“..ಎಲ್ಲಕ್ಕಿಂತ ಮೊದಲು.. ನಾನಿದ್ದೀನಿ. ನನ್ನ ಜೊತೆ ನೀನು ಮುಕ್ತವಾಗಿ ಮಾತಾಡಬಹುದು, ನಾನು ನಂಬ್ತೀನಿ ಅನ್ನೋ ಭಾವನೆ ಕೊಡೋದು ಮುಖ್ಯ. ಈ ಸಪೋರ್ಟ್ ಸಿಸ್ಟಂ ಮನೆಯಲ್ಲೇ ಇದ್ದರೆ ಇನ್ನೂ ಒಳ್ಳೆದು..” ಲೇಖಕಿ ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ
ಆತ್ಮಹತ್ಯೆ ಹೇಡಿಗಳು ಮಾಡೋ ಕೆಲಸ, ಇದಕ್ಕೆಲ್ಲ ಸಾವೇ ಪರಿಹಾರನಾ, ಸತ್ತು ಏನು ಸಾಧಿಸೋದಿದೆ, ಅದೆಲ್ಲಾ ಅಟೆನ್ಷನ್ ಸೀಕಿಂಗ್.. ಇಂಥಾ ಬೇಕಾದಷ್ಟು ಮಾತಾಡ್ತೀವಿ ನಾವೆಲ್ಲ. ಆದರೆ ಅಕ್ಕ ಪಕ್ಕದಲ್ಲಿ ಆತ್ಮಹತ್ಯೆಗಳ ಪ್ರಕರಣಗಳು ನಡಿತಾನೇ ಇರತ್ವೆ.
ಅವರೆಲ್ಲರೂ ಒಂದು ಸಲವಾದರೂ ನಮ್ಮಹಾಗೆಯೇ ಇಂಥಾ ದೊಡ್ಡ ದೊಡ್ಡ ಡೈಲಾಗ್ ಗಳನ್ನ ಮಾತಾಡಿಯೇ ಇರ್ತಾರೆ. ಕಂಫರ್ಟ್ ಜೋ಼ನ್ ನಲ್ಲಿ ಇದ್ದಷ್ಟು ದಿನವೂ ನಮಗೆ ಬೇರೆಯವರ ಬಗ್ಗೆ ಮಾತಾಡೋದು ಸುಲಭ. ಆದರೆ ಒಮ್ಮೆ ಅಲ್ಲಿಂದ ಹೊರಬಂದ ಮೇಲೆ ಲಕ್ಷಾಂತರ ರೂ ಸಾಲ ಬಿಡಿ, ಪ್ರೀತಿಸ್ತಿರೋ ಹುಡುಗ / ಹುಡುಗಿ ಬೇಗ ರಿಪ್ಲೈ ಮಾಡದೇ ಇದ್ದರೂ ಸತ್ತುಹೋಗಬೇಕು ಅನ್ನಿಸೋ ಮಟ್ಟಿಗೆ ತಲುಪಿರ್ತೀವಿ.
ಒಂದು ಮುಖ್ಯ ಕಾರಣ ನಮ್ಮ ಪೀಳಿಗೆಗೆ ಒಂದು ಸಪೋರ್ಟ್ ಸಿಸ್ಟಂ ಅನ್ನೋದು ಇಲ್ಲದಿರೋದು. ಏನಾದರೂ ಸಮಸ್ಯೆ ಆಗಿದೆಯಾ, ಹೇಳ್ಕೊಳೋ ವಾತಾವರಣ / ಮನುಷ್ಯರು ಮನೆಯಲ್ಲಿ ಇರೋದಿಲ್ಲ. ಕೆಲಸದ ಸ್ಥಳದಲ್ಲಿ ನಮ್ಮ ಸಮಸ್ಯೆ ಹೇಳಿಕೊಂಡ ಕೂಡಲೇ ಎಲ್ಲಿ ನಮ್ಮ ಸಣ್ಣ ತಪ್ಪನ್ನೂ ದೊಡ್ಡದಾಗಿಸಿ productivity ಕಡಿಮೆ ಅಂತಂದು ನಾಳೆ ಇರೋ ಕೆಲಸವೂ ಹೋದರೆ ಅನ್ನೋ ಆತಂಕ. ಇವತ್ತಿನ ಬೆಲೆಯೇರಿಕೆ ದಿನಗಳಲ್ಲಿ ಸಣ್ಣ ಸೇವಿಂಗ್ಸ್ ಕೂಡಾ ಮಾಡೋಕಾಗದ ಪರಿಸ್ಥಿತಿ. ಸಮಸ್ಯೆ ಬಂತಾ, ಯಾರಿಗೆ ಕಾಲ್ ಮಾಡೋದು ಅನ್ನೋದು ಸಹ ಗೊತ್ತಾಗದ ಅಸಹಾಯಕತೆ.
