ಕೇಂದ್ರ ಬಜೆಟ್ | ಪ್ರತಿಯೊಬ್ಬರ ತಲೆಮೇಲೆ 1.48 ಲಕ್ಷ ರೂ. ಸಾಲ, ಬಿಜೆಪಿ ಆಡಳಿತದಲ್ಲಿ ಸಾಲದ ಶೂಲವಾದ ದೇಶ

ದೇಶದ ಪ್ರತಿಯೊಬ್ಬ ಪ್ರಜೆಯ ತಲೆಮೇಲೆ 1.48 ಲಕ್ಷ ರೂ. ಸಾಲವಿದೆ. ಕಳೆದ ವರ್ಷದವರೆಗೆ ಕೇಂದ್ರ ಸರ್ಕಾರ 191 ಲಕ್ಷ ಕೋಟಿ ರೂ. ಸಾಲ ಮಾಡಿತ್ತು. ಮುಂಬರುವ ಆರ್ಥಿಕ ವರ್ಷದಲ್ಲಿ ಇನ್ನೂ 17.2 ಲಕ್ಷ ಕೋಟಿ ರೂ. ಸಾಲ ಮಾಡಲಿರುವುದಾಗಿ ಘೋಷಿಸಿದೆ. ಈ ಲೆಕ್ಕಾಚಾರದ ಪ್ರಕಾರ ಒಟ್ಟು ಸಾಲ 208.2 ಲಕ್ಷ ಕೋಟಿ ರೂ. ದಾಟಲಿದೆ. ದೇಶದ ಜನಸಂಖ್ಯೆಯನ್ನು 140 ಕೋಟಿ ಎಂದು ಪರಿಗಣಿಸಿದರೆ, ಪ್ರತಿಯೊಬ್ಬರ ಮೇಲೂ 1.48 ಲಕ್ಷ ರೂ. ಸಾಲವಿದ್ದಂತಾಗುತ್ತದೆ.

ದೇಶದ ಜಿಡಿಪಿಯಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಾಲ ಮಾಡಿರುವ ಕೇಂದ್ರದ ಎನ್‌ಡಿಎ ಸರ್ಕಾರ, ಮುಂಬರುವ ಆರ್ಥಿಕ ವರ್ಷದಲ್ಲಿ (2026-27) ಮತ್ತಷ್ಟು ಸಾಲ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಡೇಟೆಡ್ ಸೆಕ್ಯೂರಿಟಿಗಳು ಮತ್ತು ಇತರ ಮಾರ್ಗಗಳ ಮೂಲಕ ದಾಖಲೆ ಮಟ್ಟದ 17.2 ಲಕ್ಷ ಕೋಟಿ ರೂ. ಸಾಲವನ್ನು ಕ್ರೋಢೀಕರಿಸಲು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ 2026-27ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಪ್ರಮುಖ ಪ್ರಸ್ತಾಪಗಳನ್ನು ಮಾಡಿದರು.

ವಿತ್ತೀಯ ಕೊರತೆಯನ್ನು ನೀಗಿಸಲು.. ಆದಾಯ ಮತ್ತು ವೆಚ್ಚದ ನಡುವಿನ ಅಂತರ ಹೆಚ್ಚಾಗಿ ಭಾರಿ ವಿತ್ತೀಯ ಕೊರತೆಗೆ (Fiscal Deficit) ಕಾರಣವಾಗಿದ್ದು, ಅದನ್ನು ಸರಿದೂಗಿಸಲು ಹೊಸದಾಗಿ ಸಾಲ ಪಡೆಯಲಾಗುತ್ತಿದೆ ಎನ್ನಲಾಗಿದೆ. ಹೊಸದಾಗಿ ಕ್ರೋಢೀಕರಿಸುವ 17.2 ಲಕ್ಷ ಕೋಟಿ ರೂ. ಸಾಲದಲ್ಲಿ, ಡೇಟೆಡ್ ಸೆಕ್ಯೂರಿಟಿಗಳಿಂದ 11.7 ಲಕ್ಷ ಕೋಟಿ ರೂ. ಬರುವ ನಿರೀಕ್ಷೆಯಿದೆ. ಉಳಿದ ಮೊತ್ತವು ಸಣ್ಣ ಉಳಿತಾಯ ಯೋಜನೆಗಳು ಮತ್ತು ಇತರ ಮಾರ್ಗಗಳಿಂದ ಬರಲಿದೆ ಎಂದು ತಿಳಿದುಬಂದಿದೆ.

