ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಸುಂಕ ಹೆಚ್ಚಳದ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಉತ್ತರ ನೀಡಲು ವಿಫಲರಾಗುತ್ತಿರುವುದಕ್ಕೆ ಅದಾನಿ ಮೇಲಿರುವ ಭ್ರಷ್ಟಾಚಾರ ಆರೋಪಗಳೇ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಅದಾನಿ ವಿರುದ್ಧ ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ತನಿಖೆಯೇ ಟ್ರಂಪ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಪ್ರಧಾನಿ ಮೋದಿ ಬಲವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಲು ಕಾರಣವಾಗಿದೆ. ಇದನ್ನು ಭಾರತದ ಜನರು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಎಕ್ಸ್ ವೇದಿಕೆಯಲ್ಲಿ ಆರೋಪಿಸಿದ್ದಾರೆ.
ಮೋದಿ ಮತ್ತು ‘ಎಎ’ (ಆಂಗ್ಲ ಅಕ್ಷರಗಳು) ನಡುವಿನ ಆರ್ಥಿಕ ಸಂಬಂಧಗಳು, ಹಾಗೂ ರಷ್ಯಾ ತೈಲ ವಹಿವಾಟುಗಳನ್ನು ಬಯಲು ಮಾಡುವ ಎಚ್ಚರಿಕೆ ಅದರಲ್ಲಿ ಒಂದು ಎಂದು ರಾಹುಲ್ ಆರೋಪಿಸಿದ್ದಾರೆ. “ಮೋದಿ ಅವರ ಕೈಗಳು ಕಟ್ಟಿಹಾಕಲ್ಪಟ್ಟಿವೆ” ಎಂದೂ ಅವರು ಹೇಳಿದ್ದಾರೆ. ‘ಎಎ’ ಎಂದರೆ ಏನು ಎಂದು ರಾಹುಲ್ ಸ್ಪಷ್ಟಪಡಿಸದಿದ್ದರೂ, ವಿಶ್ವದ ಕುಬೇರರಾದ ಅದಾನಿ ಮತ್ತು ಅಂಬಾನಿಗಳೊಂದಿಗೆ ಮೋದಿ ಅವರ ಸಂಬಂಧಗಳ ಬಗ್ಗೆ ಅವರು ಈ ಹಿಂದೆ ಹಲವು ಬಾರಿ ಆರೋಪಗಳನ್ನು ಮಾಡಿರುವ ದೃಷ್ಟಿಯಿಂದ, ಆ ‘ಎಎ’ ಯಾರು ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್‌ನ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಗೌತಮ್ ಅದಾನಿ ತಮ್ಮ ಹುದ್ದೆಯಿಂದ ಕೆಳಗಿಳಿದಿರುವುದು ರಾಹುಲ್ ಗಾಂಧಿ ಮಾಡುತ್ತಿರುವ ಈ ವ್ಯಾಖ್ಯಾನಗಳಿಗೆ ಮತ್ತಷ್ಟು ಬಲ ನೀಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅದಾನಿ, ಅವರ ಸಹೋದರನ ಪುತ್ರ ಮತ್ತು ಅದಾನಿ ಗ್ರೀನ್ ಎನರ್ಜಿ ನಿರ್ದೇಶಕ ಸಾಗರ್ ಅದಾನಿ ಸೇರಿದಂತೆ ಏಳು ಜನರ ವಿರುದ್ಧ ಅಮೆರಿಕದ ನ್ಯಾಯಾಲಯಗಳಲ್ಲಿ ಆರೋಪಗಳು ದಾಖಲಾಗಿದ್ದವು.