ನಮ್ಮ ಸುತ್ತಮುತ್ತ ಇರೋರಿಗೆ, ನಮ್ಮ ಪ್ರೀತಿ ಪಾತ್ರರಿಗೆ ಕನಿಷ್ಟ ಸಮಯ ಕಾಳಜಿ ಕೊಡೋಕಾಗದ ಮನಸ್ಥಿತಿಗೆ ನಾವೆಲ್ಲ ತಲುಪಿದ್ದೀವಿ. ನಿನ್ನ ಸಮಸ್ಯೆನೇ ಇಷ್ಟಿದೆ, ನಂದೂ ಹೇಳೋಕಾಗತ್ತಾ ಅನಿಸತ್ತೆ. ಅಥವಾ, ನಿಂದು ಒಂದು ಸಮಸ್ಯೆನಾ, ನನ್ನದು ಹತ್ತು ಸಮಸ್ಯೆ ಇದೆ ಅನ್ನೋವರೆಗೂ ತಲುಪಿದ್ದೀವಿ.
ನಮ್ಮವರ ಬದಲಾವಣೆಗಳನ್ನ ಗುರುತಿಸೋಕೂ ಸಮಯ ಇಲ್ಲ ನಮಗೆ. ನಮ್ಮ ನಿರ್ಲಕ್ಷ್ಯದ ಜೊತೆಗೆ ಅವರು ನಿಧಾನವಾಗಿ ಬದುಕಿನಿಂದ ದೂರ ಸರಿಯುತ್ತಲೇ ಇರುತ್ತಾರೆ, ಅವರ ಇಷ್ಟದ ಹವ್ಯಾಸಗಳು, ಆಸಕ್ತಿಗಳು, ಊಟ ತಿಂಡಿ, ರುಟೀನ್… ಎಲ್ಲದರಿಂದ ದೂರಾಗುತ್ತಿರುತ್ತಾರೆ. ನಾವು ನೀನು ಬದಲಾಗಿದ್ದೀ, ಮೊದಲಿನ ಹಾಗಿಲ್ಲ, ಸುಮ್ನೆ ತಲೆ ಕೆಡಿಸ್ಕೊಬೇಡ, ಓವರ್ ಥಿಂಕ್ ಮಾಡೋದು ಬಿಡು ಎನ್ನುವ ಅದೇ ಮೂರು ಮತ್ತೊಂದು ಮಾತುಗಳನ್ನ ಆಡ್ತಾ ಇರೋದಿಲ್ಲ. ಆ ವ್ಯಕ್ತಿ ನಮ್ಮ ಮಾತು ಕೇಳಿದರೂ ಬದಲಾಗಿಲ್ಲ, ಬೇರೇನಾದರೂ ಮಾಡೋಣ ಅಂತ ನಾವು ಯೋಚಿಸೋ ಗೊಡವೆಗೂ ಹೋಗೋದಿಲ್ಲ.
ಹತ್ತು ನಿಮಿಷ ಕೂತು ಯೋಚಿಸಿದರೆ, ನಾವು ಇವತ್ತು ವೀಕ್ ಅಂದ ವ್ಯಕ್ತಿ ಈ ಮೊದಲು ನಮಗಿಂತ ಹೆಚ್ಚಿನ ಅಂತ:ಶಕ್ತಿ ತೋರಿರುತ್ತಾರೆ. ನಾನು ಯಾವುದಕ್ಕೂ ತಲೆನೇ ಕೆಡಿಸ್ಕೊಳಲ್ಲಪ್ಪ ಅಂತ ಸ್ಟೇಟಸ್, ಸ್ಟೋರಿಲಿ ಏನೇನೋ ಕೋಟ್ ಹಾಕೋ ನಾವು ಅತ್ಯಂತ ಹೇಡಿಗಳಾಗಿ ವರ್ತಿಸಿರೋ ಘಟನೆಗಳೂ ನಡೆದಿರುತ್ತವೆ.
