ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ (Social Media) ನಿನ್ನೆಯಿಂದ ಫೋಟೋವೊಂದು (Photo) ಭಾರೀ ವೈರಲ್ ಆಗುತ್ತಿದೆ. ಈ ಪೋಟೋ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ (N Santosh Hegde) ಅವರು ಹಿಂದೂ (Hindu) ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) ಸನ್ಮಾನ ಮಾಡಿರುವುದು ಆಗಿದೆ.ಇಲ್ಲಿ ಸಂತೋಷ್ ಹೆಗ್ಡೆ ಅವರ ನಡೆಗೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗೆ ಸನ್ಮಾನ ಮಾಡಿದ್ದಾರೆ. ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ಪುನೀತ್ ಕೆರೆಹಳ್ಳಿಯ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.
ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದೇನು..?: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿವಾದವಾಗುತ್ತಿದ್ದಂತೆಯೇ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೆ ಪ್ರಶಸ್ತಿ ಎಂದು ತಿಳಿಸಿರಲಿಲ್ಲ, ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ. ನಾನೊಬ್ಬನೇ ಪ್ರಶಸ್ತಿಯನ್ನ ಕೊಟ್ಟಿಲ್ಲ, ಕಾರ್ಯಕ್ರಮದಲ್ಲಿ ಇನ್ನೊಬ್ಬರು ಮುಖ್ಯ ನ್ಯಾಯಾಮೂರ್ತಿಗಳಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಯಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೂ ನಾನು ಹೋಗುವುದಿಲ್ಲ ಎಂದಿದ್ದಾರೆ.
