಸಲಾತಿ ಮುಖಾಂತರ ವಾಗಲಿ ಅಥವಾ ತನ್ನ ಸಾಮರ್ಥ್ಯದ ಮುಖಾಂತರವಾಗಲಿ ಉನ್ನತ ಶಿಕ್ಷಣ, ಉದ್ಯೋಗ ಅಥವಾ ಅಧಿಕಾರ ಪಡೆದುಕೊಂಡರು ತನಗೆ ಅಂಟಿಕೊಂಡಿರುವ ಜಾತಿ ಎಂಬ ಪೆಡಂಭೂತ ಆತನನ್ನು ಬಿಟ್ಟು ಹೋಗುವುದಿಲ್ಲಾ ! ರಾಜಕೀಯ ಮೀಸಲಾತಿಯ ಮುಖಾಂತರ MP, MLA ಹಾಗು ಮಂತ್ರಿಗಳಾದ ಈ ಸಮುದಾಯದ ಬಹುತೇಕ ಜನರಿಗೆ ಇಂದಿಗೂ ಅಸ್ಪೃಶ್ಯತೆ‌ ಮತ್ತು ಜಾತಿಯತೆ ಬೆನ್ಬಿಡದೆ ಕಾಡುತ್ತಿರುವುದು ನಾವು ಪೃತಿನಿತ್ಯ ಗಮನಿಸುತ್ತಲೆ ಇದ್ದೇವೆ, IAS,IPS ಹಾಗು ಇನ್ಮಿತರ ಉನ್ನತ ಸ್ಥಾನಗಳಿಗೆ ಏರಿರುವ ಸಮುದಾಯದ ವ್ಯಕ್ತಿಗಳು ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯಾದಂತ ಅಸ್ಪೃಶ್ಯತೆ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಲೇ ಬರುತ್ತಿದ್ದಾರೆ ಅಂದರೆ ನಮ್ಮ ದೇಶದಲ್ಲಿ ಒಬ್ಬ ದಲಿತ ವ್ಯಕ್ತಿಯು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರು ಆತನ ಆರ್ಥಿಕ ಸ್ಥಿತಿ ಬದಲಾಗಬಹುದು ಅಥವಾ ಆತನ ಶಿಕ್ಷಣ ಮಟ್ಟ ಬದಲಾಗಬಹುದು ಆದರೆ ಆತನ ಸಾಮಾಜಿಕ ಸ್ಥಿತಿ ಮಾತ್ರ ಹಾಗೆ ಉಳಿಯುವುದು ಮಾತ್ರ ಸತ್ಯ ! ಆಗಿರುವಾಗ ಮೀಸಲಾತಿ ಅನ್ನುವ ಪರಿಕಲ್ಪನೆಯು ಈ ದೇಶದಲ್ಲಿ ಬಂದಿದ್ದೆ ಈ ಸಮುದಾಯಗಳಿಗೆ ಅವಕಾಶ ಮತ್ತು ಪ್ರಾತಿನಿಧ್ಯವನ್ನು ಒದಗಿಸಲಿಕ್ಕೆ ಆದರೆ ಮೀಸಲಾತಿ ಬಂದು 75 ವರ್ಷಗಳು ಕಳೆದರೂ ಇನ್ನೂ ಮೀಸಲಾತಿಯು ಸಂಪೂರ್ಣವಾಗಿ ಜಾರಿಯಾಗದೆ ಅವರಿಗೆ ದಕ್ಕ ಬೇಕಾಗಿದ್ದ ಅವಕಾಶ ಹಾಗು ಪ್ರಾತಿನಿಧ್ಯ ಪಡೆಯಲು ಹೋರಾಟ ಮಾಡಬೇಕಾದ ಸ್ಥಿತಿ ಇಂದಿಗೂ ಇರುವುದು ಸತ್ಯ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ವಿಶೇಷವಾದ ಜಾತಿ ದೌರ್ಜನದ ಎರಡು