ದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ಪ್ರಕ್ರಿಯೆಯ ವೇಳೆ ಅರ್ಹ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂಬ ತೀವ್ರ ವಿವಾದ ಹಾಗೂ ವಿರೋಧ ಪಕ್ಷಗಳ ಆಕ್ರೋಶದ ನಡುವೆಯೇ, ಭಾರತ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ವಿಶೇಷ ಆಂದೋಲನ (ಸ್ಪೆಷಲ್ ಡ್ರೈವ್) ನಡೆಸಲು ಆದೇಶಿಸಿದೆ.
ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರು ಮತ್ತು ಹೊಸ/ಯುವ ಮತದಾರರನ್ನು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಆಯೋಗ ಅಕ್ಟೋಬರ್ 1 ರಂದು ಅಧಿಕೃತ ನಿರ್ದೇಶನ ರವಾನಿಸಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಸ್‌ಐಆರ್ ಪೂರ್ವದ ಮತದಾರರ ಪಟ್ಟಿಯನ್ನು ಹಾಲಿ ಪ್ರಕಟಿಸಲಾದ ಅಂತಿಮ ಪಟ್ಟಿಯೊಂದಿಗೆ ತಾಳೆ ನೋಡಲಿದ್ದಾರೆ. ಈ ಹಿಂದೆ ಹೆಸರಿದ್ದು, ಪ್ರಸ್ತುತ ಪಟ್ಟಿಯಿಂದ ಬಿಟ್ಟುಹೋಗಿರುವ ಮತದಾರರ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ, ಅವರ ಮನೆ-ಮನೆಗೆ (H2H) ಖುದ್ದು ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಿದ್ದಾರೆ.
ಅರ್ಹ ಮತದಾರರಿಂದ ಸ್ಥಳದಲ್ಲೇ ‘ಫಾರ್ಮ್ 6’ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯನ್ನು ಸುಮಾರು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಪ್ರತಿ ಬಿಎಲ್‌ಒ ವಾರಕ್ಕೆ ಕನಿಷ್ಠ 20 ರಿಂದ 25 ಮತದಾರರ ಮನೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ, ಸಿದ್ಧಪಡಿಸಿದ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರೊಂದಿಗೆ (ಬಿಎಲ್‌ಎ) ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ನಂತರ ಭರ್ತಿಯಾದ ಫಾರ್ಮ್ 6 ಮತ್ತು ಸ್ಥಳ ಪರಿಶೀಲನಾ ವರದಿಗಳನ್ನು ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಇಆರ್‌ಒ) ಸಲ್ಲಿಸಲಾಗುತ್ತದೆ.
ಇದರ ಜೊತೆಗೆ, ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಮತಗಟ್ಟೆ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲು ಹಾಗೂ ರಾತ್ರಿ ಆಶ್ರಯ ತಾಣಗಳು (ನೈಟ್ ಶೆಲ್ಟರ್), ಕಾರ್ಮಿಕರ ಕಾಲೋನಿಗಳು, ನಿರಾಶ್ರಿತರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾರರಿಗಾಗಿ ವಿಶೇಷ ಕ್ಯಾಂಪ್‌ಗಳನ್ನು ನಡೆಸಲು ಆಯೋಗ ಸೂಚಿಸಿದೆ. ಈ ಅಭಿಯಾನದ ಪ್ರಗತಿಯನ್ನು ಸಿಇಒ, ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಮತ್ತು ಇಆರ್‌ಒ ಮಟ್ಟದಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುವಂತೆ ಆದೇಶಿಸಲಾಗಿದೆ.
