ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸಿದ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಉದ್ಯಮಿ ರಾಜ್ ಕುಂದ್ರಾ ಹಾಗೂ ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಜನವರಿ 19ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಲಾಗಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಇಡಿ ಸಲ್ಲಿಸಿದ್ದ ಪೂರಕ ಆರೋಪಪಟ್ಟಿಯಲ್ಲಿ ರಾಜ್ ಕುಂದ್ರಾ ಮತ್ತು ರಾಜೇಶ್ ಸತಿಜಾ ಅವರನ್ನು ಆರೋಪಿಗಳಾಗಿ ಸೇರಿಸಲಾಗಿತ್ತು.
ಇಡಿ ತನಿಖೆಯ ಪ್ರಕಾರ, ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಸ್ಥಾಪಿಸುವ ಉದ್ದೇಶದಿಂದ, ಗೇನ್ ಬಿಟ್‌ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿರುವ ಅಮಿತ್ ಭಾರದ್ವಾಜ್ ಅವರಿಂದ ಕುಂದ್ರಾ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ. ಒಪ್ಪಂದ ಕಾರ್ಯರೂಪಕ್ಕೆ ಬರದ ಹಿನ್ನೆಲೆಯಲ್ಲಿ, ಪ್ರಸ್ತುತ 150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 285 ಬಿಟ್‌ಕಾಯಿನ್‌ಗಳು ಕುಂದ್ರಾ ಅವರ ಬಳಿ ಇರುವುದಾಗಿ ಇಡಿ ಆರೋಪಿಸಿದೆ.
ತಾವು ಈ ವ್ಯವಹಾರದಲ್ಲಿ ಕೇವಲ ಮಧ್ಯವರ್ತಿಯಾಗಿದ್ದರು ಎಂಬ ಕುಂದ್ರಾ ಅವರ ವಾದಕ್ಕೆ ಯಾವುದೇ ದಾಖಲೆ ಸಾಕ್ಷ್ಯ ಒದಗಿಸಲಾಗಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ‘ಟರ್ಮ್ ಶೀಟ್’ ಎಂಬ ಒಪ್ಪಂದಕ್ಕೆ ರಾಜ್ ಕುಂದ್ರಾ ಮತ್ತು ಅಮಿತ್ ಭಾರದ್ವಾಜ್ ಅವರ ತಂದೆ ಮಹೇಂದ್ರ ಭಾರದ್ವಾಜ್ ನಡುವೆ ಸಹಿ ಹಾಕಲಾಗಿದೆ ಎಂದು ಇಡಿ ಹೇಳಿದೆ.
ವಹಿವಾಟು ನಡೆದ ಬಳಿಕ ಏಳು ವರ್ಷಗಳಿಗೂ ಹೆಚ್ಚು ಅವಧಿ ಕಳೆದರೂ, ಐದು ಕಂತುಗಳಲ್ಲಿ ಪಡೆದ ಬಿಟ್‌ಕಾಯಿನ್‌ಗಳ ನಿಖರ ಸಂಖ್ಯೆಯನ್ನು ಕುಂದ್ರಾ ವಿವರವಾಗಿ ನೆನಪಿಸಿಕೊಂಡಿರುವುದು, ಅವರು ಕೇವಲ ಮಧ್ಯವರ್ತಿಯಾಗಿರದೆ ಲಾಭದಾಯಕ ಮಾಲೀಕರಾಗಿಯೇ ಬಿಟ್‌ಕಾಯಿನ್‌ಗಳನ್ನು ಸ್ವೀಕರಿಸಿದ್ದಾರೆ ಎಂಬುದನ್ನು ಬಲಪಡಿಸುತ್ತದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇದೇ ವೇಳೆ, 2018ರಿಂದ ಅನೇಕ ಬಾರಿ ಅವಕಾಶ ನೀಡಿದರೂ, ಬಿಟ್‌ಕಾಯಿನ್ ವರ್ಗಾವಣೆಗೆ ಬಳಸಿದ ವ್ಯಾಲೆಟ್ ವಿಳಾಸಗಳನ್ನು ಒದಗಿಸಲು ಕುಂದ್ರಾ ವಿಫಲರಾಗಿದ್ದಾರೆ ಎಂದು ಇಡಿ ಆರೋಪಿಸಿದೆ. ಐಫೋನ್ X ಹಾನಿಯಾದ ಕಾರಣ ಮಾಹಿತಿ ಲಭ್ಯವಿಲ್ಲ ಎಂಬ ಅವರ ಹೇಳಿಕೆಯನ್ನು, ಸಾಕ್ಷ್ಯ ನಾಶ ಮತ್ತು ಅಪರಾಧದ ಆದಾಯ ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನವೆಂದು ಇಡಿ ಪರಿಗಣಿಸಿದೆ.
