ಬೆಂಗಳೂರು: ‘ಧರ್ಮಸ್ಥಳ ಪ್ರಕರಣ’ದಲ್ಲಿ ಬಿಜೆಪಿ ನಾಯಕರು ದ್ವಿಪಾತ್ರಾಭಿನಯ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ. “ಚಿವುಟುವುದೂ ಬಿಜೆಪಿ, ತೊಟ್ಟಿಲು ತೂಗುವುದೂ ಬಿಜೆಪಿ! ಧರ್ಮಸ್ಥಳ ಪ್ರಕರಣದಲ್ಲಿನ ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ!” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಆರೋಪಿಗಳೂ ಬಿಜೆಪಿಯವರೇ?
ಬಿಜೆಪಿ ಒಂದು ‘ಎರಡು ತಲೆಯ ಹಾವು’ ಇದ್ದಂತೆ, ಅದು ಎರಡೂ ಕಡೆಗಳಲ್ಲಿ ಹೆಡೆ ಎತ್ತುತ್ತಿದೆ ಎಂದು ಸಚಿವ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ಯಾರನ್ನು ಆರೋಪಿಸುತ್ತಿದೆಯೋ ಅವರೇ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಸೇರಿದವರು ಎಂದು ಅವರು ಉಲ್ಲೇಖಿಸಿದ್ದಾರೆ.
ಗಿರೀಶ್ ಮತ್ತಣ್ಣನವರ್: ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಯುವ ಮೋರ್ಚಾದ ಮಾಜಿ ಅಧ್ಯಕ್ಷ, ಮತ್ತು 2013ರಲ್ಲಿ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ: ಬಿಜೆಪಿ ಪಕ್ಷದಲ್ಲೇ ಇದ್ದವರು ಮತ್ತು ಸಂಘ ಪರಿವಾರದ ನಾಯಕರು. ಅವರು ಸದಾ ಸಾವರ್ಕರ್, ಗೋಲ್ವಾಲ್ಕರ್ ಅವರ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ ಮತ್ತು ಕೇಸರಿ ಶಾಲು ಧರಿಸುತ್ತಾರೆ.
‘ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್’ ಕಾಳಗ?
ಸಾವರ್ಕರ್ ಅನುಯಾಯಿಯ ಬಗ್ಗೆಯೇ ಬಿಜೆಪಿಗೆ ಅಸಹನೆ ಉಂಟಾಗಿರುವುದು ಆಶ್ಚರ್ಯಕರ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇವರೆಲ್ಲಾ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಣದವರಲ್ಲವೇ? ಅವರ ಆದೇಶದಂತೆಯೇ ಈ ಹೋರಾಟ ನಡೆಯುತ್ತಿದೆಯೇ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಸಚಿವರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದು, “ಬಿಜೆಪಿಯ ‘ಧರ್ಮಸ್ಥಳ ಚಲೋ’ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ನಾಯಕರು ಏಕೆ ವೇದಿಕೆ ಬಿಟ್ಟು ಹೋದರು? ಕಲ್ಲಡ್ಕ ಪ್ರಭಾಕರ ಭಟ್ ಯಾಕೆ ಕಾಣಿಸಿಕೊಂಡಿಲ್ಲ? ಇಲ್ಲಿಯವರೆಗೂ ಪ್ರಭಾಕರ ಭಟ್ ಧರ್ಮಸ್ಥಳದ ಪರವಾಗಿ ಒಂದೇ ಒಂದು ಹೇಳಿಕೆ ನೀಡದಿರುವುದೇಕೆ? ಕಲ್ಲಡ್ಕ ಭಟ್ಟರಿಗೆ ಧರ್ಮಸ್ಥಳ ಬೇಡವಾಗಿದೆಯೇ?” ಎಂದು ಕೇಳಿದ್ದಾರೆ.
“ಧರ್ಮಸ್ಥಳವು ಇಂದು ಇಬ್ಬರು ಸಂಘ ಪರಿವಾರದ ಮುಖಂಡರ ಪ್ರತಿಷ್ಠೆಯ ‘ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್’ ಕಾಳಗದ ಕಣವಾಗಿದೆ. ಹೀಗಿರುವಾಗ ಬಿಜೆಪಿಯ ಹೋರಾಟ ಯಾರ ವಿರುದ್ಧ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.
https://x.com/PriyankKharge/status/1962742971247534475