ತಿಂಗಳ ಬಡ್ಡಿಯೇ ಒಂದು ಲಕ್ಷ ಕೋಟಿಗೂ ಹೆಚ್ಚು.. ಕಳೆದ 67 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಲ 55,87,147 ಕೋಟಿ ರೂ.ಗಳಾಗಿದ್ದರೆ, ಮೋದಿ ಪ್ರಧಾನಿಯಾದ ನಂತರ ಕಳೆದ ಹನ್ನೊಂದೂವರೆ ವರ್ಷಗಳಲ್ಲಿ ಮಾಡಿದ ಸಾಲ 1,52,85,363 ಕೋಟಿ ರೂ.ಗಳಾಗಿದೆ. ಹಿಂದಿನ ಪ್ರಧಾನಿಗಳು ವರ್ಷಕ್ಕೆ ಸರಾಸರಿ 83 ಸಾವಿರ ಕೋಟಿ ರೂ. ಸಾಲ ಮಾಡಿದರೆ, ಪ್ರಸ್ತುತ ಪ್ರಧಾನಿ ತಿಂಗಳಿಗೆ 1.10 ಲಕ್ಷ ಕೋಟಿ ರೂ. ಸಾಲ ಮಾಡುತ್ತಿದ್ದಾರೆ. ಮುಂಬರುವ ಆರ್ಥಿಕ ವರ್ಷದಲ್ಲಿ ವಾರ್ಷಿಕ ಬಡ್ಡಿಗಾಗಿಯೇ 14,03,972 ಕೋಟಿ ರೂ. ಪಾವತಿಸಬೇಕಿದೆ. ಅಂದರೆ ತಿಂಗಳಿಗೆ ಪಾವತಿಸಬೇಕಾದ ಬಡ್ಡಿಯೇ 1.17 ಲಕ್ಷ ಕೋಟಿ ರೂ.ಗಳಷ್ಟಿದೆ.

ಬೆಲೆ ಏರಿಕೆ (ತುಟ್ಟಿಯಾಗುವ ವಸ್ತುಗಳು):

  • ಐಷಾರಾಮಿ ವಾಚ್‌ಗಳು, ಮದ್ಯ, ಸಿಗರೇಟ್, ಬೀಡಿ, ಪಾನ್ ಮಸಾಲಾ, ಗುಟ್ಕಾ.
  • ಅಮೋನಿಯಂ ಫಾಸ್ಫೇಟ್, ಅಮೋನಿಯಂ ನೈಟ್ರೋ ಫಾಸ್ಫೇಟ್, ಪೊಟ್ಯಾಶಿಯಂ ಹೈಡ್ರಾಕ್ಸೈಡ್.
  • ಕ್ಯಾಮೆರಾಗಳು, ಚಿತ್ರೀಕರಣಕ್ಕೆ ಬಳಸುವ ಉಪಕರಣಗಳು.
  • ಎಟಿಎಂ ಮೆಷಿನ್ ಬಿಡಿಭಾಗಗಳು.
  • ಕಡಿಮೆ ದರದಲ್ಲಿ ಆಮದಾಗುವ ಕೊಡೆಗಳು.
  • ಕಾಫಿ ರೋಸ್ಟಿಂಗ್, ಬ್ರೂಯಿಂಗ್, ವೆಂಡಿಂಗ್ ಯಂತ್ರಗಳು.
  • ಆಮದು ಮಾಡಿಕೊಳ್ಳುವ ಮೃಗಾಲಯದ ಪ್ರಾಣಿಗಳು, ಪಕ್ಷಿಗಳು.
  • ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್.

ಬೆಲೆ ಇಳಿಕೆ (ಅಗ್ಗವಾಗುವ ವಸ್ತುಗಳು):

  • ಇವಿ (EV) ಬ್ಯಾಟರಿಗಳು, ಸೋಲಾರ್ ಪ್ಯಾನಲ್‌ಗಳು.
  • ವಿದೇಶಿ ಶಿಕ್ಷಣ, ವಿದೇಶಿ ಪ್ರವಾಸದ ಪ್ಯಾಕೇಜ್‌ಗಳು.
  • ದೇಶೀಯ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್‌ಗಳು, ಟಿವಿ ಬಿಡಿಭಾಗಗಳು.
  • ಕ್ಯಾನ್ಸರ್, ಮಧುಮೇಹ, ಮತ್ತು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 17 ಬಗೆಯ ಔಷಧಗಳು.
  • ಅಣುವಿದ್ಯುತ್ ಯೋಜನೆಗಳಿಗೆ ಬಳಸುವ ಉಪಕರಣಗಳು, ವಿಮಾನದ ಬಿಡಿಭಾಗಗಳು.
  • ಚಪ್ಪಲಿಗಳು, ಮೈಕ್ರೋ ಓವನ್ ಬಿಡಿಭಾಗಗಳು.
  • ದೇಶೀಯ ಮೀನುಗಳು/ಮೀನುಗಾರಿಕೆ ಉತ್ಪನ್ನಗಳು.
  • ವಿದ್ಯುತ್ ಪ್ರಸರಣ (ಎನರ್ಜಿ ಟ್ರಾನ್ಸ್‌ಮಿಷನ್) ಉಪಕರಣಗಳು, ಬಂಡವಾಳ ಸರಕುಗಳು (ಕ್ಯಾಪಿಟಲ್ ಗೂಡ್ಸ್), ಪ್ರಮುಖ ಖನಿಜಗಳು (ಕ್ರಿಟಿಕಲ್ ಮಿನರಲ್ಸ್).

Related Articles

ಇತ್ತೀಚಿನ ಸುದ್ದಿಗಳು