Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಿಹಿ ತಿನಿಸುಗಳನ್ನು ತಿನ್ನಬಾರದು ಎಂದುಕೊಂಡರೂ ತಿನ್ನುತ್ತಿದ್ದೀರಾ? ಇದರ ನಿಯಂತ್ರಣ ಹೇಗೆ?

ಎಲ್ಲರಿಗೂ ಅವರವರ ಆರೋಗ್ಯದ ಕುರಿತು ಕಾಳಜಿಯಿರುತ್ತದೆ. ನಾನು ಸದಾ ಆರೋಗ್ಯಕರ ಆಹಾರವನ್ನೇ ತಿನ್ನಬೇಕು ಎನ್ನುವುದು ಸಹ ಎಲ್ಲರ ಬಯಕೆಯಾಗಿರುತ್ತದೆ. ಹೊಸ ವರ್ಷ, ಹುಟ್ಟಿದ ದಿನ ಈ ಕುರಿತು ನಿರ್ಧಾರಗಳನ್ನು ಸಹ ತೆಗೆದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಸಿಹಿ, ಉಪ್ಪು ಅಥವಾ ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಿನ್ನುವ ಬಯಕೆಯು ನಮ್ಮ ನಿರ್ಧಾರಗಳನ್ನು ಮಣ್ಣುಪಾಲು ಮಾಡಿಬಿಡುತ್ತವೆ.

ನಾವು ನಮ್ಮ ಆರೋಗ್ಯ ಅಭ್ಯಾಸವನ್ನು ಸುಧಾರಿಸಲು ಅಥವಾ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅಂಶವಿರುವ ಆಹಾರವನ್ನೇ ಹೆಚ್ಚು ಹೆಚ್ಚು ಏಕೆ ಬಯಸುತ್ತೇವೆ? ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ?

ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳನ್ನು ನಮಗೆ ತಿನ್ನಬೇಕೆನ್ನಿಸಲು ಸಾಕಷ್ಟು ಕಾರಣಗಳಿರುತ್ತವೆ. ಆದರೆ ಈ ನಾಲ್ಕು ಕಾರಣಗಳು ಎಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆ. ಅವು ಯಾವುವು ಎನ್ನುವುದನ್ನು ಮೊದಲಿಗೆ ತಿಳಿಯೋಣ.

  1. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು

ಪ್ರತಿಯೊಂದು ಜೀವಿಯಲ್ಲೂ ಸಕ್ಕರೆಯೆನ್ನುವುದು ಶಕ್ತಿಯ ಪ್ರಮುಖ ಮೂಲ. ಇದರ ರುಚಿಯು ಪ್ರಾಥಮಿಕ ಇಂದ್ರಿಯ ಅನುಭವಗಳಲ್ಲಿ ಒಂದು.

ನಾಲಗೆಯ ಮೇಲೆ ರುಚಿಯನ್ನು ಗ್ರಹಿಸಲು ಯಾವುದೇ ನಿರ್ದಿಷ್ಟ ಗ್ರಾಹಕಗಳಿಲ್ಲವಾದರೂ ನಾಲಗೆ ಸಕ್ಕರೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತದೆ.

ಸಕ್ಕರೆ ಕರುಳನ್ನು ತಲುಪಿದಾಗ, ಸಕ್ಕರೆಗೆ ಪ್ರತಿಕ್ರಿಯಿಸಲು ನಮ್ಮ ನರಕೋಶಗಳು ಸಕ್ರಿಯಗೊಳ್ಳುತ್ತವೆ, ಇದು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ.

ದೀರ್ಘಾವಧಿಯಲ್ಲಿ, ಆಹಾರದಲ್ಲಿ ಹೆಚ್ಚಿನ ಸಕ್ಕರೆಯನ್ನು ಸೇವಿಸಿದರೆ,  ಅದು ಮನಸ್ಥಿತಿ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕರುಳಿನ ಉರಿಯೂತವೂ ಉಂಟಾಗಬಹುದು ಎಂದು ಸಂಶೋಧನೆ ಹೇಳುತ್ತದೆ.

 ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಜನರು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಏರಿಕೆ ಮತ್ತು ಇಳಿಕೆಯನ್ನು ಗಮನಿಸುತ್ತಾರೆ.

