Wednesday, August 27, 2025

ಸತ್ಯ | ನ್ಯಾಯ |ಧರ್ಮ

ಕನಸುಗಳೆಂದರೆ ಮಾರುಕಟ್ಟೆಯ ಜಾಹಿರಾತಿನಂತೆ

ಸಂಘಮಿತ್ರೆ ನಾಗರಘಟ್ಟ

ಕಾಲ ಚಕ್ರ ಆಗಿನ್ನು 1999- 2001 ರ ಆಸುಪಾಸಿನಲ್ಲಿತ್ತು. ಈ ಆತ್ಮ ರತಿ ಅನ್ನೋದು ನನ್ನನ್ನು ಆಗಿನಿಂದಲೇ ಕಾಡುತ್ತಿತ್ತು. ಅಪ್ಪ ತಂದಿದ್ದ ಕೊಡಕ್ ಕ್ಯಾಮರಾದ ತುಂಬೆಲ್ಲಾ ನನ್ನ ಚಿತ್ರದ್ದೆ ರೀಲ್ ಗಳು. ಅಪ್ಪ ಗೋಡೆಗೆ ಬಿಡಿಸಿದ್ದ ರೇಖಾಚಿತ್ರಗಳು , ಅಮ್ಮ ಹಬ್ಬಿಸಿದ್ದ ಎಲೆ ಬಳ್ಳಿಗಳು ಅಟ್ಟದ ಮೇಲೆ ಇರಿಸಿದ ನನ್ನ ಆಟಿಕೆಗಳು – ಇಷ್ಟೇ ಸಾಕಾಗಿತ್ತು ದಿನಕ್ಕೊಂದು ಫೋಟೋ ಶೂಟ್ ಮಾಡಲು. ಆಗ ನನ್ನ ಬಳಿ ಒಂದು ನೀಲಿ ಪ್ಲಾಸ್ಟಿಕ್ ಕುರ್ಚಿ ಇತ್ತು ಫ್ರಾಕ್ ತೊಟ್ಟು ಬಾಯ್ ಕಟ್ ಮಾಡಿಸಿಕೊಂಡಿದ್ದ ನಾನು ಕಾಲ್ಮೇಲೆ ಕಾಲು ಹಾಕಿ ದೊಡ್ಡ ಸ್ಟೀಲ್ ಲೋಟದಲ್ಲಿ ಅಮ್ಮ ಕಾಯಿಸಿಕೊಟ್ಟ ಕಾಫಿಯನ್ನು ಒಂದೇ ಕೈಯಲ್ಲಿ ಹಿಡಿದು ಕುಡಿಯುತ್ತಿದ್ದೆ.

ಹಾಗೇ ಪಕ್ಕದ ಕೋಣೆಯಲ್ಲಿ ಬುಕ್ಸ್ರ್ಯಾಕ್ ನ ಪಕ್ಕ ಪ್ಯಾಂಟು ಶರ್ಟು ತೊಟ್ಟು ಪೋಟೋ ತೆಗೆಸಿಕೊಳ್ಳಲು ನಿಲ್ಲುತ್ತಿದ್ದೆ . ಕೆಲವೊಮ್ಮೆ ಬಾಲ ನಟಿಯಂತೆ ಅಮ್ಮನ ದುಪ್ಪಟ ಹಿಡಿದು ಪೋಸ್ ಕೊಡುತ್ತಿದ್ದೆ.ಇನ್ನು ಗಿಡಗಳ ಮಧ್ಯೆ ಚೇರ್ ಹಾಕಿಕೊಂಡು ಕೂರೋದು. ಪುಟ್ಟ ಕಿತ್ತಳೆ ಹಣ್ಣನ್ನು ತೂಕ ಕಾಣದ ಕೈಯಲ್ಲಿ ಹಿಡಿಯುತ್ತಾ, ಮನೆ ಮುಂದಿನ ಜಗುಲಿ ಮೇಲೆ ನನ್ನದೇ ನೃತ್ಯ ಸಂಯೋಜನೆಯ ಭಂಗಿ, ಇನ್ನೊಂದು ದಿನ ಕೊರಳಲ್ಲಿ ಅಪ್ಪ ತಂದಿದ್ದ ಮಣಿ ಸರ ಧರಿಸಿ ತಟ್ಟೆಯ ತುಂಬಾ ಮೊಸರು ಅನ್ನ ಹಾಕಿಸಿಕೊಂಡು ಮುಖ ಮೊಣಕೈ ಗೆ ಮೆತ್ತಿಕೊಂಡು ಚಪ್ಪರಿಸುತ್ತಿದ್ದೆ.