ಸತ್ತ ಮೇಲೆ ಮಾತಾಡೋರದ್ದು ಇನ್ನೊಂಥರಾ ಬಾಯಿಚಪಲ. ಅಯ್ಯೋ ಹಿಂದಿನ ದಿನ ಮಾತಾಡಿದ್ದ, ಮೀಟ್ ಮಾಡಿದ್ದೆ, ಗೊತ್ತೇ ಆಗಲಿಲ್ಲ, ನಂಗೆ ಒಂದು ಮಾತಾದ್ರೂ ಹೇಳಬಾರ್ದಿತ್ತಾ ಅವಳು. ಎಷ್ಟು ಹೇಳ್ದೆ ತಲೆ ಕೆಡಿಸ್ಕೊಬೇಡ ಅಂತ… ಇದು ಮುಂದುವರಿತಾನೇ ಇರತ್ತೆ.
ಆದರೆ, ನಮಗೆ ಗೊತ್ತೇ ಆಗಿರೋದಿಲ್ವಾ? ತಪ್ಪದೇ 500 ರೂ ಪೆಟ್ರೋಲ್ ಹಾಕಿಸೋ ಸ್ನೇಹಿತ 150 ಅಂತ ಹಳೆ ಮಡಚಿದ ನೋಟು ಕೊಡೋದು? ಸದಾ ಲವಲವಿಕೆಯ ಗೆಳತಿ ಜನಜಂಗುಳಿಯಲ್ಲೇ ಇದ್ದರೂ ಎಲ್ಲೋ ನೋಡೋದು, ಇದ್ದಕ್ಕಿದ್ದಂತೆ ಸಂಬಂಧವೇ ಇಲ್ಲದಷ್ಟು ಜೋಕ್ ಮಾಡಿ ನಗೋದು? ಅವರ ದಿನಚರಿಯೇ ಅಲ್ಲ ಅನ್ನುವಂತೆ ಸಣ್ಣದಾಗಿ ಬದಲಾಗೋದು ದೂರದವರಿಗೆ ಗೊತ್ತಾಗದೇ ಇರಬಹುದು. ಹತ್ತಿರದವರಿಗೆ ಗೊತ್ತಾಗೋದಿಲ್ವಾ?
ಎಷ್ಟೋ ಸಲ ನಮ್ಮ ಸ್ನೇಹಿತರೇ ಬೆಳಿಗ್ಗೆ ಎದ್ದಾಗಲೇ ಯಾಕಾದರೂ ಎದ್ದೆನೋ ಅಂದುಕೊಂಡಿರ್ತಾರೆ. ನಾವೇನಾದ್ರೂ ತಲೆ ಕೆಡಿಸ್ಕೊತೀವಾ?. We ALWAYS Ignore.
ಹಾಗಂತ ಎದ್ದು ಬಿದ್ದು ಅವರ ಹಿಂದೆನೇ ಇದ್ದು ದುಡ್ಡು ಕಾಸು ಖರ್ಚು ಮಾಡಿ ಇನ್ನೇನೋ ಮಾಡಲಿ ಅಂತಲ್ಲ. Are you fine? Are you Okay? ಏನಾದರೂ ಹೇಳ್ಕೋ ಅನ್ನೋ ಸೌಜನ್ಯ ಆದರೂ ಇರಬೇಕು. ಕೆಲವೊಮ್ಮೆ ಅಪರಿಚಿತರು ಕೂಡ ಅಂತಹ ದುರ್ಬಲ ಗಳಿಗೆಗಳಲ್ಲಿ ಮಾತಾಡಿದಾಗ ಎಷ್ಟೋ ನೆಮ್ಮದಿ ಅನಿಸತ್ತೆ.
Again…ಮಾತಾಡೋದು ಅಂದರೆ, ಕೇಳಿಸಿಕೊಳ್ಳೋದು. ಅವರು ಒಂದು ಹೇಳಿದ ಕೂಡಲೇ ನಿಮ್ಮ ಬದುಕಿನ ಸಾಧನೆಯೆಲ್ಲ ಅವರಿಗೆ ಹೇಳೋದು ಅಂತಲ್ಲ.