ರಕ್ತದಲ್ಲಿನ ಸಕ್ಕರೆ ಮಟ್ಟವು ತೀವ್ರವಾಗಿ ಕುಸಿದಾಗ,  ದೇಹವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ರೀತಿಯ ತ್ವರಿತವಾಗಿ ಶಕ್ತಿಯನ್ನು ಒದಗಿಸುವ ಆಹಾರಗಳನ್ನು ಹುಡುಕುಕತೊಡಗುತ್ತವೆ. ಮತ್ತು ಆ ಮೂಲಕ ದೇಹ ಸುಲಭವಾಗಿ ಶಕ್ತಿಯನ್ನು ಪಡೆದುಕೊಳ್ಳಲು ನೋಡುತ್ತದೆ.

2. ಡೋಪಮೈನ್ ಮತ್ತು ಸಿರೊಟೋನಿನ್ ಸೇವನೆ

ಡೋಪಮೈನ್‌ ರೀತಿಯ ಕೆಲವು ನ್ಯೂರೋ ಟ್ರಾನ್ಸ್‌ಮೀಟರುಗಳು ಮೆದುಳಿನ ರಿವಾರ್ಡ್ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡುತ್ತವೆ. ಇವು ನಮಗೆ ಉತ್ತೇಜಕಗಳಾಗಿ ಕೆಲಸ ಮಾಡುತ್ತವೆ.

ಸಕ್ಕರೆ ಮತ್ತು ಕಾರ್ಬೊಹೈಡ್ರೇಟ್‌ ಅಂಶಗಳಿರುವ ಆಹಾರಗಳು ಡೋಪಮೈನ್‌ ಬಿಡುಗಡೆ ಮಾಡಿ ನಮ್ಮೊಳಗೆ ಆನಂದವನ್ನು ಸೃಷ್ಟಿಸುತ್ತದೆ. ಇದು ಅವುಗಳ ಸೇವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ದೇಹದಲ್ಲಿ ಆಹ್ಲಾದವನ್ನು ಉಂಟುಮಾಡಬಲ್ಲ ಹಾರ್ಮೋನ್ ಎಂದು ಕರೆಯಲ್ಪಡುವ ಸೆರೊಟೋನಿನ್, ಹಸಿವನ್ನು ನಿಯಂತ್ರಿಸುತ್ತದೆ ಮತ್ತು ದೇಹದ ಇತರ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಿರೊಟೋನಿನ್ ನಲ್ಲಿನ ನೈಸರ್ಗಿಕ ಬದಲಾವಣೆಗಳು ಮನಸ್ಥಿತಿ, ಶಕ್ತಿಯ ಮಟ್ಟಗಳು ಮತ್ತು ಗಮನದಲ್ಲಿನ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತವೆ.

ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಮಧ್ಯಾಹ್ನ ಸೇವಿಸಬಹುದು. ಆಹಾರವು ಆರೋಗ್ಯಕರವಾಗಿಲ್ಲದಿದ್ದರೆ,  ನೀವು ಕರುಳಿನ ಉರಿಯೂತ ಅಥವಾ ಇತರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

 ಇತ್ತೀಚಿನ ಸಂಶೋಧನೆಯು ಈ ಆಹಾರಗಳು ಮತ್ತು  ಒತ್ತಡ ಮತ್ತು  ಖಿನ್ನತೆಯ ಹೆಚ್ಚಳದ ನಡುವೆ ಸಂಬಂಧವಿದೆ ಎಂದು ಸೂಚಿಸಿವೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಕಾರ್ಬೋಹೈಡ್ರೇಟ್ ಭರಿತ ಆಹಾರವನ್ನು ಸೇವಿಸುತ್ತಾರೆ.

ಕಿರಿಕಿರಿ, ದಣಿವು, ಖಿನ್ನತೆ ಅಥವಾ ಕಾರ್ಬೋಹೈಡ್ರೇಟ್ ಅಂಶವಿರುವ ಆಹಾರವನ್ನು ತಿನ್ನಲು ಬಯಸುವುದು ಇವೆಲ್ಲವೂ ಋತುಚಕ್ರದ ಚಿಹ್ನೆಗಳಾಗಿವೆ ಮತ್ತು ಸಿರೊಟೋನಿನ್ ಮಟ್ಟದಲ್ಲಿನ ಇಳಿಕೆಗೆ ಸಂಬಂಧಿಸಿರಬಹುದು.

