Friday, April 26, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ರಾಜ್ಯೋತ್ಸವ 2023 | ಸೂಲಗಿತ್ತಿ ಮಲ್ಲಮ್ಮಗೆ ಎಡೆದೊರೆ ನಾಡು ಪ್ರಶಸ್ತಿ

ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಯಚೂರು ಜಿಲ್ಲಾಡಳಿತದಿಂದ ನೀಡುವ ಎಡೆದೊರೆ ನಾಡು ಸಾಧಕರ ಪ್ರಶಸ್ತಿ ಅನೇಕ ವರ್ಷಗಳಿಂದ ಸೂಲಗಿತ್ತಿಯಾಗಿ, ಜನಪದ ವೈದ್ಯೆಯಾಗಿ  ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಕವಿತಾಳ ಪಟ್ಟಣದ ಸೂಲಗಿತ್ತಿ ಮಲ್ಲಮ್ಮ ಅವರಿಗೆ  ಒಲಿದು ಬಂದಿದೆ.

ತುಂಬು ಗರ್ಭಿಣಿಯರ ಪಾಲಿನ ಸಾಕ್ಷಾತ್ ದೇವರ ಸ್ವರೂಪಿ, ಬಡವರ ಪಾಲಿನ ಭಾಗ್ಯವತಿ ಸೂಲಗಿತ್ತಿ ಮಲ್ಲಮ್ಮ ಹತ್ತು ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿದವರು. ಗಿಡಮೂಲಿಕೆ ಔಷಧಿ ನೀಡುವಲ್ಲಿ ನಿಪುಣತೆ ಹೊಂದಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡ ಗಟ್ಟಿಗಿತ್ತಿಯೂ ಹೌದು. ಯಾರೇ ಕರೆದರೂ ಇಲ್ಲವೆನ್ನದೆ  ಎಲ್ಲ ವರ್ಗದವರಿಗೂ ಸೂಲಗಿತ್ತಿ ಸೇವೆಯನ್ನು ಮಾಡುತ್ತಾ ಬರುತ್ತಿರುವ ಇವರ ಗುಣ, ವೃತ್ತಿಗೆ ತಲೆಬಾಗಿ ಸಲಾಂ ಹೊಡಯಲೇ ಬೇಕಿದೆ.

ಸ್ಥಳೀಯವಾಗಿ ಸೂಲಗಿತ್ತಿ ಮಲ್ಲಮ್ಮ, ವೇಷಗಾರ ಮಲ್ಲಮ್ಮ ಎಂತಲೂ ಪ್ರಸಿದ್ಧಿ ಪಡೆದಿರುವ ಇವರು  ಬರೀ ಸೂಲಗಿತ್ತಿ ವೃತ್ತಿಗೆ ಸೀಮಿತವಾಗದೇ, ಗಿಡಮೂಲಿಕೆಯ ಔಷಧಿ ನೀಡುವ ಪರಿಣತಿ ಹೊಂದಿ ಜನಪದ ವೈದ್ಯೆಯಾಗಿಯೂ ಬಡವರ ಬಾಯಲ್ಲಿ ಇದ್ದಾರೆ. ಸಹಜ-ಸರಳ, ಆರೋಗ್ಯವಂತ ಜನನಕ್ಕೆ ಕಾರಣವಾಗಿರುವ ಮಲ್ಲಮ್ಮರ ತಾಯ್ತನ, ಅಂತಃಕರಣ, ವಿಶ್ವಾಸ, ಮಾನವೀಯತೆಯ ಬಗ್ಗೆ ಹೇಳಲು ಅಸಾಧ್ಯ. ಬಡ ಹೆಣ್ಣುಮಕ್ಕಳ ಸೇವೆ ಮಾಡುತ್ತಿರುವ, ನೂರಾರು ಗಿಡಮೂಲಿಕೆಗಳಿಂದ ಔಷಧಿಯನ್ನು ನೀಡುವ, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯ ಕಾಪಾಡುವ ಈಕೆ ಮಹಾಮಾತೆಯೇ ಸರಿ.

