ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಮತ್ತೊಮ್ಮೆ ಚುನಾವಣಾ ಗಂಟೆ ಮೊಳಗಿದೆ. ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಇಸಿ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ನಡೆಯಲಿದೆ.
ಒಟ್ಟು 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಹರಿಯಾಣ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲಾ 90 ಸ್ಥಾನಗಳಿಗೆ ಅಕ್ಟೋಬರ್ 1ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ‘2024ರ ಲೋಕಸಭೆ ಚುನಾವಣೆಯು ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯಾಗಿದೆ. ಚುನಾವಣೆಗಳು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ಪೂರ್ಣಗೊಂಡಿವೆ. ಯುವಕರಿಂದ ಹಿಡಿದು ವಯೋವೃದ್ಧರವರೆಗೂ ದೇಶ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ನೆರೆದು ಮತದಾನದ ಹಕ್ಕನ್ನು ಚಲಾಯಿಸಿದರು. ಅದರಲ್ಲೂ ಜಮ್ಮು-ಕಾಶ್ಮೀರದ ಚುನಾವಣೆಯಲ್ಲಿ ಅಲ್ಲಿನ ಮತದಾರರು ಉತ್ಸಾಹ ತೋರಿದ್ದಾರೆ. ಈ ಬಾರಿ ಹಿಂಸಾಚಾರವನ್ನು ಬಿಟ್ಟು ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಆದ್ಯತೆ ನೀಡಿದ್ದಾರೆʼ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.