Home ದೇಶ ಎಲ್ಗಾರ್‌ ಪರಿಷತ್ ಪ್ರಕರಣ: ಕಾರ್ಯಕರ್ತೆ ಶೋಮಾ ಸೇನ್‌ಗೆ ಸುಪ್ರೀಂ ಜಾಮೀನು

ಎಲ್ಗಾರ್‌ ಪರಿಷತ್ ಪ್ರಕರಣ: ಕಾರ್ಯಕರ್ತೆ ಶೋಮಾ ಸೇನ್‌ಗೆ ಸುಪ್ರೀಂ ಜಾಮೀನು

0

ನವದೆಹಲಿ: ಎಲ್ಗಾರ್ ಪರಿಷತ್‌- ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಶೋಮಾ ಕಾಂತಿ ಸೇನ್‌ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಆದೇಶವನ್ನು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ವಿಶೇಷ ನ್ಯಾಯಾಲಯದ ಅನುಮತಿಯಿಲ್ಲದೆ ಮಹಾರಾಷ್ಟ್ರವನ್ನು ತೊರೆಯುವಂತಿಲ್ಲ ಎಂಬುದೂ ಸೇರಿದಂತೆ ಇತರ ಷರತ್ತುಗಳೊಂದಿಗೆ ಸೇನ್ ಅವರಿಗೆ ಜಾಮೀನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 2018ರ ಜೂನ್ 6ರಂದು ಇಂಗ್ಲಿಷ್ ಸಾಹಿತ್ಯ ಪ್ರಾಧ್ಯಾಪಕಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೇನ್ ಅವರನ್ನು ಬಂಧಿಸಲಾಗಿತ್ತು.

ಜಾಮೀನು ಅವಧಿಯಲ್ಲಿ ಸೇನ್ ತಾವು ವಾಸವಾಗಿರುವ ವಿಳಾಸದ ಬಗ್ಗೆ ಎನ್‌ಐಎ ತನಿಖಾಧಿಕಾರಿಗೆ ತಿಳಿಸಬೇಕು. ಸೇನ್ ತನ್ನ ಮೊಬೈಲ್ ಫೋನ್‌ನ ಜಿಪಿಎಸ್ ದಿನದ 24 ಗಂಟೆಯೂ ಸಕ್ರಿಯವಾಗಿರಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ.

ಈ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ತಿನ ಸಮ್ಮೇಳನದಲ್ಲಿ ನೀಡಿದ ಉದ್ರೇಕಕಾರಿ ಭಾಷಣಕ್ಕೆ ಸಂಬಂಧಿಸಿದೆ. ಇದು ಮರುದಿನ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವು ಗಾಯಗೊಂಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರನ್ನು ಆರೋಪಿಗಳೆಂದು ಹೆಸರಿಸಲಾಗಿರುವ ಈ ಪ್ರಕರಣವನ್ನು ಪುಣೆ ಪೊಲೀಸರು ತನಿಖೆ ನಡೆಸಿದ್ದರು. ಈ ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಪುಣೆ ಪೊಲೀಸರು ಹೇಳಿದ್ದರು.

ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಶಿಕ್ಷಣತಜ್ಞರನ್ನು ಆರೋಪಿಗಳೆಂದು ಹೆಸರಿಸಲಾಗಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಲಾಗಿದೆ.

You cannot copy content of this page

Exit mobile version