ನಟ ಮತ್ತು ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆ ಮತ್ತು “ಸನಾತನ” ವಿಚಾರಗಳನ್ನು ಎದುರಿಸಲು ವಿದ್ಯೆಯೇ ಏಕೈಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮಿಳು ಸ್ಟಾರ್ ನಟ ಸೂರ್ಯ ಸ್ಥಾಪಿಸಿದ ‘ಅರಗಂ ಫೌಂಡೇಶನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಮಲ್ ಹಾಸನ್ ಅವರು ಈ ಮಹತ್ವದ ಹೇಳಿಕೆಗಳನ್ನು ನೀಡಿದರು. “ಸರ್ವಾಧಿಕಾರ ಮತ್ತು ಸನಾತನ ಸಂಕೋಲೆಗಳನ್ನು ಮುರಿಯಲು ಸಾಧ್ಯವಾಗುವ ಏಕೈಕ ಅಸ್ತ್ರವೆಂದರೆ ವಿದ್ಯೆ” ಎಂದು ಹೇಳಿದರು. ಜ್ಞಾನ ಮತ್ತು ಸಬಲೀಕರಣ ವ್ಯವಸ್ಥೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ನಿಮ್ಮ ಕೈಯಲ್ಲಿ ಬೇರೇನೂ ಇರಬಾರದು, ಕೇವಲ ವಿದ್ಯೆ ಮಾತ್ರ ಇರಬೇಕು. ವಿದ್ಯೆ ಇಲ್ಲದಿದ್ದರೆ ನಾವು ಗೆಲ್ಲಲು ಸಾಧ್ಯವಿಲ್ಲ, ಏಕೆಂದರೆ ಬಹುಸಂಖ್ಯಾತ ಮೂರ್ಖರು ನಮ್ಮನ್ನು ಸೋಲಿಸಬಹುದು. ಜ್ಞಾನ ಸೋತಂತೆ ಕಾಣಿಸಬಹುದು, ಆದರೆ ಅದು ನಮ್ಮ ಆಸ್ತಿ. ಆದ್ದರಿಂದ, ಅದನ್ನು ಸಾಧಿಸಬೇಕು” ಎಂದು ಕಮಲ್ ಹಾಸನ್ ಹೇಳಿದರು.
ನೀಟ್ ಬಗ್ಗೆ ಟೀಕೆ
ಕಮಲ್ ಹಾಸನ್ ಅವರು ‘ನೀಟ್’ ಪರೀಕ್ಷಾ ಪದ್ಧತಿಯ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದರು. ನೀಟ್ ಪರೀಕ್ಷೆಯು ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ದೂರ ಮಾಡಿದೆ ಎಂದು ಹೇಳಿದರು. 2017ರ ನಂತರ ಅನೇಕ ಬಡ ಕುಟುಂಬಗಳ ಮಕ್ಕಳು ವೈದ್ಯರಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದರು. ಈ ನೀತಿಯು ವಿದ್ಯಾರ್ಥಿಗಳನ್ನು ಹಿಂದಕ್ಕೆ ಸೆಳೆಯುತ್ತಿದೆ ಎಂದು ಅವರು ಹೇಳಿದರು, ಹಾಗಾಗಿ ತಾವು ನೀಟ್ ಅನ್ನು ವಿರೋಧಿಸುತ್ತಿರುವುದಾಗಿ ವಿವರಿಸಿದರು.
ರಾಜಕೀಯದ ಕುರಿತು
ರಾಜಕೀಯದ ಬಗ್ಗೆ ಮಾತನಾಡುತ್ತಾ, “ನಾಯಕತ್ವ ಎಂದರೆ ಅಧಿಕಾರದಲ್ಲಿರುವುದು ಅಲ್ಲ, ಸಮಾಜದೊಂದಿಗೆ ಬೆರೆಯುವುದು. ಇದು ಅರ್ಥವಾಗಲು ನನಗೆ 70 ವರ್ಷ ಬೇಕಾಯಿತು” ಎಂದು ಕಮಲ್ ಹಾಸನ್ ಹೇಳಿದರು. ಸಿನಿಮಾಗಳಲ್ಲಿ ನಮ್ಮ ನಟನೆಗೆ ಕಿರೀಟ ಸಿಗುತ್ತದೆ, ಆದರೆ ಸಾಮಾಜಿಕ ಸೇವೆಯಲ್ಲಿ ಮುಳ್ಳಿನ ಕಿರೀಟವನ್ನು ಹೊರಬೇಕಾಗುತ್ತದೆ. ಇದನ್ನು ಸ್ವೀಕರಿಸಲು ದೃಢವಾದ ಹೃದಯ ಬೇಕು ಎಂದು ಅವರು ಹೇಳಿದರು.