ಬೆಂಗಳೂರು: ಆರಂಭಿಕ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ 101 ತಾಲೂಕುಗಳಲ್ಲಿ ಬೆಳೆ ಹಾಗೂ ಆರ್ಥಿಕ ನಷ್ಟ ಒಟ್ಟಾರೆ ಅಂದಾಜು 18,000 ಕೋಟಿಯಷ್ಟಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬುಧವಾರ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಖಾತೆಯನ್ನೂ ಹೊಂದಿರುವ ಪರಮೇಶ್ವರ್ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ನಿಯಮಗಳ ಅನ್ವಯ ವಿಪತ್ತು ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮೊದಲ ಅಧಿಕೃತ ಮನವಿ ಸಲ್ಲಿಸಲಿದೆ ಎಂದು ಹೇಳಿದರು. ನಷ್ಟದ ಸಮಗ್ರ ಮೌಲ್ಯಮಾಪನ ಪೂರ್ಣಗೊಂಡಂತೆ ಹೆಚ್ಚುವರಿ ಮನವಿಗಳನ್ನೂ ಸಲ್ಲಿಸಲಾಗುವುದು ಎಂದು ತಿಳಿಸಿದರು.2020ರ ಕೇಂದ್ರ ಸರ್ಕಾರದ ಬರ ನಿರ್ಧಾರ ಕೈಪಿಡಿಯಲ್ಲಿ ನಿಗದಿಪಡಿಸಿರುವ ಉಪಗ್ರಹ ಚಿತ್ರಗಳು, ಮಣ್ಣಿನ ತೇವಾಂಶ ಹಾಗೂ ಮಳೆ ಕೊರತೆಯ ಅವಧಿಯ ಮಾನದಂಡಗಳ ಆಧಾರದ ಮೇಲೆ 101 ತಾಲೂಕುಗಳನ್ನು ಈಗಾಗಲೇ ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾಗಿದೆ.
ಇನ್ನೂ 42 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದ್ದು, 24 ತಾಲೂಕುಗಳಲ್ಲಿ ಪರಿಶೀಲನೆ ಪೂರ್ಣಗೊಂಡಿದೆ. ಉಳಿದ 18 ತಾಲೂಕುಗಳಲ್ಲಿ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದರು.ಹಿಂದಿನ ಬರದ ಸಂದರ್ಭದಲ್ಲೂ ಕರ್ನಾಟಕವು ಕೇಂದ್ರದಿಂದ ಹೆಚ್ಚಿನ ನೆರವು ಕೋರಿತ್ತು. ಆದರೆ, ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ ಕೇವಲ 3,500 ಕೋಟಿ ರೂ. ನೆರವು ದೊರೆತಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ 72,000 ಕೋಟಿ ರೂ. ಕೃಷಿ ಸಾಲವನ್ನು ಮನ್ನಾ ಮಾಡಿತ್ತು. ಇದೇ ರೀತಿಯ ಸಾಲ ಮನ್ನಾಕ್ಕಾಗಿ ರಾಜ್ಯದ ಬಿಜೆಪಿ ನಾಯಕರು, ಸಂಸದರು ಸೇರಿದಂತೆ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ನೆರವು ಪಡೆಯಲಿ ಎಂದು ಸಲಹೆ ನೀಡಿದರು.
