ಹೈದರಾಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ವ್ಯಕ್ತಿಗಳಿಗೆ ಆಂಧ್ರಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು ಎರಡೂವರೆ ಕೋಟಿ ರೂಪಾಯಿ ಹಣ ನೀಡಿ ವಂಚನೆಗೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಜೆಪಿಗೆ ಚುನಾವಣಾ ಬಾಂಡ್ ಖರೀದಿಸಲು ಭಾವಿಸಿ ಇಬ್ಬರು ವ್ಯಕ್ತಿಗಳಿಗೆ 2.5 ಕೋಟಿ ರೂ.ಗಳನ್ನು ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಇನ್ನೊಂದು ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ನ್ಯಾಯಾಧೀಶರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಆ ವ್ಯಕ್ತಿಗಳು ಅಮೇರಿಕಾದಲ್ಲಿ ತಮ್ಮ ಮೊಮ್ಮಕ್ಕಳಿಗೆ ಉದ್ಯೋಗ ನೀಡುವ ವಾಗ್ದಾನವನ್ನು ಅವರು ಪಡೆದಿದ್ದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಹೈದರಾಬಾದಿನ ನಿವಾಸಿಗಳಾದ RSS ಕಾರ್ಯಕರ್ತರು ಎಂದು ಪರಿಚಯಿಸಿಕೊಂಡು ನನ್ನ ಹತ್ತಿರ ಬಂದಿದ್ದ ಇಬ್ಬರು ವ್ಯಕ್ತಿಗಳಿಗೆ ನಾನು ಹಣ ನೀಡಿದ್ದೇನೆ. ಎರಡು ವರ್ಷಗಳಿಂದ ಆ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಇತ್ತ ನನಗೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಕೆಲಸವನ್ನು ಮಾಡಿಕೊಟ್ಟಿಲ್ಲ ಎಂದು ನ್ಯಾಯಾಧೀಶರು ಅಸಹಾಯಕತೆ ತೋಡಿಕೊಂಡಿರುವುದಾಗಿ ನ್ಯೂಸ್ ಮಿನಿಟ್ ಹೇಳಿದೆ. ಇಬ್ಬರು ವ್ಯಕ್ತಿಗಳ ವಿರುದ್ದ ನ್ಯಾಯಾಧೀಶರು ದೂರು ದಾಖಲಿಸಿದ್ದಾರೆ. ಈ ಪೈಕಿ ಒಬ್ಬನಿಗೆ ಜಾಗತಿಕ ಹಿಂದೂ ಕಾಂಗ್ರೆಸ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ.
ಚುನಾವಣಾ ಬಾಂಡ್‌ಗಳು ಬಡ್ಡಿ ರಹಿತ ಬಾಂಡ್‌ಗಳಾಗಿವೆ. ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾಗರಿಕರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಯಾವುದೇ ಮೌಲ್ಯಕ್ಕೆ ಖರೀದಿಸಬಹುದು ಮತ್ತು ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ನೀಡಬಹುದು. ಇತ್ತೀಚಿನ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ. ಅದು ಅಸಂವಿಧಾನಿಕ ಎಂದಿದೆ. ಇದರಿಂದ ಅಪರಿಚಿತರಿಗೆ ಹಣ ಕೊಟ್ಟಿರುವ ನ್ಯಾಯಾಧೀಶರು ಬಾಂಡ್‌ಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಪಡೆದ ಇಬ್ಬರ ವಿರುದ್ದ ವಂಚನೆ ದೂರು ದಾಖಲಿಸಿದ್ದಾರೆ.
ನಾವು ಹಣದೊಂದಿಗೆ ಚುನಾವಣಾ ಬಾಂಡ್ ಗಳನ್ನು ಖರೀದಿಸಿ ಬಿಜೆಪಿ ಪಕ್ಷಕ್ಕೆ ನೀಡುತ್ತೇವೆ. ಅದಕ್ಕೆ ಪ್ರತಿಯಾಗಿ ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ನಿಮ್ಮ ಮೊಮ್ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುತ್ತೇವೆ ಎಂದು ಇಬ್ಬರು ವ್ಯಕ್ತಿಗಳು ಎಂದು ಭರವಸೆ ನೀಡಿದ್ದರು. ಈ ಭರವಸೆಯನ್ನು ನಂಬಿದ್ದ 72 ವರ್ಷದ ನ್ಯಾಯಾಧೀಶರು ತಮ್ಮ ಪತ್ನಿ ಹಾಗೂ ತಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡಿ, ಆ ಇಬ್ಬರು ವ್ಯಕ್ತಿಗಳಿಗೆ ನೀಡಿದ್ದರು. ನಾನು ನೀಡಿದ ಪ್ರತಿ ಪೈಸೆಯೂ ಬಿಳಿ ಹಣವಾಗಿತ್ತು ಎಂದು ತಮ್ಮ ವಹಿವಾಟಿನ ಕುರಿತು ನ್ಯಾಯಾಧೀಶರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಣ ಕೊಟ್ಟ ಬಳಿಕ ಚುನಾವಣಾ ಬಾಂಡ್‌ಗಳನ್ನು ಸಹ ಆ ವ್ಯಕ್ತಿಗಳು ಖರೀದಿಸಿಲ್ಲ ಎಂದು ನ್ಯಾಯಾಧೀಶರು ಅಳಲು ತೋಡಿಕೊಂಡಿದ್ದಾರೆ.
ಹೈದಾರಾಬಾದ್‌ನ ಫಿಲ್ಮ್ ನಗರ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಧೀಶರು ದೂರು ದಾಖಲಿಸಿದ್ದಾರೆ. ಪೊಲೀಸರು ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಮತ್ತು ಸೆಕ್ಷನ್ 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಆದರೆ, ನ್ಯೂಸ್ ಮಿನಿಟ್‌ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೆ, ನ್ಯಾಯಾಧೀಶರು ಪೊಲೀಸ್ ಠಾಣೆಯಿಂದ ತಮ್ಮ ದೂರನ್ನು ಹಿಂಪಡೆದಿದ್ದಾರೆ. ದೂರನ್ನು ಮುಕ್ತಾಯಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ,