Monday, August 25, 2025

ಸತ್ಯ | ನ್ಯಾಯ |ಧರ್ಮ

ಭಾರತದ ಪ್ರತಿಯೊಬ್ಬ ಪ್ರಜೆಯೂ “ಆರೆಸ್ಸೆಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು” ಎಂಬ ಪ್ರತಿಜ್ಞೆ ಕೈಗೊಳ್ಳಬೇಕು: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ “ಆರೆಸ್ಸೆಸ್‌ಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು” ಎಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ ಮತ್ತು ಮನುವಾದವನ್ನು ತಮ್ಮ ರಕ್ತದಲ್ಲೇ ಹರಿಸಿಕೊಂಡಿರುವ ಆರೆಸ್ಸೆಸ್‌ ಎಂಬ ವಿಷಕಾರಿ ಸಂಘಟನೆ, ಕಾಂಗ್ರೆಸ್‌ ಪಕ್ಷಕ್ಕೆ ಎಂದಿಗೂ ಶತ್ರುವಾಗಿಯೇ ಇರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಆರೆಸ್ಸೆಸ್ ಬಗ್ಗೆ ಹರಿಹಾಯ್ದಿರುವ ಅವರು, ಆರೆಸ್ಸೆಸ್‌ ಸಂವಿಧಾನ, ಏಕತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಾರ್ವಭೌಮತೆಗೆ ಶತ್ರು ಎಂದು ಆರೋಪಿಸಿದ್ದಾರೆ.

ಬಾಬಾ ಸಾಹೇಬರು ಮತ್ತು ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರೆಸ್ಸೆಸ್ ಬಗ್ಗೆ ನಿಷ್ಠುರವಾಗಿ ಎಚ್ಚರಿಕೆ ನೀಡಿದ್ದರು. ಆ ಮಹನೀಯರ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಪ್ರತಿಪಾದಿಸಿದರು.

ಬ್ರಿಟಿಷರೊಂದಿಗೆ ಕೈಜೋಡಿಸಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೆಸ್ಸೆಸ್‌, ಸ್ವಾತಂತ್ರ್ಯದ ನಂತರ ಐಕ್ಯತೆಯ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಿತು ಎಂದು ಅವರು ಹೇಳಿದರು. ಸಂಘ ಪರಿವಾರದ ಅಪಾಯವನ್ನು ಅಂದೇ ಅರಿತಿದ್ದ ಸರ್ದಾರ್ ಪಟೇಲರು ಆ ಸಂಘಟನೆಯನ್ನು ನಿಷೇಧಿಸಿದ್ದರು ಎಂಬುದನ್ನು ಅವರು ನೆನಪಿಸಿದರು.

ಫೆಬ್ರವರಿ 4, 1948 ರಂದು ಸರ್ದಾರ್ ಪಟೇಲರು ಹೊರಡಿಸಿದ ಪ್ರಕಟಣೆಯನ್ನು ಉಲ್ಲೇಖಿಸಿದ ಖರ್ಗೆ, “ನಮ್ಮ ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ನಿರ್ಮೂಲನ ಮಾಡಬೇಕಿದೆ, ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಅಪಾಯಕ್ಕೆ ಸಿಲುಕಿಸಲು ಹಾಗೂ ದೇಶದ ಹೆಸರನ್ನು ಕಳೆಗುಂದಿಸಲು ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಅನ್ನು ನಿಷೇಧಿಸುತ್ತಿದ್ದೇವೆ” ಎಂದು ಪಟೇಲರು ಹೇಳಿದ್ದರು. ಈ ಮಾತುಗಳನ್ನು ನಾವು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರುತ್ತೇವೆ ಎಂದು ನಾಟಕವಾಡಿ ನಿಷೇಧವನ್ನು ತೆರವು ಮಾಡಿಸಿಕೊಂಡ ಆರೆಸ್ಸೆಸ್‌ ನಂತರ ಅದೇ ಸಂವಿಧಾನ ವಿರೋಧಿ ಕೃತ್ಯಗಳನ್ನೇ ಮುಂದುವರಿಸಿದೆ. ಈ ನೂರು ವರ್ಷಗಳಲ್ಲಿ ಆರೆಸ್ಸೆಸ್‌ ಈ ದೇಶಕ್ಕೆ ನೀಡಿದ ಕೇವಲ 10 ಕೊಡುಗೆಗಳನ್ನು ಹೇಳಲು ಬಿಜೆಪಿಯವರಿಗೆ ಮತ್ತು ಸಂಘಪರಿವಾರದವರಿಗೆ ಸಾಧ್ಯವಾಗುವುದಿಲ್ಲ. ಇಂತಹ ಆರೆಸ್ಸೆಸ್‌ನಿಂದ ಅಪಾಯವಿದೆಯೇ ಹೊರತು ಯಾವುದೇ ಸಹಾಯವಿಲ್ಲ ಎಂದು ಅವರು ಟೀಕಿಸಿದರು.

ಸಂವಿಧಾನವನ್ನು ಒಪ್ಪದೆ ಅದರ ಕರಡು ಪ್ರತಿಯನ್ನು ಸುಟ್ಟು ಹಾಕಿದ್ದ, ರಾಷ್ಟ್ರಧ್ವಜವನ್ನು ಗೌರವಿಸದ, ಮಹಿಳೆಯರು ಮತ್ತು ಶೋಷಿತರನ್ನು ಮೂರನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ಕಾರ್ಯಸೂಚಿಯನ್ನು ಹೊಂದಿರುವ ಆರೆಸ್ಸೆಸ್‌ ಕಾಂಗ್ರೆಸ್‌ಗೆ ಮಾತ್ರವಲ್ಲ, ಈ ದೇಶದ ಐಕ್ಯತೆಗೆ ಪರಮ ಶತ್ರು ಎಂಬುದನ್ನು ಪ್ರತಿಯೊಬ್ಬ ದೇಶಭಕ್ತನೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page