ಬೇರೆ-ಬೇರೆ ಕಡೆಯಿಂದ ಗಿಡಮೂಲಿಕೆಯ ಔಷಧಿಗಾಗಿ ಹಾಗೂ ಸೂಲಗಿತ್ತಿ ಎಂಬ ಕಾರಣಕ್ಕೆ ಬಾಣಂತಿಯರು, ಇತರರೂ ಇವರ ಬಳಿ ಬರುತ್ತಲೇ ಇರುತ್ತಾರೆ.. ಬಂದವರೆಲ್ಲ ಇವರ ಕೈಗುಣದಿಂದ ಗುಣವೂ ಆಗುತ್ತಿದ್ದಾರೆ. ಹಣಕ್ಕಾಗಿ ಕೆಲಸ ಮಾಡಿದ್ರೆ ನಾನು ಮಾಡುವ ಕೆಲಸ ಹುಸಿಯಾಗುತ್ತದೆ ಎಂದು ನಂಬಿರುವ ಇವರ ಬದುಕು‌ ಮಾತ್ರ ಹರಕು ಜೋಪಡಿಯಲ್ಲಿದೆ. ಇಂತಹ ಬಹಳ ಸೂಲಗಿತ್ತಿಯರು ಎಲೆಮರೆಯ ಕಾಯಿಗಳಂತೆ ಈ ಭಾಗದಲ್ಲಿ ಕಾಣಸಿಗುತ್ತಾರೆ. ಇಂತಹವರನ್ನೆಲ್ಲ ಗುರುತಿಸಿ ಬಳಸಿ ಕೊಳ್ಳುವಂತೆ ಆಗಬೇಕಿದೆ.

ಸಾಂಪ್ರದಾಯಿಕ ಹೆರಿಗೆ ಮಾಡಿಸುವುದು ಒಂದು ಮಾನವೀಯ ಹಾಗೂ ಸವಾಲಿನ‌ ಕೆಲಸವೂ ಹೌದು. ಮಲ್ಲಮ್ಮನ ಬದುಕು ಮಾತ್ರ ಸ್ವಂತ ಜಾಗವಿಲ್ಲದೇ, ಸೂರಿಲ್ಲದೇ ಕುಸಿಯುತ್ತಿದೆ. ಅವರಿಗೆ ಜಿಲ್ಲಾಡಳಿತವು ಅಗತ್ಯ ನೆರವು ಒದಗಿಸಿ, ಸಹಾಯಕ್ಕೆ ಧಾವಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.  

ನಿಮ್ಮ ನಿಸ್ವಾರ್ಥ ಜೀವಪೊರೆಯುವ ಸೇವೆಗೆ ಜಿಲ್ಲಾಮಟ್ಟದ ಪ್ರಶಸ್ತಿ ಬಂದಿದೆ, ನಿಮಗೆ ಹೇಗನ್ನಿಸುತ್ತದೆ ಎಂದು ಆತ್ಮೀಯವಾಗಿ ಅವರನ್ನು ಕೇಳಿದರೆ  “ನನಗೇನು ಎಲ್ಲವೂ ಸಂತೋಷ. ದುಡ್ಡು ಬೇಡ, ಆಸ್ತಿ ಬೇಡ. ನಾನು ಹೋದ ಕಡೆಯಲ್ಲೆಲ್ಲಾ ಮರ್ಯಾದೆ ಸಿಕ್ಕರೆ ಸಾಕು. ಮರ್ಯಾದೆ ಅಂದ್ರೆ ಹೆರಿಗೆ ಮಾಡಿಸುವುದಕ್ಕೆ ಭಯವಿಲ್ಲದಂತೆ ನನಗೆ ಅಧಿಕಾರ ಕೊಟ್ಟರೆ ಸಾಕು. ಬಾಣಂತನ ಮಾಡಿ ಮನೆಗೆ ಬರುತ್ತೇನೆ. ಅವರೇನು ಅಂತಾರೆ, ಇವರೇನು ಅಂತಾರೆ ಎಂಬ ಭಯವಿರುತ್ತದೆ ಅಲ್ವಾ, ಅದು ಇಲ್ಲದಂತೆ ನೀನು ಹೀಗೆಯೇ ಹೆರಿಗೆ ಮಾಡುತ್ತಾ ಇರಮ್ಮಾ ಅಂತ ಸರಕಾರದಿಂದ ಅನಿಸಿಕೊಂಡರೆ ಸಾಕು” ಅಂತ ಮಲ್ಲಮ್ಮ ಹೇಳಿಕೊಂಡಾಗ ಅವರ ಮುಗ್ಧತೆಗೆ  ಖುಷಿಯಾಗುತ್ತದೆ.

