ಅರಸೀಕೆರೆ : ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ವರ್ಗಕ್ಕೆ ಸೀಮಿತವಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಸಂವಿಧಾನ ರಚಿಸಿದ್ದಾರೆ ಎಂದು ಶಾಸಕ ಕೆಎಂ ಶಿವಲಿಂಗೇಗೌಡರು ಹೇಳಿದರು.
ತಾಲೂಕು ಕಂದಾಯ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮತ್ತು ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾವ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಸಕ ಶಿವಲಿಂಗೇಗೌಡರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಹಾಕಿದರು ಎಂದರು. ದೀನ ದಲಿತರ, ಶೋಷಿತರ ಹಾಗೂ ಹಿಂದುಳಿದವರ ಏಳಿಗೆಗಾಗಿ ಜೀವನವನ್ನೇ ಸಮರ್ಪಿಸಿ, ಎಲ್ಲರಿಗೂ ಸಮಾನ ಕಾನೂನು ಎಂಬ ತತ್ವವನ್ನು ಜಾರಿಗೊಳಿಸಿದರು ಎಂದು ಹೇಳಿದರು.
ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ವ್ಯವಸ್ಥೆ ರೂಪಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದು, ಕಾರ್ಮಿಕರ ಹಕ್ಕುಗಳು, ಮಹಿಳಾ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು. ಕಾರ್ಯಕ್ರಮದಲ್ಲಿ ದಂಡಾಧಿಕಾರಿ ಸಂತೋಷ್ ಕುಮಾರ್, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಡಿವೈಎಸ್ಪಿ ಗೋಪಿ, ಸಮಾಜ ಕಲ್ಯಾಣ ಇಲಾಖೆಯ ಪರಮಶಿವಮೂರ್ತಿ, ವೆಂಕಟೇಶ್ ಶೆಟ್ಟಿ, ಧರ್ಮಶೇಖರ್, ಮೆಟ್ರೋ ಬಾಬು, ಗಂಗಣ್ಣ, ಮೋಹನ್ ಕುಮಾರ್, ಜಯಣ್ಣ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
