ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಹರಿದಾಡಿದ್ದ ವಿಡಿಯೋಗಳು ಕೃತಕ ಬುದ್ಧಿಮತ್ತೆ (AI) ಸೃಷ್ಟಿಯಲ್ಲ, ನಿಜವಾದವುಗಳೇ ಎಂದು ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಈ ಹಿಂದೆ ವೈರಲ್ ಆದ ವಿಡಿಯೋಗಳು ತಮ್ಮ ತೇಜೋವಧೆಗೆ ಎಐ ಮೂಲಕ ಸೃಷ್ಟಿಸಲಾಗಿದೆ ಎಂದು ರಾಮಚಂದ್ರ ರಾವ್ ಆರೋಪಿಸಿದ್ದರು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಜ್ಞರು ಸುಮಾರು 100ಕ್ಕೂ ಹೆಚ್ಚು ಪುಟಗಳ ಸಮಗ್ರ ವರದಿಯಲ್ಲಿ ವಿಡಿಯೋಗಳ ನೈಜತೆಯನ್ನು ದೃಢಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
2016-17ರಲ್ಲಿ ಬೆಳಗಾವಿ ವಲಯ ಐಜಿಪಿ ಆಗಿದ್ದ ಅವಧಿಯಲ್ಲಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಬಂಧಿತ ಸಿಬ್ಬಂದಿಯಿಂದ ಹೇಳಿಕೆಗಳನ್ನು ಕೂಡ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಇದಲ್ಲದೆ, ವಿಡಿಯೋ ಬೆಳಕಿಗೆ ಬಂದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳೆಯರು ನಾಪತ್ತೆಯಾಗಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ. ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ, ಡಿಪಿಎಆರ್‌ನಿಂದ ರಾಮಚಂದ್ರ ರಾವ್ ಅವರಿಗೆ ನೋಟಿಸ್ ಜಾರಿಯಾಗಿದ್ದು, ಮೇ 31ರಂದು ನಿವೃತ್ತಿಗೆ ಸಜ್ಜಾಗಿರುವ ಅವರಿಗೆ ಕಾನೂನು ಸಂಕಷ್ಟ ಗಂಭೀರವಾಗುವ ಸಾಧ್ಯತೆ ಇದೆ.
