ಸಾಂಟಿಯಾಗೊ: ಚಿಲಿ (Chile) ದೇಶದ ರಾಜಧಾನಿ ಸ್ಯಾಂಟಿಯಾಗೋದಲ್ಲಿ (Santiago) ಶಿಕ್ಷಣ ಕ್ಷೇತ್ರದ ಬಜೆಟ್ (Budget) ಕಡಿತವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆ (Students Protest) ಉಗ್ರ ರೂಪ ತಾಳಿದೆ. ಅಧ್ಯಕ್ಷ ಹೊಸೆ ಆಂಟೋನಿಯೋ ಕಸ್ಟ್ ನೇತೃತ್ವದ ಸರ್ಕಾರವು ಸಾರ್ವಜನಿಕ ಶಿಕ್ಷಣಕ್ಕೆ ನೀಡಲಾಗುವ ಅನುದಾನದಲ್ಲಿ ಕಡಿತ ಮಾಡಲು ಮುಂದಾಗಿರುವುದನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಬುಧವಾರ ಸಲ್ಲಿಕೆಯಾದ 2027ರ ಬಜೆಟ್ ಮಸೂದೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸುಮಾರು 176 ಬಿಲಿಯನ್ ಡಾಲರ್ (17.3 ಟ್ರಿಲಿಯನ್ ಪೆಸೊ) ಅನುದಾನ ಕಾಯ್ದಿರಿಸಲಾಗಿದ್ದು, ಇದು ಕಳೆದ ಬಾರಿಗಿಂತ ಶೇಕಡಾ 0.57 ರಷ್ಟು ಕಡಿಮೆಯಾಗಿದೆ. ಆರ್ಥಿಕ ಅಭಿವೃದ್ಧಿ, ಉದ್ಯೋಗ ಭದ್ರತೆ ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲು ಬಜೆಟ್ ಕಡಿತ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈ ನಿರ್ಧಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಜ್ಜುಗುಜ್ಜು ಮಾಡಲಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದರೆ, ಉದ್ರಿಕ್ತ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಿ ಹಾಗೂ ಕಣ್ಣೀರು ಅನಿಲದ ಡಬ್ಬಿಗಳನ್ನು ಮರಳಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗಳಲ್ಲಿ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವೆ ಭಾರೀ ಘರ್ಷಣೆ ನಡೆದಿದ್ದು, ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
