Home ದೇಶ ಸ್ವಯಂ ನಿವೃತ್ತಿ ಪಡೆದು ರಿಲಯನ್ಸ್‌ ಕಂಪನಿ ಸೇರಿಕೊಂಡ ಇಬ್ಬರು ಸಿಎಂಗಳನ್ನು ಬಂಧಿಸಿದ್ದ ಇಡಿ ಅಧಿಕಾರಿ

ಸ್ವಯಂ ನಿವೃತ್ತಿ ಪಡೆದು ರಿಲಯನ್ಸ್‌ ಕಂಪನಿ ಸೇರಿಕೊಂಡ ಇಬ್ಬರು ಸಿಎಂಗಳನ್ನು ಬಂಧಿಸಿದ್ದ ಇಡಿ ಅಧಿಕಾರಿ

0

ದೆಹಲಿ: ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿ ದೇಶಾದ್ಯಂತ ಗುರುತಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿ ಕಪಿಲ್ ರಾಜ್ (45) ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅವರು 2009ರ ಬ್ಯಾಚ್‌ನ ಇಂಡಿಯನ್ ರೆವಿನ್ಯೂ ಸರ್ವಿಸ್ ಅಧಿಕಾರಿಯಾಗಿದ್ದು, ಇಡಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ತಿಂಗಳು 17ರಂದು ವೈಯಕ್ತಿಕ ಕಾರಣಗಳನ್ನು ನೀಡಿ ಸ್ವಯಂಪ್ರೇರಿತವಾಗಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ಹಣಕಾಸು ಸಚಿವಾಲಯ ಹೊರಡಿಸಿದ ಆದೇಶಗಳಿಂದ ತಿಳಿದುಬಂದಿದೆ.

ಕಪಿಲ್ ರಾಜ್ ಅವರು ಇಡಿಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ, ಅವರು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತು ಜಾರ್ಖಂಡ್ ಭೂ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದ್ದರು. ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಡಿಎಚ್‌ಎಫ್‌ಎಲ್ ಹಣಕಾಸು ವಂಚನೆ ಪ್ರಕರಣಗಳನ್ನೂ ಅವರು ತನಿಖೆ ನಡೆಸಿದ್ದರು.

ಆದರೆ, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅವರು ನಿರ್ವಹಿಸಲಿರುವ ಪಾತ್ರದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕಪಿಲ್ ರಾಜ್ ಅವರು ಉತ್ತರ ಪ್ರದೇಶದ ಲಕ್ನೋ ಮೂಲದವರು. ಸಹರಾನ್‌ಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಪಿಲ್, ಬಿ.ಟೆಕ್ (ಎಲೆಕ್ಟ್ರಾನಿಕ್ಸ್) ಪದವೀಧರರಾಗಿದ್ದಾರೆ.

ಇತ್ತೀಚೆಗೆ, ಸಿಬಿಡಿಟಿ ಮಾಜಿ ಅಧ್ಯಕ್ಷ ಕೆ.ವಿ. ಚೌಧರಿ ಅವರು ಆರ್‌ಐಎಲ್ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ, ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಧ್ರುವ ಅಡ್ವೈಸರ್ಸ್ ಎಲ್‌ಎಲ್‌ಪಿ ಸಂಸ್ಥಾಪಕ ದಿನೇಶ್ ಕನಬರ್ ಕೂಡ ಆರ್‌ಐಎಲ್‌ನಲ್ಲಿ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಕಪಿಲ್ ರಾಜ್ ಕೂಡ ಆರ್‌ಐಎಲ್‌ಗೆ ಸೇರ್ಪಡೆಯಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version