ನವದೆಹಲಿ: ಕೆಲವೇ ದಿನಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ (EC) ಅಧಿಕಾರಿಗಳು ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದು ಸಂಚಲನ ಮೂಡಿಸಿದೆ.
ಕೋಪರ್ನಿಕಸ್ ಮಾರ್ಗದಲ್ಲಿರುವ ಕಪುರ್ತಲಾ ಹೌಸಿನಲ್ಲಿ ಹುಡುಕಾಟ ನಡೆಸಲಾಯಿತು. ಚುನಾವಣೆಯ ಸಮಯದಲ್ಲಿ ಮತದಾರರನ್ನು ಆಕರ್ಷಿಸಲು ಹಣವನ್ನು ವಿತರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರು ಮತ್ತು ದೆಹಲಿ ಪೊಲೀಸರು ಸಹ ಶೋಧದಲ್ಲಿ ಭಾಗವಹಿಸಿದ್ದರು. ದೆಹಲಿ ಪೊಲೀಸರು ಪಂಜಾಬ್ ಸರ್ಕಾರಿ ಸ್ಟಿಕ್ಕರ್ ಮತ್ತು ನೋಂದಣಿ ಸಂಖ್ಯೆಯನ್ನು ಹೊಂದಿರುವ ಖಾಸಗಿ ವಾಹನವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ಈ ಶೋಧಗಳು ನಡೆದಿವೆ ಎಂಬುದು ಗಮನಾರ್ಹ.
ಪಂಜಾಬ್ ಭವನದ ಬಳಿ ಮದ್ಯ, ನಗದು ಮತ್ತು ಎಎಪಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಹೊಂದಿದ್ದ ವಾಹನವನ್ನು ವಶಪಡಿಸಿಕೊಂಡಿರುವ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಶೋಧಗಳನ್ನು ಎಎಪಿ ಬಲವಾಗಿ ಖಂಡಿಸಿತು.