ಬೆಂಗಳೂರು : ಪೊಲೀಸರು ಅಕ್ರಮವಾಗಿ ಬಂಧಿಸಿದ್ದ ಯುವಕ ರಿಹ್ಯಾಬ್ ಸೆಂಟರ್‌ಗೆ ಸೇರಿದ 10 ದಿನಗಳ ಒಳಗೆ ಸಾವಿಗೀಡಾಗಿರುವ (Crime) ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪೊಲೀಸರ ಮೇಲೆ ಆರೋಪ ಕೇಳಿ ಬಂದಿದೆ.
23 ವರ್ಷದ ಯುವಕ ಸಾವು
ಮಾಹಿತಿಗಳ ಪ್ರಕಾರ, ವಿವೇಕನಗರದ ಸೊಣ್ಣೆನಹಳ್ಳಿಯ ದರ್ಶನ್ ಎನ್ನುವ 23 ವರ್ಷದ ಯುವಕ ರಿಹ್ಯಾಬ್ ಸೆಂಟರ್‌ನಲ್ಲಿ ಸಾವಿಗೀಡಾಗಿದ್ದಾರೆ. ಆದರೆ ಈ ಯುವಕನದ್ದು ಅಸಹಜ ಸಾವಲ್ಲ ಕೊಲೆ ಎನ್ನುವ ಆರೋಪವನ್ನ ಆತನ ಕುಟುಂಬಸ್ಥರು ಮಾಡಿದ್ದು, ಪೊಲೀಸರ ಮೇಲೆ ದೂರು ದಾಖಲು ಮಾಡಿದ್ದಾರೆ. ಮೃತ ದರ್ಶನ್ ಅವರ ಪೋಷಕರು ಬೆಂಗಳೂರಿನ ಕೇಂದ್ರ ವಿಭಾಗದ ವಿವೇಕನಗರ ಪೊಲೀಸರ ವಿರುದ್ಧ ಕೊಲೆ ಕೇಸ್ ಪ್ರಕರಣ ದಾಖಲು ಮಾಡಿದ್ದಾರೆ.
ಏನಿದು ಪ್ರಕರಣ?
ನವೆಂಬರ್ 12ರಂದು ದರ್ಶನ್ನನ್ನು ಅಕ್ರಮವಾಗಿ ಪೊಲೀಸರು ಬಂಧಿಸಿದ್ದರು. ಅಲ್ಲದೇ, ಸುಮಾರು ಮೂರು ದಿನಗಳ ಕಾಲ ಆತನನ್ನ ವಶಕ್ಕೆ ಪಡೆದುಕೊಂಡು ಚೆನ್ನಾಗಿ ಹೊಡೆದಿದ್ದರು. ಲಾಠಿ, ಪೈಪ್ನಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ. ಈ ಹಲ್ಲೆಯನ್ನ ಮರೆಮಾಚಲು ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರು. ಆದರೆ ಆ ಸೆಂಟರ್‌ನಲ್ಲಿ ಸಹ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ಹಾಗಾಗಿ 8 ದಿನದಲ್ಲಿ ಯುವಕ ದರ್ಶನ್ ಮೃತಪಟ್ಟಿದ್ದಾನೆ. ಇದೊಂದು ಕೊಲೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪವನ್ ಸೇರಿದಂತೆ ನಾಲ್ಕು ಪೊಲೀಸರು ಮತ್ತು ಯೂನಿಟಿ ರಿಯಾಬ್ ಸೆಂಟರ್ ಮಾಲೀಕರ ವಿರುದ್ಧ ಕೊಲೆ ಮತ್ತು ಅಟ್ರಾಸಿಟಿ ಪ್ರಕರಣವನ್ನ ದಾಖಲು ಮಾಡಲಾಗಿದೆ.
