Home ಇನ್ನಷ್ಟು ಕೋರ್ಟು - ಕಾನೂನು ಕಾಶಿ, ಮಥುರಾ, ಸಂಭಲ್ ವಿವಾದ: ಮಧ್ಯಸ್ಥಿಕೆ ಪ್ರಸ್ತಾವನೆಯನ್ನು ತಳ್ಳಿಹಾಕಿ, ಕೋರ್ಟಿನಲ್ಲೇ ತೀರ್ಮಾನವಾಗಲಿ ಎಂದ ಹಿಂದೂ-ಮುಸ್ಲಿಂ...

ಕಾಶಿ, ಮಥುರಾ, ಸಂಭಲ್ ವಿವಾದ: ಮಧ್ಯಸ್ಥಿಕೆ ಪ್ರಸ್ತಾವನೆಯನ್ನು ತಳ್ಳಿಹಾಕಿ, ಕೋರ್ಟಿನಲ್ಲೇ ತೀರ್ಮಾನವಾಗಲಿ ಎಂದ ಹಿಂದೂ-ಮುಸ್ಲಿಂ ಎರಡೂ ಪಕ್ಷಗಳು

0

ಉತ್ತರ ಪ್ರದೇಶದ ಜ್ವಲಂತ ಮಂದಿರ-ಮಸೀದಿ ವಿವಾದಗಳಾದ ಕಾಶಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಹಾಗೂ ಸಂಭಲ್‌ನ ಶಾಹಿ ಜಾಮಾ ಮಸೀದಿ ಪ್ರಕರಣಗಳಲ್ಲಿ ಹೊರಗಿನ ಸಂಧಾನದ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಈ ವಿವಾದಗಳನ್ನು ಕೋರ್ಟ್‌ನ ಹೊರಗಿನ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಸ್ಥಿಕೆಯ (Mediation) ಪ್ರಸ್ತಾಪವನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಪಕ್ಷಗಳು ತಿರಸ್ಕರಿಸಿವೆ. ಈ ವಿವಾದಗಳಿಗೆ ಕೇವಲ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಾಲಯದ ತೀರ್ಪಿನ ಮೂಲಕವೇ ಪರಿಹಾರ ಸಿಗಬೇಕು ಎಂದು ಎರಡೂ ಕಡೆಯವರು ಸ್ಪಷ್ಟಪಡಿಸಿದ್ದಾರೆ.

ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ಸುಲಭ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ಆಡಳಿತವು ‘ಸಮಾಧಾನ್ ಸಮಾರೋಹ 2026’ ಎಂಬ ಉಪಕ್ರಮದಡಿ ಇದೇ ಆಗಸ್ಟ್ 21 ರಿಂದ 23 ರವರೆಗೆ ವಿಶೇಷ ಲೋಕ್ ಅದಾಲತ್ ಆಯೋಜಿಸಿದೆ. ಈ ಕಾರ್ಯಕ್ರಮದ ಭಾಗವಾಗಿ, ಪರಸ್ಪರ ಒಪ್ಪಿಗೆಯ ಮೇರೆಗೆ ಈ ಮೂರು ಸೂಕ್ಷ್ಮ ಧಾರ್ಮಿಕ ಸ್ಥಳಗಳ ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದೆ ಬರುವಂತೆ ಉಭಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಪತ್ರದ ಮೂಲಕ ಆಹ್ವಾನ ನೀಡಿತ್ತು ಎಂದು ‘ಬಾರ್ ಆಂಡ್ ಬೆಂಚ್’ ವರದಿ ಮಾಡಿದೆ.

ಆದರೆ, ಈ ಆಹ್ವಾನವನ್ನು ಸ್ವೀಕರಿಸಲು ಎರಡೂ ಪಕ್ಷಗಳು ಒಲವು ತೋರಿಲ್ಲ. ಹಿಂದೂ ಪಕ್ಷದ ಪರ ವಕೀಲರು ಮಾತನಾಡಿ, “ಈ ಪ್ರಕರಣಗಳು ಕೇವಲ ಸಾಮಾನ್ಯ ಗೊಂದಲಗಳಲ್ಲ. ಇವುಗಳಲ್ಲಿ ಮಾಲೀಕತ್ವದ ಹಕ್ಕು ,ಸಾಂವಿಧಾನಿಕ ಹಕ್ಕುಗಳು ಹಾಗೂ ಸಾರ್ವಜನಿಕ ಪ್ರಾಮುಖ್ಯತೆಯ ದೊಡ್ಡ ಪ್ರಶ್ನೆಗಳು ಅಡಗಿವೆ. ಇಂತಹ ವಿಷಯಗಳನ್ನು ಒಪ್ಪಿಗೆಯ ಆಧಾರದ ಮೇಲೆ ಲೋಕ್ ಅದಾಲತ್‌ನಲ್ಲಿ ಬಗೆಹರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಇತ್ತ ಮಸೀದಿ ನಿರ್ವಹಣಾ ಸಮಿತಿಗಳೂ ಕೂಡ ಇದೇ ನಿಲುವು ತಳೆದಿದ್ದು, ತಾವು ಶಾಂತಿಯುತ ಪರಿಹಾರವನ್ನು ಬಯಸುತ್ತಾರಾದರೂ, ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಕಾನೂನು ಹೋರಾಟಗಳನ್ನು ತೀರ್ಮಾನಿಸಲು ಮಧ್ಯಸ್ಥಿಕೆ ಸರಿಯಾದ ದಾರಿಯಲ್ಲ ಎಂದು ತಿಳಿಸಿವೆ.

