ಇಂದಿನಿಂದಲೇ ಜೋಳ ಖರೀದಿ ಆರಂಭಕ್ಕೆ ಜಿಲ್ಲಾ ಮಂತ್ರಿ ಭರವಸೆ
ಹಾಸನ: ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿ ಕಳೆದ 5 ದಿನಗಳಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಶುಕ್ರವಾರದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಕೇಳಿದಲ್ಲದೇ ನಾಳೆ ಶನಿವಾರದಿಂದಲೇ ಜೋಳ ಖರೀದಿ ಮಾಡಲು ಭರವಸೆ ನೀಡಿದ ಹಿನ್ನಲೆಯಲ್ಲಿ ರೈತ ಸಂಘದ ಪ್ರತಿಭಟನೆ ಕೊನೆಗೊಳಿಸಲಾಯಿತು.
ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸತತ ಐದು ದಿನಗಳ ಕಾಲ ಹಗಲು-ರಾತ್ರಿ ಪ್ರತಿಭಟನೆ ನಡೆಸಿದ ರೈತರು, ಬೇಡಿಕೆ ಈಡೇರಿಸುವವರೆಗೂ ಹಿಂಪಡೆಯುವುದಿಲ್ಲ ಎಂಬ ಹಠ ಹಿಡಿದು ಹೋರಾಟವನ್ನು ಮುಂದುವರಿಸಿದ್ದರು. ಶನಿವಾರ ಮಧ್ಯಾಹ್ನ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹಾಸನಕ್ಕೆ ಆಗಮಿಸಿದ ವೇಳೆ ತಮ್ಮ ಅಹವಾಲುಗಳನ್ನು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ರೈತ ಮುಖಂಡರು ರಸ್ತೆ ತಡೆ ನಡೆಸಿದ್ದರು. ಪೊಲೀಸರು ಮನವೊಲಿಸುವ ಪ್ರಯತ್ನ ಯಶಸ್ವಿಯಾಗಿ, ರಸ್ತೆ ತಡೆ ಹಿಂತೆಗೆದುಕೊಳ್ಳಲಾಯಿತು. ಆದರೆ, ಜಿಲ್ಲಾಧಿಕಾರಿ ಕಚೇರಿ ಎದುರಿನ ಧರಣಿಯನ್ನು ಮುಂದುವರಿಸಿದ ರೈತ ಮುಖಂಡರನ್ನು ಸಂಸದ ಶ್ರೇಯಸ್ ಪಟೇಲ್ ಹಾಗೂ ಗೃಹ ಮಂಡಳಿಯ ಅಧ್ಯಕ್ಷ ಮತ್ತು ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಭೇಟಿ ಮಾಡಿ, ಕೆಎಂಎಫ್ ಮೂಲಕ ರೈತರಿಂದ ನೇರವಾಗಿ ಜೋಳ ಖರೀದಿ ಮಾಡುವ ಭರವಸೆ ನೀಡಿದರು.
ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ನಾಳೆಯಿಂದಲೇ ಪ್ರತಿ ಕ್ವಿಂಟಲ್‌ಗೆ ?2400 ದರದಲ್ಲಿ, ಪ್ರತಿ ರೈತನಿಂದ ಗರಿಷ್ಠ 30 ಕ್ವಿಂಟಲ್ ಜೋಳ ಖರೀದಿಸಲು ಸೂಚನೆ ನೀಡಲಾಯಿತು. ದಾಖಲೆಗಳ ಪರಿಶೀಲನೆ ನಡೆಸಿ ಯಾವುದೇ ವಿಳಂಬವಿಲ್ಲದೆ ಜೋಳ ಖರೀದಿ ಆರಂಭಗೊಳ್ಳಲಿದೆ ಎಂದು ರೈತರಿಗೆ ಭರವಸೆ ನೀಡಲಾಯಿತು. ರೈತರಿಂದ ದಾಖಲೆಗಳ ಪೂರ್ಣತೆ ಇರಬೇಕೆಂದು ಸೂಚನೆ ನೀಡಿದ ಅಧಿಕಾರಿಗಳು, ನಾಳೆಯಿಂದಲೇ ಖರೀದಿ ಪ್ರಕ್ರಿಯೆಯನ್ನು ನೆಮ್ಮದಿಯಿಂದ ಆರಂಭಿಸಲಾಗುವುದು ಎಂದು ಹೇಳಿದರು.
ಬಳಿಕ ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಕಳೆದ ಐದು ದಿನಗಳಿಂದ ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಈಗ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಖರೀದಿಗೆ ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂಪಡೆಯಲಿದ್ದೇವೆ ಎಂದರು. ಜಿಲ್ಲೆಯ ರೈತರು ನಾಳೆಯಿಂದ ಆರಂಭಗೊಳ್ಳುವ ಜೋಳ ಖರೀದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಖರೀದಿ ವೇಳೆ ಯಾವುದೇ ಅಕ್ರಮ ಅಥವಾ ಲೋಪ ಕಂಡುಬಂದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ತಾಲೂಕು ಅಧ್ಯಕ್ಷ ಮಂಜು, ಮನು, ರವಿ, ವೆಂಕಟರಾಮು, ಹಳೆಬೀಡು ರಾಜಣ್ಣ, ಹಾಲಪ್ಪ, ನಂಜಪ್ಪ, ತೀರ್ಥ ಪ್ರಸಾದ್ ಸೇರಿದಂತೆ ಅನೇಕ ರೈತ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