ಪ್ರಕರಣಗಳು ಬೆಳಕಿಗೆ ಬಂದಿದೆ, ಅದರಲ್ಲಿ ಮೊದಲನೆಯದಾಗಿ, ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ IIM B ಯಲ್ಲಿ ಕಳೆದ 50 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ 2018 ರಲ್ಲಿ
ಪ್ರೊ. ಗೋಪಾಲ್ ದಾಸ್ ಎನ್ನುವ ದಲಿತ ವ್ಯಕ್ತಿಯು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಜನರಲ್ ಮೆರಿಟಲ್ಲಿ ಆಯ್ಕೆಯಾಗುತ್ತಾರೆ ಆದರೆ ಅಲ್ಲಿನ ಮೇಲ್ಜಾತಿ ಆಡಳಿತ ಮಂಡಳಿ ಹಾಗು ಸಹೋದ್ಯೋಗಿಗಳಿಗೆ ತನ್ನ ಜಾತಿಯು ಗೊತ್ತಾಗಿನಿಂದ ತನ್ನ ಮೇಲೆ ನಿರಂತರವಾಗಿ ಜಾತಿಯ ಕಿರುಕುಳ ಹಾಗು ದೌರ್ಜನ್ಯವನ್ನು ಮಾಡುತ್ತ ತನ್ನನ್ನು ಕೆಲಸದಿಂದ ತೆಗೆದುಹಾಕುವ ಹುನ್ನಾರವನ್ನು ರೂಪಿಸಿತ್ತಾ ಬಂದಿರುತ್ತಾರೆ. ಕೊನೆಗೆ ಪ್ರೊ. ಗೋಪಾಲ್ ದಾಸ್ ರವರು ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಬೇಸತ್ತು ಮಾನ್ಯ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದು ತನಗೆ ಸಹಾಯ ಮಾಡಲು ಕೇಳಿಕೊಂಡಾಗ ಮಾನ್ಯ ರಾಷ್ಟ್ರಪತಿಗಳು ರಾಜ್ಯ ಸರ್ಕಾರಕ್ಕೆ ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸೂಚಸಿ ಪತ್ರ ಬರೆಯುತ್ತಾರೆ ಆದರೆ ಈ ಪ್ರಕರಣವು ಇನ್ನೂ DCRE ಯಲ್ಲಿ ಇತ್ಯರ್ಥವಾಗದೆ ಹಾಗೆ ಇದ್ದು ಇನ್ನೂ ಪ್ರೊ ಗೋಪಾಲ್ ದಾಸ್ ರವರ ಮೇಲೆ ಪ್ರತಿನಿತ್ಯ ಕಿರುಕುಳವು ಮುಂದುವರಿಯುತ್ತಿದೆ ಹಾಗೆ ದೇಶದ ಪ್ರತಿಷ್ಠಿತ ಸಂಸ್ಥೆಯಾದ ನಿಮಾನ್ಸ್ ಸಂಸ್ಥೆಯಲ್ಲಿ ಇತ್ತೀಚಿಗೆ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ನೇಮಕಾತಿಯನ್ನು ಕರೆದಿದ್ದು ಆ ಹುದ್ದೆಗೆ ಕರ್ನಾಟಕದ ಡಾಕ್ಟರ್ ಲಿಂಗರಾಜು ಎನ್ನುವ ವಿಶ್ವಖ್ಯಾತಿ ವೈದ್ಯರು ಹಾಗೂ ಅನೇಕ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದ ಫೆಲೋಶಿಪನ್ನು ಪಡೆದಿರುವಂತಹ ಬುದ್ದಿವಂತರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿಶೇಷವಾದ ಆವಿಷ್ಕಾರವನ್ನು ಮಾಡಿ ಅದರ ಮೇಲೆ ಪೇಟೆಂಟ್ ಅನ್ನು ಹೊಂದಿದ್ದು ವೈದ್ಯರ ವಲಯದಲ್ಲಿ ಬಹಳ ಪ್ರಖ್ಯಾತಿಯಾಗಿದ್ದರು ಇವರು ದಲಿತರು ಎನ್ನುವ ಕಾರಣಕ್ಕೆ ಆ ಹುದ್ದೆಗೆ ಇವರು ಒಬ್ಬರೆ ಅರ್ಜಿಯನ್ನು ಹಾಕಿದ್ದರು ಯಾವುದೇ ಕಾರಣವನ್ನು ನೀಡದೆ ತನ್ನನ್ನು ಹುದ್ದೆಗೆ ನೇಮಕ ಮಾಡದೆ ಹುದ್ದೆಯನ್ನು ಹಾಗೆ ಕಾಲಿ ಇರಿಸಿಕೊಂಡಿದ್ದಾರೆ ಇನ್ನು ದೇಶದ ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಈ ರೀತಿಯ ತಾರತಮ್ಯವನ್ನು ಪ್ರತಿನಿತ್ಯ ಕಾಣುತ್ತಲೇ ಇದ್ದೇವೆ. ಬಹಳ ಮುಖ್ಯವಾಗಿ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಂದರೆ ರಾಜ್ಯಗಳ ಉಚ್ಚ ನ್ಯಾಯಾಲಯ ಹಾಗು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲೂ ಇಲ್ಲಿಯವರೆಗೂ ಇವರ ಪ್ರಾತಿನಿಧ್ಯವನ್ನು ಕೇವಲ‌ 5% ಮಾತ್ರ ಎಂಬುದನ್ನು ನಾವು ಮರೆಯುವ ಹಾಗಿಲ್ಲಾ ! ಇಂದಿಗೂ ನ್ಯಾಯಾಲಯ ವ್ಯವಸ್ಥೆಗಳಲ್ಲಿ ಯಾವುದೇ ಮೆರಿಟ್ ಸಿಸ್ಟಮ್ ಇಲ್ಲದೆ ಅಲ್ಲಿ ಕೊಲಿಜೀಯಮ್ ಸಿಸ್ಟಮ್ ಮುಖಾಂತರ ಇಲ್ಲಿಯವರೆಗೂ ಕೆಲವೇ ಕೆಲವು ಜಾತಿ ಮತ್ತು ಕೆಲವು ಕುಟುಂಬಗಳಿಗೆ ಸೇರಿದ ವ್ಯಕ್ತಿಗಳು ನ್ಯಾಯಾಧೀಶರಾಗುತ್ತಿರುವುದನ್ನು ನೋಡಿದ್ದೇವೆ.

