ಇತ್ತೀಚೆಗಷ್ಟೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡುತ್ತಾ, “ಇ-20 ಪೆಟ್ರೋಲ್ ಬಳಕೆಯಿಂದ ನಷ್ಟ ಅನುಭವಿಸುತ್ತಿರುವ ಅಥವಾ ತೊಂದರೆಗೆ ಒಳಗಾಗಿರುವ ಒಬ್ಬನೇ ಒಬ್ಬ ವಾಹನ ಸವಾರನನ್ನು ನನಗೆ ತೋರಿಸಿ” ಎಂದು ಬಹಿರಂಗ ಸವಾಲು ಹಾಕಿದ್ದರು. ಆದರೆ, ಸಚಿವರ ಈ ಸವಾಲಿಗೆ ಕೌಂಟರ್ ಕೊಡುವಂತಹ ಮಹತ್ವದ ವಿಷಯಗಳು ‘ಸಿ-ವೋಟರ್’ (C-Voter) ನಡೆಸಿದ ಹೊಸ ಸಮೀಕ್ಷೆಯಲ್ಲಿ ಬಹಿರಂಗವಾಗಿವೆ.
ಸಮೀಕ್ಷೆಯ ಪ್ರಕಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ (NDA) ಮೈತ್ರಿಕೂಟವನ್ನು ಬೆಂಬಲಿಸುವ ಶೇಕಡಾ 52.5 ರಷ್ಟು ಮತದಾರರೇ ಈ ಇ-20 ಪೆಟ್ರೋಲ್ ಬಳಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇ-20 ಪೆಟ್ರೋಲ್ (ಶೇ. 20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ ಮತ್ತು ಎಂಜಿನ್ ರಿಪೇರಿ ವೆಚ್ಚ ಹೆಚ್ಚಾಗುತ್ತಿದೆ ಎಂದು ಸ್ವತಃ ಎನ್‌ಡಿಎ ಬೆಂಬಲಿಗರು ಅಳಲು ತೋಡಿಕೊಂಡಿದ್ದಾರೆ. ಆಡಳಿತ ಪಕ್ಷದ ಮತದಾರರಲ್ಲಿ ಕೇವಲ ಶೇಕಡಾ 18.1 ರಷ್ಟು ಜನರು ಮಾತ್ರ ಈ ಪೆಟ್ರೋಲ್ ಬೆಂಬಲಿಸಿದ್ದು, ಉಳಿದ ಶೇಕಡಾ 29.5 ರಷ್ಟು ಜನರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಮುಖ್ಯ ವಿರೋಧ ಪಕ್ಷಗಳನ್ನು ಬೆಂಬಲಿಸುವ ಮತದಾರರಲ್ಲಿ ಶೇಕಡಾ 57.9 ರಷ್ಟು ಜನರು ಇ-20 ನೀತಿಯನ್ನು ಖಂಡಿತವಾಗಿ ವಿರೋಧಿಸಿದ್ದಾರೆ. ಇನ್ನುಳಿದ ಇತರ ಪ್ರಾದೇಶಿಕ ಅಥವಾ ಸಣ್ಣ ಪಕ್ಷಗಳ ಬೆಂಬಲಿಗರಲ್ಲಿ ಶೇಕಡಾ 55 ರಷ್ಟು ಜನರು ಈ ಮಿಶ್ರಿತ ಇಂಧನ ನಮಗೆ ಬೇಡ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಇಡೀ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಒಟ್ಟು ಸಾರ್ವಜನಿಕರಲ್ಲಿ ಶೇಕಡಾ 55.1 ರಷ್ಟು ಜನರು ಇ-20 ಪೆಟ್ರೋಲ್ ನೀತಿಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಶೇಕಡಾ 17.1 ರಷ್ಟು ಜನರು ಮಾತ್ರ ಇದಕ್ಕೆ ಬೆಂಬಲ ನೀಡಿದ್ದು, ಉಳಿದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ತೊಂದರೆ ಅನುಭವಿಸುತ್ತಿರುವ ಒಬ್ಬರನ್ನು ತೋರಿಸಿ” ಎಂದು ನಿತಿನ್ ಗಡ್ಕರಿ ಸವಾಲು ಹಾಕಿದ ಬೆನ್ನಲ್ಲೇ, ಸ್ವತಃ ಅವರದ್ದೇ ಪಕ್ಷ ಹಾಗೂ ಮೈತ್ರಿಕೂಟದ ಬೆಂಬಲಿಗರು ಇ-20 ಪೆಟ್ರೋಲ್‌ನಿಂದ ಆಗುತ್ತಿರುವ ನಷ್ಟಗಳನ್ನು ಬಿಚ್ಚಿಟ್ಟಿರುವುದು ದೇಶದಲ್ಲಿ ಎಥನಾಲ್ ಮಿಶ್ರಿತ ಇಂಧನ ನೀತಿಯಿಂದ ವಾಹನ ಸವಾರರು ಎದುರಿಸುತ್ತಿರುವ ವಾಸ್ತವ ಕಷ್ಟಗಳನ್ನು ಎತ್ತಿ ತೋರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