ಮೂರು ವಿವಾದಗಳ ಹಿನ್ನೆಲೆ:

  • ಕಾಶಿ ಜ್ಞಾನವಾಪಿ ವಿವಾದ: ವಾರಾಣಸಿಯ ಜ್ಞಾನವಾಪಿ ಮಸೀದಿಯನ್ನು ಪ್ರಾಚೀನ ಕಾಶಿ ವಿಶ್ವನಾಥ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದೂ ಪಕ್ಷದವರು ಆರಾಧನೆಯ ಹಕ್ಕನ್ನು ಕೋರಿ ದೂರು ನೀಡಿದ್ದಾರೆ. ಆದರೆ, ಮುಸ್ಲಿಂ ಪಕ್ಷವು 1991 ರ ಧಾರ್ಮಿಕ ಸ್ಥಳಗಳ ಕಾಯ್ದೆಯನ್ನು (Places of Worship Act) ಮುಂದಿಟ್ಟುಕೊಂಡು ಈ ವಾದವನ್ನು ವಿರೋಧಿಸುತ್ತಿದೆ.
  • ಮಥುರಾ ಕೃಷ್ಣ ಜನ್ಮಭೂಮಿ: ಮಥುರಾದ ಶಾಹಿ ಈದ್ಗಾ ಮಸೀದಿ ಇರುವ ಜಾಗವೇ ಕೃಷ್ಣನ ನೈಜ ಜನ್ಮಸ್ಥಳ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿದ್ದು, 1968 ರಲ್ಲಿ ನಡೆದಿದ್ದ ಒಪ್ಪಂದದ ಸಿಂಧುತ್ವವನ್ನು ಪ್ರಶ್ನಿಸಿವೆ.
  • ಸಂಭಲ್ ಜಾಮಾ ಮಸೀದಿ: ಹರಿಹರ ದೇವಾಲಯವನ್ನು ಒಡೆದು ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹಿಂದೂ ಪಕ್ಷದ ಅರ್ಜಿಯ ಮೇರೆಗೆ ಸಿವಿಲ್ ಕೋರ್ಟ್ ಇತ್ತೀಚೆಗೆ ಸಮೀಕ್ಷೆಗೆ ಆದೇಶಿಸಿತ್ತು. ಇದು ಇತ್ತೀಚೆಗೆ ದೊಡ್ಡ ಮಟ್ಟದ ಗಲಾಟೆ ಮತ್ತು ಹಿಂಸಾಚಾರಕ್ಕೂ ಕಾರಣವಾಗಿತ್ತು.

ಈ ಮೂರೂ ಪ್ರಕರಣಗಳು ಸದ್ಯ ಸುಪ್ರೀಂ ಕೋರ್ಟ್‌ನಲ್ಲೇ ಬಾಕಿ ಇದ್ದು, ಪ್ರಕರಣಗಳ ಕಾನೂನುಬದ್ಧತೆಯ ಪರಿಶೀಲನೆ ನಡೆಯುತ್ತಿದೆ. ಈಗ ಎರಡೂ ಕಡೆಯವರು ಲೋಕ್ ಅದಾಲತ್‌ನ ಮಧ್ಯಸ್ಥಿಕೆಯನ್ನು ನಿರಾಕರಿಸಿರುವುದರಿಂದ, ಸುಪ್ರೀಂ ಕೋರ್ಟ್ ನಡೆಸಲಿರುವ ನಿಯಮಿತ ನ್ಯಾಯಾಲಯದ ವಿಚಾರಣೆ ಮತ್ತು ಅದರ ಅಂತಿಮ ತೀರ್ಪಿನ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

You cannot copy content of this page

Exit mobile version