ಹೀಗೆ ನನ್ನ ಬಾಲ್ಯದ ಆಲ್ಬಂ ತೆರೆದು ನೋಡಿದರೆ ಒಂದೊಂದು ಚಿತ್ರವು ಹಲವು ಕನಸುಗಳ ಬೆನ್ನೇರಿದ್ದವು. ಒಮ್ಮೆ ಡಾಕ್ಟರ್, ಬರಹಗಾರ್ತಿ , ಬ್ರಾಂಡ್ ಮಾಡೆಲ್ , ಗಾಯಕಿ, ಡ್ಯಾನ್ಸರ್, ಆಕ್ಟರ್ , ಟೀಚರ್, ಲೀಡರ್ ಹೀಗೆ ಸಾವಿರ ಕನಸುಗಳ ಹೊತ್ತಿದ್ದ ಹುಡುಗಿ ನಾನಾಗಿದ್ದೆ. ಹೀಗೆ ಪುಟ್ಟವಳಿದ್ದಾಗ ನಮ್ಮ ರಹಮತ್ ತರೀಕೆರೆ ಸರ್ ಸಿಕ್ಕಿದ್ದಾಗ ಅವರ ಪ್ರಶ್ನೆ “ ಮಿತ್ರ ನೀ ದೊಡ್ಡವಳಾದಾಗ ಎನ್ಕೆ ತರಹ ಕವಿ ಆಗ್ತಿಯೇನು” ಎಂದಿದ್ದರು. ತಕ್ಷಣಕ್ಕೆ ನನ್ನ ಉತ್ತರ ಇಲ್ಲ ಅಂಕಲ್ ನನಗೆ ಈ ಕವಿಗಳೆಂದ್ರೆ ಆಗಲ್ಲ‌ ಎಂದವಳೆ ಒಳಗೆ ಓಡಿ ಹೋಗಿ ನನ್ನ ಡೈರಿ ತೆಗೆದುಕೊಂಡು ನಾನೇ ಬರೆದ ಚುಟುಕನ್ನು ಓದಿದೆ ಅದರ ಸಾಲುಗಳು ಹೀಗಿದ್ದವು
ಮೊಲಕ್ಕೆ ಬೇಕು ಹೊಲ
ಹೊಲಕ್ಕೆ ಬೇಕು ನೆಲ
ನೆಲಕ್ಕೆ ಬೇಕು ಜಲ

ಹನುಮನಿಗೆ ಇರುವುದು ಬಾಲ
ಆದರವನಿಗಿರಬೇಕು ಬಲ

ತರೀಕೆರೆ ಅಂಕಲ್ ಅವರ ರಿಯ್ಯಾಕ್ಷನ್ ಇನ್ನು ಮನಸ್ಸಿನ ಕ್ಯಾನ್ವಾಸ್ ನಲ್ಲಿ ಹಾಗೇ ಉಳಿದಿದೆ. ಹೀಗೆ ಬಾಲ್ಯದಲ್ಲೇ ಮಕ್ಕಳಿಗೆ ಮುಂದೇನಾಗುವೆ ? ನೀನು ನಾಟಕಕ್ಕೆ ಹೋಗಬೇಡ , ಗಣಿತ ಸರಿಯಾಗಿ ಕಲಿ, ಚಿತ್ರ ಬಿಡಿಸಲು ಕ್ಲಾಸ್ ಗೆ ಸೇರಿಕೋ , ಕೀಬೋರ್ಡ್ ಕಲಿ, ಡಾನ್ಸ್ ಕ್ಲಾಸ್ ಗೆ , ಅಬಾಕಸ್ ಕ್ಲಾಸ್ , ಸಂಗೀತ ಕ್ಲಾಸ್ ಹೀಗೆ ಕನಸು ಎಂದರೇನೆಂಬ ಪರಿಕಲ್ಪನೆ ಯೇ ಇಲ್ಲದ ವಯಸ್ಸಿನಲ್ಲಿ ಮಕ್ಕಳಿಗೆ ಸ್ವತಃ ಅನ್ವೇಷಣೆ ಗಾಗಿ ಕೆಲ ಕಾಲ ಬಿಟ್ಟುಬಿಡಬೇಕು. ಈ ಕನಸುಗಳು ಮನಸ್ಸಿನ ಹಾಗೇ ನಿರ್ದಿಷ್ಟ ಕನಸುಗಳು ಹುಟ್ಟುವ ತನಕ ಅವುಗಳನ್ನು ಮಾಗಲು ಬಿಡಬೇಕು . ಹೊರತಾಗಿ ನೀನು ನಾನು ಸಾಧಿಸಲಾಗದ ಕನಸಿನ ಹಾದಿಯ ತುಳಿಯಲೇಬೇಕು. ಅಥವಾ ನಮ್ಮಿಷ್ಟದಂತೆ ನಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಹೆಜ್ಜೆ ಊರು ಎಂದು ಒತ್ತಾಯ ಮಾಡಿದರೆ ಮುಂದೊಂದು ದಿನ ನಮ್ಮ ಮಕ್ಕಳ ಕನಸುಗಳಿಗೆ ಲಗಾಮು ಹಾಕಿ ಯಾವ ದಿಕ್ಕಿನಲ್ಲೂ ಸಾಗದಂತೆ ಹಿಡಿದಿಡುವ ಘೋರ ಅಪರಾಧ ವನ್ನೇ ಎಸೆಯುವ ಸಮಯ ಹುಟ್ಟಬಹುದು.

ಈ ಕಾರಣದಿಂದಲೇ ಮಕ್ಕಳು ಹಾದಿತಪ್ಪುತ್ತಿರುವುದು. ಕನಸು ಕಾಣಲೂ ಹೆದರುತ್ತಿರುವುದು. ಖಲೀಲ್ ಗಿಬ್ರಾನ್ ಹೇಳುವಂತೆ ನಮ್ಮ ಮಕ್ಕಳು ನಮ್ಮ ಮಕ್ಕಳಲ್ಲ .

Related Articles

ಇತ್ತೀಚಿನ ಸುದ್ದಿಗಳು

You cannot copy content of this page