IIM B ಯ Professor ಹಾಗು ನಿಮ್ಹಾನ್ಸ್ ನ ವೈದ್ಯರು ಇವರು ಹೇಳಿದ ಹಾಗೆ Creamy layer ಅಡಿಯಲ್ಲಿ ಬರುತ್ತಾರೆ, ಇರುವ ಹುದ್ದೆಯಲ್ಲಿ ಬೇಕಿರುವ ಎಲ್ಲಾ ಅರ್ಹತೆ ಮತ್ತು ಯೋಗ್ಯತೆ ಇದ್ದರೂ ಇವರನ್ನು ಅಲ್ಲಿಗೆ ಸೇರಿಸಿಕೊಳ್ಳಲು ಹಾಗು ಉಳಿಸಿಕೊಳ್ಳಲು ಸಿದ್ದರಿಲ್ಲದವರು ಇನ್ನು ಮೊದಲೆನೆ ತಲಮಾರಿನ ಹಳ್ಳಿ ಮತ್ತು ನಗರ ಪ್ರದೇಶದ ಸಾಮಾನ್ಯ ದಲಿತರಿಗೆ ಇವರು ಅವಕಾಶ ನೀಡುತ್ತಾರ ? ಬಹಳ ಮುಖ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಈ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಉನ್ನತ ಹುದ್ದೆಗಳಾಗಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಬೇಕಾದರೆ ಬಹುಶಃ ಅದು ಶಿಕ್ಷಣವು ಪಡೆದ ಎರಡನೇ ಅಥವಾ ಮೂರನೇ ತಲೆಮಾರಿನ ವ್ಯಕ್ತಿಗಳಿಗೆ ಸಾಧ್ಯವಾಗಬಹುದು, ಮೊದಲನೆ ತಲಮಾರಿನ ವ್ಯಕ್ತಿಗಳಿಗೆ ಈ ಶಿಕ್ಷಣ ಸಂಸ್ಥೆಗಳ ಅರಿವಾಗಲಿ ಅದಕ್ಕೆ ಬೇಕಾಗಿರುವ ಗುಣಮಟ್ಟದ ಶಿಕ್ಷಣವನ್ನಾಗಲಿ ಅದಕ್ಕೆ ಬೇಕಾಗಿರುವ ಕಾಂಪಿಟೇಟಿವ್ನೆಸ್ಸನ್ನ ಬೆಳೆಸಿಕೊಳ್ಳಲು ಎಷ್ಟರಮಟ್ಟಿಗೆ ಸಾಧ್ಯವಾಗಬಹುದು ಎಂಬುದನ್ನು ನಾವು ಯೋಚಿಸ ಬೇಕಿದೆ . ಶಿಕ್ಷಿತರಾಗುವ ಜೊತೆಗೆ ಆರ್ಥಿಕವಾಗಿ ಅನಕೂಲ ವಿರುವ ಎರಡನೆ ತಲಮಾರಿನ ವ್ಯಕ್ತಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗು ಅವಕಾಶಗಳ ಅರಿವು ಇರಲು ಸಾಧ್ಯ ಅಂತ ವ್ಯಕ್ತಿಗಳು ಮಾತ್ರ ಇವರು ಹೇಳುವ ಉನ್ನತ ಮಟ್ಟಕ್ಕೆ ಏರಲು ಸಾಧ್ಯ, ಮೊದಲನೆ ತಲೆಮಾರಿನ ವ್ಯಕ್ತಿಗಳು ಈ ಮಟ್ಟಕ್ಕೆ ಏರಲು ಸಾಧ್ಯವೆ ಇಲ್ಲಾ ಎಂಬುದು ನನ್ನ ವಾದವಲ್ಲಾ, ಏರುವ ಸಾಧ್ಯತೆಗಳು ತೀರ ಕಡಿಮೆ ಎಂಬುದಷ್ಟೆ ನನ್ನ ಆತಂಕ. ಹಾಗಾಗಿ creamy layer ಹೆಸರಿನಲ್ಲಿ ನಮ್ಮ ಶಿಕ್ಷಣದ ಹಾಗು ಉದ್ಯೋಗದ ಹಕ್ಕನ್ನು ಕಸಿದುಕೊಳ್ಲಬಾರದು ಎಂಬುದು ನಮ್ಮ ಆಶಯ.