ಆತ್ಮಹತ್ಯೆಯಂತಹ ವಿಷಯಗಳಿಗೆ ವೈದ್ಯಕೀಯ ನೆರವು ಖಂಡಿತಾ ಬೇಕು. Professional Help ತೊಗೊಳಿ ಅನ್ನೋದು ತುಂಬಾ ಸುಲಭ. ಆದರೆ ಗಂಟೆಗೆ ಸಾವಿರಾರು ರೂ ಚಾರ್ಜ್ ಮಾಡಿ, ವರ್ಷ ಆದರೂ ಏನಾಗಿದೆ ಅಂತ ಹೇಳದ ವೈದ್ಯರು, ಅವರೇ ಜಡ್ಜ್ ಮೆಂಟಲ್ ಆಗಿ, ಒರಟಾಗಿ ಮಾತಾಡೋ ಅಂಥೋರು, ತಮ್ಮ ಬಳಿ ಬರೀ ಎಲ್ಲಾ ಕ್ಲೈಂಟ್ ಗಳ ಕಥೆನ ವಿದ್ಯಾರ್ಥಿಗಳಿಗೋ ಇನ್ಯಾರಿಗೋ ಹೆಸರು ಸಮೇತ ವಿವರ ಹೇಳೋ ವೈದ್ಯರುಗಳಿದ್ದಾಗ ಒಂದೇ ಸಲ ನಂಬಿ ಹೋಗೋದು ಕೂಡ ಕಷ್ಟವೇ. ಆ ನಿಟ್ಟಿನಲ್ಲಿ ಒಂದೆರಡು ಒಪಿನಿಯನ್ ತೊಗೊಂಡು ಮುಂದುವರೆಸೋದು ಉತ್ತಮ.
ಎಲ್ಲಕ್ಕಿಂತ ಮೊದಲು.. ನಾನಿದೀನಿ. ನನ್ನ ಜೊತೆ ನೀನು ಮುಕ್ತವಾಗಿ ಮಾತಾಡಬಹುದು, ನಾನು ನಂಬ್ತೀನಿ ಅನ್ನೋ ಭಾವನೆ ಕೊಡೋದು ಮುಖ್ಯ. ಈ ಸಪೋರ್ಟ್ ಸಿಸ್ಟಂ ಮನೆಯಲ್ಲೇ ಇದ್ದರೆ ಇನ್ನೂ ಒಳ್ಳೆದು.
ಒಂದು ಸಿನೆಮಾನ ನೋಡು ಅಂದಾಗ ನೋಡಲ್ಲ ಅಂದಿದ್ದ ನನ್ನ ಮಗ. ಯಾಕೆ ಅಂದಿದ್ದಕ್ಕೆ, ಅಲ್ಲಿ ಮಗು ಹೇಳೋ ಮಾತು ಯಾರೂ ನಂಬೋದೇ ಇಲ್ಲ, ಅದಕ್ಕೆ ನಂಗಿಷ್ಟ ಆಗ್ಲಿಲ್ಲ ಅಂದ. ಹತ್ತು ವರ್ಷದ ಮಗುವಿಗೆ ನಂಬಿಕೆ ಬೇಕು ಅನಿಸಿದಾಗ, ಇನ್ನು ನಮ್ಮ ವಯೋಮಾನದವರಿಗೆ ನಾವು ಹಂಗೆಲ್ಲ ಏನಿಲ್ಲ, ನೀನು ಹಂಗಂತೀಯ ಅಷ್ಟೇ ಅನ್ನೋದು ಎಷ್ಟು ಹಾಸ್ಯಾಸ್ಪದ. ಮೊದಲು ಕಿವಿಯಾಗಬೇಕು, ನಂತರ ಸರಿ ತಪ್ಪು ನಿರ್ಧರಿಸೋದಕ್ಕೂ ನಾವು ಯಾರೂ ಅಲ್ಲ. ಹೆಚ್ಚೆಂದರೆ, ನಂಗೆ ಹೀಗನಿಸತ್ತೆ, ನಿಂಗೆ ಅಂತ ಕೇಳಬಹುದಷ್ಟೇ.
ಕರ್ನಾಟಕ ಆತ್ಮಹತ್ಯೆಯಲ್ಲಿ ದೇಶದಲ್ಲಿ ಐದನೇ ಸ್ಥಾನದಲ್ಲಿದೆ.
ಹೀಗೇ ಮುಂದುವರೆದರೆ ಮೊದಲನೇ ಸ್ಥಾನಕ್ಕೂ ಬರತ್ತೆ.
ನನ್ನ ಪ್ರೀತಿಪಾತ್ರರು ಬದುಕಬೇಕು, ಅವರ ಕುರಿತು ಒಂದು ಹಿಡಿ ಕಾಳಜಿ ಮಾಡೋಣ ಅನಿಸಿದ ದಿನ ಒಂದಿಷ್ಟಾದರೂ ಆತ್ಮಹತ್ಯೆಗಳು ನಿಲ್ಲುತ್ತವೆ.
#WorldSuicidePreventionDay
