ದೇಶಾದ್ಯಂತ 25 ಪ್ರತಿಶತ ಇಥನಾಲ್ ಮಿಶ್ರಿತ ಪೆಟ್ರೋಲ್ (E25) ಅನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪ ತನ್ನ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ವದಂತಿಗಳ ಹಿನ್ನೆಲೆಯಲ್ಲಿ ವಾಹನ ಸವಾರರಲ್ಲಿ ಉಂಟಾಗಿದ್ದ ಆತಂಕವನ್ನು ನಿವಾರಿಸಲು ಸರ್ಕಾರ ಪ್ರಯತ್ನಿಸಿದೆ. E25 ಇಂಧನವನ್ನು ತಕ್ಷಣವೇ ಜಾರಿಗೆ ತರಲಾಗುತ್ತಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ವಾಹನ ಮಾಡೆಲ್‌ಗಳ ಮೇಲೆ E25 ಮಿಶ್ರಣವು ಎಷ್ಟು ಮಟ್ಟಿಗೆ ಹೊಂದಿಕೆಯಾಗುತ್ತದೆ ಎಂಬ ಅಂಶದ ಕುರಿತು ಪ್ರಸ್ತುತ ಪರೀಕ್ಷೆಗಳು ನಡೆಯುತ್ತಿದ್ದು, ಸಂಪೂರ್ಣ ವರದಿಗಳು ಬಂದ ನಂತರವಷ್ಟೇ ಇದರ ಬಗ್ಗೆ ನೀತಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ದೇಶಾದ್ಯಂತ ಲಭ್ಯವಿರುವ E20 (20 ಪ್ರತಿಶತ ಇಥನಾಲ್) ಪೆಟ್ರೋಲ್ ಸುರಕ್ಷಿತವಾಗಿದ್ದು, ಅದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಚ್ಚಾ ತೈಲ ಆಮದು ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಮತ್ತು ಕಬ್ಬು ಬೆಳೆಗಾರರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಥನಾಲ್ ಬ್ಲೆಂಡಿಂಗ್ ಕಾರ್ಯಕ್ರಮವನ್ನು ಉತ್ತೇಜಿಸುತ್ತಿದೆ.
ಈಗಾಗಲೇ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಭಾರತವು E20 ಗುರಿಯನ್ನು ತಲುಪಿದೆ. ಆದರೆ E20 ಪೆಟ್ರಾಲ್ ಬಳಕೆಯಿಂದ ಮೈಲೇಜ್ ಕಡಿಮೆಯಾಗುವುದು ಮತ್ತು ಹಳೆಯ ವಾಹನಗಳ ಇಂಜಿನ್ ಕಾರ್ಯಕ್ಷಮತೆ ಹಾನಿಗೊಳಗಾಗಬಹುದು ಎಂಬ ಆತಂಕಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿವೆ. ಈ ನಡುವೆಯೇ E25 ಬರಲಿದೆ ಎಂಬ ವರದಿಗಳು ವಾಹನ ಸವಾರರಲ್ಲಿ ಮತ್ತಷ್ಟು ಆತಂಕ ಮೂಡಿಸಿದ್ದವು. ಇತ್ತೀಚೆಗೆ ಸರ್ಕಾರವು E22 ರಿಂದ E30 ವರೆಗಿನ ಇಥನಾಲ್ ಮಿಶ್ರಣಗಳ ಮೇಲೆ ಅಬಕಾರಿ ಸುಂಕ ವಿನಾಯಿತಿ ನೀಡಿದ್ದರಿಂದ, E25 ಶೀಘ್ರದಲ್ಲೇ ಬರಲಿದೆ ಎಂಬ ಊಹಾಪೋಹಗಳು ಹೆಚ್ಚಾಗಿದ್ದವು.
ಆದರೆ E20 ನಂತರ ಯಾವುದೇ ನಿರ್ಧಾರ ಕೈಗೊಂಡರೂ ಅದು ಹಂತ-ಹಂತವಾಗಿ ಇರಲಿದ್ದು, ವಾಹನ ಉತ್ಪಾದನಾ ಸಂಸ್ಥೆಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ತಪ್ಪು ಸುದ್ದಿಗಳನ್ನು ನಂಬಿ ಆತಂಕಕ್ಕೊಳಗಾಗಬೇಡಿ ಎಂದು ಕೇಂದ್ರ ಸರ್ಕಾರವು ಸಾರ್ವಜನಿಕರಲ್ಲಿ ವಿನಂತಿಸಿದೆ.