ಮನೆಯಲ್ಲಿ ಊಟಕ್ಕೆ ಕುಳಿತಾಗಲೂ ಊರಿನ ಬಾಣಂತಿಯರ ಹೆರಿಗೆ ನೋವಿನ ಸುದ್ದಿ ಕಿವಿಗೆ ಬಿದ್ದರೆ ಸಾಕು. ತಕ್ಷಣವೇ ಊಟ ಬಿಟ್ಟಾದರೂ ಓಡಿಹೋಗಿ ಡೆಲಿವರಿ ಮಾಡಿ ಬರುತ್ತಾಳೆಂದೂ, ಈ ತರಹ ಸಾಕಷ್ಟು ಮಾಡಿದ್ದಾರೆಂದೂ ಮಲ್ಲಮ್ಮನ ಹಿರಿಯ ಮಗಳಾದ ನಾಗಮ್ಮ ತನ್ನ ತಾಯಿಯ ಸೇವೆಯ ಬಗ್ಗೆ ಸ್ಮರಿಸಿಕೊಳ್ಳುತ್ತಾರೆ.

“ಹಡೆಯುವವಳ ನೋವು ಸೂಲಗಿತ್ತಿಗೆ ಬಾರದು” ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿ ಎಲ್ಲ ಹೆರಿಗೆಗಳ ನೋವ ತಾನೇ ಉಂಡ ಸೂತಕವಿಲ್ಲದ ಮಲ್ಲಮ್ಮನ ಸೇವೆ ಸಮಾಜಕ್ಕೆ ಮಾದರಿ ಹಾಗೂ ಅಚ್ಚರಿ. ಇವರ ಸಾಧನೆಯ ಹಾದಿಯೇ ಒಂದು ವಿಸ್ಮಯ, ವೈದ್ಯಲೋಕದ ಬೆರಗು. ಈ ಅಪರೂಪದ ಸೂಲಗಿತ್ತಿಯ ಮಾನವೀಯ  ಸೇವೆಯನ್ನು ರಾಯಚೂರು ಜಿಲ್ಲಾಡಳಿತವು ಗುರುತಿಸಿ ಎಡೆದೊರೆ ನಾಡು ಸಾಧನಾ ಪುರಸ್ಕಾರ ಪ್ರಶಸ್ತಿ ನೀಡಿದೆ. ಅವರಿಗೆ ನಮ್ಮ ಕಡೆಯಿಂದ ಅಭಿನಂದನೆಗಳು. ಅವರ ಈ ಸೇವೆಯು ಹೀಗೆಯೇ ನಿರಂತರವಾಗಿ ಸಾಗಲೆಂದು ಆಶಿಸುತ್ತೇನೆ.

ಶಿವರಾಜ್ ಮೋತಿ

ಯುವ ಬರಹಗಾರ, ಹಟ್ಟಿ ಚಿನ್ನದ ಗಣಿ

Related Articles

ಇತ್ತೀಚಿನ ಸುದ್ದಿಗಳು