Home ಬೆಂಗಳೂರು ಜಿಬಿಎ 5 ಪಾಲಿಕೆಗಳಿಗೆ ಕರಡು ವಾರ್ಡ್‌ ಮೀಸಲಾತಿ ಪ್ರಕಟ: ಏಪ್ರಿಲ್‌–ಮೇನಲ್ಲಿ ಚುನಾವಣೆ ಸಾಧ್ಯತೆ

ಜಿಬಿಎ 5 ಪಾಲಿಕೆಗಳಿಗೆ ಕರಡು ವಾರ್ಡ್‌ ಮೀಸಲಾತಿ ಪ್ರಕಟ: ಏಪ್ರಿಲ್‌–ಮೇನಲ್ಲಿ ಚುನಾವಣೆ ಸಾಧ್ಯತೆ

0

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿನ ಹೊಸದಾಗಿ ರಚನೆಯಾದ ಐದು ನಗರ ಪಾಲಿಕೆಗಳ ವಾರ್ಡ್‌ಗಳಿಗೆ ಕರಡು ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಈ ಕುರಿತಾಗಿ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಸೆಕ್ಷನ್‌ 29ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು, 2011ರ ಜನಗಣತಿ ಆಧಾರದಲ್ಲಿ ವಾರ್ಡ್‌ವಾರು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ‘ಅ’, ಹಿಂದುಳಿದ ವರ್ಗ ‘ಬಿ’ ಹಾಗೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಅನುಪಾತದಂತೆ ವಿಂಗಡಿಸಲಾಗಿದೆ.

ಕಳೆದ ಡಿಸೆಂಬರ್‌ 19ರಂದು ಸರ್ಕಾರ ಮೀಸಲಾತಿ ನಿಗದಿಗೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟಿಸಿತ್ತು. ಅದರ ಅನುಸಾರವಾಗಿ ಸಿದ್ಧಗೊಂಡ ಕರಡು ಪಟ್ಟಿಗೆ ಈಗ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಸುಪ್ರೀಂ ಕೋರ್ಟ್‌ಗೆ ಮಾಹಿತಿ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಜನವರಿ 12ರಂದು ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಮೀಸಲಾತಿ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಉದ್ದೇಶದಿಂದ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಆಕ್ಷೇಪಣೆ ಸಲ್ಲಿಕೆ
ವಾರ್ಡ್‌ವಾರು ಮೀಸಲಾತಿಯಿಂದ ಅಸಮಾಧಾನಗೊಂಡವರು ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಜನವರಿ 23ರೊಳಗೆ ಸಲ್ಲಿಸಬಹುದು.
ವಿಳಾಸ: ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ–436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು.
ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಲಾಗುವುದು.

ಏಪ್ರಿಲ್‌–ಮೇನಲ್ಲಿ ಚುನಾವಣೆ?
ಐದು ನಗರ ಪಾಲಿಕೆಗಳ ಚುನಾವಣೆ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುವವರೆಗೆ ಕಾಯುತ್ತಿದ್ದ ಆಕಾಂಕ್ಷಿಗಳು ಇದೀಗ ಚಟುವಟಿಕೆಗಳನ್ನು ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಚಲನವಲನ ಗರಿಗೆದರಿದೆ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳು ಪಕ್ಷಗಳ ಟಿಕೆಟ್‌ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.

ಐದು ಪಾಲಿಕೆಗಳ ಸಂಕ್ಷಿಪ್ತ ಮೀಸಲಾತಿ ವಿವರ
ಪೂರ್ವ ನಗರ ಪಾಲಿಕೆ: 50 ವಾರ್ಡ್‌
ದಕ್ಷಿಣ ನಗರ ಪಾಲಿಕೆ: 72 ವಾರ್ಡ್‌
ಕೇಂದ್ರ ನಗರ ಪಾಲಿಕೆ: 63 ವಾರ್ಡ್‌
ಉತ್ತರ ನಗರ ಪಾಲಿಕೆ: 72 ವಾರ್ಡ್‌
ಪಶ್ಚಿಮ ನಗರ ಪಾಲಿಕೆ: 112 ವಾರ್ಡ್‌

ಪ್ರತಿ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗಗಳಿಗೆ ಮಹಿಳಾ ಮೀಸಲಾತಿಯೊಂದಿಗೆ ಅನುಪಾತದಂತೆ ಸ್ಥಾನಗಳನ್ನು ವಿಂಗಡಿಸಲಾಗಿದೆ.

You cannot copy content of this page

Exit mobile version