ದೆಹಲಿ: ಇಡೀ ದೇಶದಲ್ಲಿ ಒಂದೇ ಗಾತ್ರದ ಸಮೋಸಾಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಒಂದು ಕಾನೂನನ್ನು ತರುವಂತೆ ನಟ, ಗಾಯಕ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ಲೋಕಸಭೆಯ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ಕೆಲವು ಕಡೆ ಸಮೋಸಾ ದೊಡ್ಡದಾಗಿದ್ದರೆ, ಇನ್ನು ಕೆಲವು ಕಡೆ ಚಿಕ್ಕದಾಗಿರುತ್ತದೆ. ಹಾಗೆಯೇ ಅವುಗಳ ಬೆಲೆಯೂ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಿದರು. ಅವುಗಳ ಗಾತ್ರ ಮತ್ತು ಬೆಲೆಯನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.
ಹಾಗೆಯೇ, ದಾಲ್ ತಡ್ಕಾ ಒಂದು ಕಡೆ ₹100ಕ್ಕೆ ಸಿಕ್ಕರೆ, ಕೆಲವು ಹೋಟೆಲ್‌ಗಳಲ್ಲಿ ₹1,000 ಇರುತ್ತದೆ ಎಂದೂ ಅವರು ಹೇಳಿದರು. ಯಾವ ಆಹಾರ ಪದಾರ್ಥಗಳಲ್ಲಿ ಏನೆಲ್ಲಾ ಬೆರೆಸಲಾಗಿದೆ ಮತ್ತು ಅವುಗಳ ಪ್ರಮಾಣ ಎಷ್ಟಿದೆ ಎಂಬ ವಿಷಯಗಳನ್ನು ಗ್ರಾಹಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ತಾವು ತಿನ್ನುವುದು ಏನು ಮತ್ತು ಅದಕ್ಕೆ ಎಷ್ಟು ಹಣ ಪಾವತಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ ಎಂದು ಅವರು ಹೇಳಿದರು.