3. ಫ್ಲುಯಿಡ್ಸ್ ಕಡಿಮೆಯಾಗುವುದು, ರಕ್ತದಲ್ಲಿನ ಸಕ್ಕರೆ ಉಪ್ಪಿನ ಮಟ್ಟ ಕಡಿಮೆಯಾಗುವುದು

ಕೆಲವೊಮ್ಮೆ ನಮ್ಮ ದೇಹವು ತನ್ನೊಳಗೆ ಹೈಡ್ರೇಷನ್ ಅಥವಾ ಉಪ್ಪಿನ ಮಟ್ಟವನ್ನು ಕಡಿಮೆ ಮಾಡಲು ಬಯಸುತ್ತದೆ. ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವುದರಿಂದ ಇನ್ಸುಲಿನ್ ಮಟ್ಟವು ಕಡಿಮೆಯಾಗುತ್ತದೆ,  ಸೋಡಿಯಂ ಕಡಿಮೆಯಾಗುತ್ತದೆ ಮತ್ತು ನೀರಿನ ಧಾರಣ ಕಡಿಮೆಯಾಗುತ್ತದೆ.

ಕೀಟೋಜೆನಿಕ್ ಆಹಾರಗಳಂತಹ ಕಡಿಮೆ ಕಾರ್ಬೋಹೈಡ್ರೇಟ್ ಆಹಾರಗಳು  ‘ಕೀಟೋಸಿಸ್’ ಅನ್ನು ಪ್ರಚೋದಿಸುತ್ತವೆ, ಇದರ ಮೂಲಕ ದೇಹವು ಕೊಬ್ಬನ್ನು ತನ್ನ ಪ್ರಾಥಮಿಕ ಶಕ್ತಿಯ ಮೂಲವಾಗಿ ಬಳಸುತ್ತದೆ ಮತ್ತು ಕಾರ್ಬೋಹೈಡ್ರೇಟ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಕೀಟೋಸಿಸ್ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಫ್ಲುಯಿಡ್ ಮಟ್ಟ ಕಡಿಮೆಯಾಗುತ್ತದೆ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಹೆಚ್ಚು ಉಪ್ಪು ತಿನ್ನುವ ಬಯಕೆ ಉಂಟಾಗುತ್ತದೆ.

4. ಹೆಚ್ಚಿದ ಒತ್ತಡ ಅಥವಾ ಭಾವನಾತ್ಮಕ ಹಾನಿ

ಒತ್ತಡ, ಬೇಸರ ಮತ್ತು ಹೆಚ್ಚಿದ ಭಾವೋದ್ವೇಗ ಈ ಆಹಾರಗಳನ್ನು ತಿನ್ನಲು ಜನರನ್ನು ಪ್ರೋತ್ಸಾಹಿಸುತ್ತವೆ. ಈ ಕಾರಣದಿಂದಾಗಿ, ಒತ್ತಡದ ಹಾರ್ಮೋನುಗಳು ನಮ್ಮ ಹಸಿವು, ಹೊಟ್ಟೆ ತುಂಬಿದ ಭಾವನೆ ಮತ್ತು ಆಹಾರ ಆಯ್ಕೆಗಳ ಮೇಲೆ ಪರಿಣಾಮ ಬೀರಬಹುದು.

ಧೀರ್ಘ ಕಾಲದ ಒತ್ತಡ ಮತ್ತು ಹೆಚ್ಚಿನ ಕ್ಯಾಲೊರಿಯುಳ್ಳ ಆಹಾರ ಸೇರಿದಾಗ ಸಿಹಿಯ ಸೇವನೆ ಇನ್ನಷ್ಟು ಆಪ್ತವೆನ್ನಿಸುತ್ತದೆ.  ಒತ್ತಡವನ್ನು ಉಂಟುಮಾಡುವ ಹಾರ್ಮೋನ್ ಕಾರ್ಟಿಸೋಲ್ ನಿಮ್ಮನ್ನು ಸಿಹಿ ಆಹಾರವನ್ನು ತಿನ್ನುವಂತೆ ಮಾಡುತ್ತದೆ.

ಸಿಹಿ ಮತ್ತು ಕಾರ್ಬೋಹೈಡ್ರೇಟ್‌ ತಿನ್ನುವ ಬಯಕೆಯಾದಾಗ ಏನು ಮಾಡಬೇಕು?

ನಿಮಗೆ ಅಂತಹ ಬಯಕೆ ಮೂಡಿದಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಅದನ್ನು ನಿಯಂತ್ರಿಸಬಹುದು.

ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ನಿಮ್ಮ ಊಟದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಇರುವುದನ್ನು ಖಚಿತಪಡಿಸಿಕೊಳ್ಳಿ, ಇದು ನಿಮ್ಮ ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ ಮತ್ತು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತದೆ.

ವಯಸ್ಕರು ಪ್ರತಿ ಊಟದಲ್ಲಿ 20ರಿಂದ 40 ಗ್ರಾಂಗಳಷ್ಟು ಪ್ರೋಟಿನನ್ನು ಕಡ್ಡಾಯವಾಗಿ ಸೇವಿಸಬೇಕು. ವಿಶೇಷವಾಗಿ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ಪ್ರೋಟೀನ್‌ ಸಮೃದ್ಧವಾಗಿರಬೇಕು. ಸ್ನಾಯುಗಳ ಆರೋಗ್ಯಕ್ಕಾಗಿ ದೇಹದ ಪ್ರತಿ ಕೇಜಿ ತೂಕಕ್ಕೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ಪ್ರತಿದಿನ ಸೇವಿಸಬೇಕು.

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವ ಫೈಬರ್ ಭರಿತ ತರಕಾರಿಗಳು ಮತ್ತು  ಧಾನ್ಯಗಳನ್ನು ಸೇವಿಸಿ. ಉದಾಹರಣೆಗೆ, ಬ್ರೊಕೋಲಿ, ಕ್ವಿನೋವಾ, ಬ್ರೌನ್‌ ರೈಸ್, ಓಟ್ಸ್, ಬೀನ್ಸ್ ಇತ್ಯಾದಿ.

ಪ್ರಾಣಾಯಾಮ,  ಯೋಗ ಅಥವಾ ಆಳವಾದ ಉಸಿರಾಟದಂತಹ ಅಭ್ಯಾಸಗಳ ಮೂಲಕ ಒತ್ತಡದ ಮಟ್ಟವನ್ನು ನಿಯಂತ್ರಿಸಬೇಕು.

ಆಹಾರ ಪದಾರ್ಥಗಳ ಬಗ್ಗೆ ಗಮನ ಹರಿಸುವುದು, ನಿಧಾನವಾಗಿ ತಿನ್ನುವುದು ಮತ್ತು ದೇಹದ ಪ್ರತಿಕ್ರಿಯೆಗಳ ಅನುಭೂತಿ ಹೊಂದುವುದು ದೈನಂದಿನ ಕ್ಯಾಲೊರಿ ಸೇವನೆ, ಕಾರ್ಬೋಹೈಟ್ ತಿನ್ನುವ ಬಯಕೆ ಮತ್ತು ಒತ್ತಡದಿಂದ ಉಂಟಾಗುವ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ.

ನೀವು ಪ್ರತಿ ರಾತ್ರಿ ಏಳರಿಂದ ಎಂಟು ಗಂಟೆಗಳ ಕಾಲ ಮಲಗಬೇಕು. ದಿನಕ್ಕೆ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರೆ ಮಾಡಿ  . ನೀವು ಸರಿಯಾಗಿ ನಿದ್ರೆ ಮಾಡದಿದ್ದರೂ ಸಹ, ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು  ನಮ್ಮ ಹಸಿವು ಮತ್ತು ತಿನ್ನುವ ಬಯಕೆಯ ಮೇಲಿನ ನಿಯಂತ್ರಣವನ್ನು ನಾವು ಕಳೆದುಕೊಳ್ಳುತ್ತೇವೆ.

ನೀವು ಆರೋಗ್ಯಕರ ಆಹಾರವನ್ನು ಸೇವಿಸಲು ಅಥವಾ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿದಾಗ ಸಿಹಿತಿಂಡಿಗಳು, ಉಪ್ಪು ಮತ್ತು ಕಾರ್ಬೋಹೈಡ್ರೇಟ್ ಗಳಂತಹ ಆಹಾರವನ್ನು ತಿನ್ನುವ ಬಯಕೆಯನ್ನು ನಿವಾರಿಸುವುದು ದೊಡ್ಡ ಸವಾಲು.

ಈ ಪ್ರಯತ್ನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು,  ಆದರೆ ನೀವು ತಾಳ್ಮೆಯಿಂದಿರಬೇಕು. ಆಹಾರದ ಕುರಿತಾದ  ಸಾಂದರ್ಭಿಕ ಹಂಬಲಗಳು ಆಹಾರದ ವಿಷಯದಲ್ಲಿ ನಿಮ್ಮ ಯಶಸ್ಸನ್ನು ವ್ಯಾಖ್ಯಾನಿಸುವುದಿಲ್ಲ,  ಆದರೆ ಯಶಸ್ಸು  ಬಯಕೆಗಳನ್ನು ನಿರ್ವಹಿಸುವ ಮತ್ತು ಜಯಿಸುವ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

(ಲೇಖಕರು ಹ್ಯಾಲೆ ಒ’ನೀಲ್ ಬಾಂಡ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಮತ್ತು ಔಷಧ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು)

ಮೂಲ: BBC.COM

Related Articles

ಇತ್ತೀಚಿನ ಸುದ್ದಿಗಳು