ಮೀಸಲಾತಿಯನ್ನು ಪಡೆದು ಕೊಂಡವರೆ ಪದೆ ಪದೆ ಪಡೆದುಕೊಳ್ಳುತಿದ್ದಾರೆ ಇವರಿಂದ ಇತರರಿಗರ ಅನ್ಯಾಯವಾಗುತ್ತಿದೆ ಎಂಬುದು ನಿಮ್ಮ ಕಾಳಜಿಯಾದರೆ ಅದಕ್ಕೆ ಪರಿಹಾರ Creamy Layer ಅಲ್ಲಾ , ಬದಲಾಗಿ Preferential System of Reservation ಅಥವಾ ಆದ್ಯತಾದಾರಿತ ಮೀಸಲಾತಿ ವ್ಯವಸ್ಥೆ ಅಂದರೆ ಯಾವುದೇ ಅವಕಾಶಗಳು ಇದ್ದಾಗ ಅದು ಶಿಕ್ಷಣ ಸಂಸ್ಥೆಯಲ್ಲಿನ ಸೀಟಾಗಲು ಅಥವಾ ಯಾವುದೆ ಉದ್ಯೋಗವಾಗಲಿ ಮೊದಲು ಹಳ್ಳಿಗಾಡಿನ ಬಡ ದಲಿತನಿಗೆ ಅವಕಾಶ ನೀಡಬೇಕು, ಯವುದೇ ಅರ್ಹ ಅಭ್ಯರ್ಥಿ ಸಿಗದಿದ್ದಾಗ ಮುಂದಿನ ಅವಕಾಶವನ್ನು ನಗರ ಪ್ರದೇಶದ ಬಡ ದಲಿತನಿಗೆ ನೀಡಬೇಕು ಆಗಲು ಸೂಕ್ತ ಅಭ್ಯರ್ಥಿ ಸಿಗದಿದ್ದಾಗ ಆ ಅವಕಾಶವನ್ನು ದಲಿತ ಸಮುದಾಯದೆ ಇತರೆ ಅಂದರೆ ಇವರು ಹೇಳುವ Creamy Layer ಅಥವಾ ಅನಕೂಲಸ್ಥ ದಲಿತನಿಗೆ ನೀಡ ಬೇಕು, ಹೀಗೆ ಮಾಡುವುದರಿಂದ ಮೀಸಲಾತಿಯ ಮೂಲ ಉದ್ದೇಸಾವಾದ ಪ್ರಾತಿನಿಧ್ಯ ಅಥವಾ Representational Purpose ನ್ಮು ಸಾಧಿಸಿದಂತಾಗುತ್ತದೆ ಇಲ್ಲವಾದಲ್ಲಿ ಮತ್ತೆ ಇವರನ್ನು ವ್ಯವಸ್ಥಿತವಾಗಿ ವ್ಯವಸ್ಥೆಯಿಂದ ದೂರ ಇಡಲಾಗುವುದು !

ಮೊದಲಿನಿಂದಲೂ ದೇಶದ 98% ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿ ಮಾಡುವ ಕೃಷಿ, ಕೈಗಾರಿಕ ಮತ್ತು ಸೇವಾ ವಲಯದಿಂದ ದಲಿತರನ್ನು ದೂರ ಇಟ್ಟಾಗಿದೆ, ಇವರಿಗಿದ್ದ ಒಂದೇ ಒಂದು ಅವಕಾಶವು ಸರ್ಕಾರಿ ವಲಯದ ಉದ್ಯೋಗಗಳು, ಹೊಸ ಆರ್ಥಿಕ ನೀತಿಯ ಹೆಸರಿನಲ್ಲಿ ಜಾರಿ ಮಾಡಲಾದ ಖಾಸಗಿಕರಣವು ಸರ್ಕಾರಿ ವಲಯದಲ್ಲಿ ಸೃಷ್ಟಿಯಾಗುತಿದ್ದ 2% ಉದ್ಯೋಗಗಳನ್ನು 0.3 % ಗೆ ತಂದು ನಿಲ್ಲಿಸಿದೆ, ಯಾವ ಉದ್ಯೋಗವು ಆರ್ಥಿಕ ಸ್ವಾವಲಂಬನೆ ಮತ್ತು ‌ಸ್ವಾಭಿಮಾನ ತಂದು ಕೊಡುತಿತ್ತೋ ಆ ಉದ್ಯೋಗದ ಜೊತೆಗೆ ನಮ್ಮ ಶೈಕ್ಷಣಿಕ ಹಕ್ಕನ್ನು ಮತ್ತೆ Creamy Layer ಎಂಬ ಭೂತದ ಹೆಸರಿನಲ್ಲಿ ಕಸಿಯುವುದು ಎಷ್ಟು ಸರಿ ‘You Honour ?

You cannot copy content of this page

Exit mobile version