Home ದೇಶ ಪಾರ್ಲಿಮೆಂಟ್ ಸ್ತಬ್ಧ: ‘ಎಸ್‌ಐಆರ್‌’ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಪಟ್ಟು

ಪಾರ್ಲಿಮೆಂಟ್ ಸ್ತಬ್ಧ: ‘ಎಸ್‌ಐಆರ್‌’ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಪಟ್ಟು

0

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದ ಪರಿಣಾಮವಾಗಿ ಸಂಸತ್ತು ಸ್ತಬ್ಧಗೊಂಡಿದೆ. ಲೋಕಸಭೆ ಆರಂಭವಾಗುತ್ತಿದ್ದಂತೆಯೇ, ಪ್ರತಿಪಕ್ಷದ ಸಂಸದರು SIR ಬಗ್ಗೆ ಚರ್ಚೆಗೆ ಒತ್ತಾಯಿಸಿ ಸಭಾ ವೇದಿಕೆಯ ಬಳಿಗೆ ಧಾವಿಸಿದರು. ಅವರು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಇದರಿಂದ ಸದನದಲ್ಲಿ ತೀವ್ರ ಗೊಂದಲ ಉಂಟಾಯಿತು. ತಕ್ಷಣ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು.

ಸದನದ ಮುಂದೂಡಿಕೆಯ ನಂತರ, ಸಂಸತ್ತಿನ ಆವರಣದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಸರ್ಕಾರವು ದೇಶದ ಸಾಂವಿಧಾನಿಕ ಮತದಾನದ ಹಕ್ಕನ್ನು ನಾಶ ಮಾಡುತ್ತಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು. ಬಿಹಾರದಲ್ಲಿ SIRನಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ತೆಗೆದುಹಾಕಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. SIR ಕುರಿತು ಸಂಸತ್ತಿನಲ್ಲಿ ಸಮಗ್ರ ಮತ್ತು ಪಾರದರ್ಶಕ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. SIR ದಲಿತ ವರ್ಗಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಶೀಘ್ರದಲ್ಲೇ ಅಸ್ಸಾಂ, ಪಶ್ಚಿಮ ಬಂಗಾಳದಂತಹ ಇತರ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮಧ್ಯಾಹ್ನ ಎರಡು ಗಂಟೆಗೆ ಸದನ ಪುನರಾರಂಭಗೊಂಡಾಗಲೂ ಪ್ರತಿಪಕ್ಷಗಳ ಗದ್ದಲ ಮುಂದುವರೆಯಿತು. ಇದರಿಂದ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಕೆಲವೇ ನಿಮಿಷಗಳಲ್ಲಿ ಸದನವನ್ನು ಮುಂದೂಡಲಾಯಿತು. ಮಧ್ಯಾಹ್ನ 2 ಗಂಟೆಗೆ ಸದನ ಪುನಃ ಸೇರಿದ್ದಾಗ, ಸಭಾಧ್ಯಕ್ಷ ಸ್ಥಾನದಲ್ಲಿದ್ದ ಜಗದಂಬಿಕಾ ಪಾಲ್, ಎರಡು ಪ್ರಮುಖ ಕ್ರೀಡಾ ಮಸೂದೆಗಳು ಸೋಮವಾರ ಚರ್ಚೆಗೆ ಇವೆ, ಅವುಗಳ ಬಗ್ಗೆ ಚರ್ಚೆ ನಡೆಸಿ ಅಂಗೀಕರಿಸದಿದ್ದರೆ ಕ್ರೀಡಾಪಟುಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗೊಂದಲದ ನಡುವೆಯೇ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಕಸ್ಟಮ್ಸ್ ಸುಂಕಗಳ ಕುರಿತ ಪ್ರಸ್ತಾವನೆಯನ್ನು ಮಂಡಿಸಿದರು. ಅದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಮಾಜಿ ಸಿಎಂ ಶಿಬು ಸೋರೆನ್‌ಗೆ ಸಂಸತ್ತಿನ ಉಭಯ ಸದನಗಳಿಂದ ಗೌರವ ನಮನ

ಇದಕ್ಕೂ ಮುನ್ನ, ಸೋಮವಾರ ನಿಧನರಾದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಸಂಸ್ಥಾಪಕ ಶಿಬು ಸೋರೆನ್ ಅವರಿಗೆ ಸಂಸತ್ತಿನ ಉಭಯ ಸದನಗಳು ಗೌರವ ನಮನ ಸಲ್ಲಿಸಿದವು. ಸದಸ್ಯರೆಲ್ಲರೂ ಮೌನ ಆಚರಿಸಿ ಸಂತಾಪ ಸೂಚಿಸಿದರು. ನಂತರ, ರಾಜ್ಯಸಭೆಯು ಅವರ ಗೌರವಾರ್ಥವಾಗಿ ಸದನವನ್ನು ಮಂಗಳವಾರಕ್ಕೆ ಮುಂದೂಡಿತು. ಬುಡಕಟ್ಟು ಜನರ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ನಡೆದ ಹೋರಾಟದಲ್ಲಿ ಶಿಬು ಸೋರೆನ್ ಪ್ರಮುಖ ಧ್ವನಿಯಾಗಿದ್ದರು ಎಂದು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಹೇಳಿದರು. ಅವರು ‘ದಿಶೋಮ್ ಗುರು’ ಮತ್ತು ಜನರ ‘ಗುರೂಜಿ’ ಎಂಬ ಹೆಸರಿನಿಂದ ಗುರುತಿಸಿಕೊಂಡ ವಿಶೇಷ ಆದಿವಾಸಿ ನಾಯಕ ಎಂದು ಹೇಳಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬುಡಕಟ್ಟು ಸಮುದಾಯಗಳ ಉನ್ನತಿ ಮತ್ತು ತಮ್ಮ ರಾಜ್ಯದ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

You cannot copy content of this page

Exit mobile version