Home ದೇಶ ನಾವು ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ ಎಂದು ಹೇಳುವವರು ಅವಕಾಶವಾದಿಗಳು – ನಿತಿನ್‌ ಗಡ್ಕರಿ

ನಾವು ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ ಎಂದು ಹೇಳುವವರು ಅವಕಾಶವಾದಿಗಳು – ನಿತಿನ್‌ ಗಡ್ಕರಿ

0

ಆಡಳಿತಗಾರನು ತನ್ನ ವಿರುದ್ಧ ವ್ಯಕ್ತವಾಗುವ ಬಲವಾದ ಅಭಿಪ್ರಾಯಗಳನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳುತ್ತಾನೆ ಎನ್ನುವುದರಲ್ಲಿ ಪ್ರಜಾಪ್ರಭುತ್ವದ ಸತ್ವ ಅಡಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ. ನಿಜವಾದ ನಾಯಕ ಭಿನ್ನಾಭಿಪ್ರಾಯದ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ ಎಂದು ಗಡ್ಕರಿ ಹೇಳಿದ್ದಾರೆ.

ಇಲ್ಲಿನ ಎಂಐಟಿ ವರ್ಲ್ಡ್ ಪೀಸ್ ವಿಶ್ವವಿದ್ಯಾಲಯದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮಾತನಾಡಿದರು. ಬರಹಗಾರರು ಮತ್ತು ಬುದ್ಧಿಜೀವಿಗಳು ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವಂತೆ ಅವರು ಕೇಳಿಕೊಂಡರು.

ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಏನಾಗುತ್ತಿದೆಯೋ ಅದು ಜಗತ್ತಿನ ಇತರ ಸ್ಥಳಗಳಲ್ಲೂ ನಡೆದಿದೆ ಎಂದು ಗಡ್ಕರಿ ಹೇಳಿದರು. ಅಲ್ಲಿಯೂ ಕೆಲವರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಅಭಿಪ್ರಾಯ ಭೇದಗಳು ಸಮಸ್ಯೆಯಲ್ಲ, ಯಾವುದೇ ಅಭಿಪ್ರಾಯ ಇಲ್ಲದಿರುವುದು ನಮ್ಮ ಸಮಸ್ಯೆ. ನಾವು ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ ಎಂದು ಹೇಳುವವರು ಅವಕಾಶವಾದಿಗಳು ಎಂದು ಕೇಂದ್ರ ಸಚಿವರು ಹೇಳಿದರು.

ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಕವಿಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಬಲವಾಗಿ ವ್ಯಕ್ತಪಡಿಸುವ ನಿರೀಕ್ಷೆಯಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

ಪ್ರಜಾಪ್ರಭುತ್ವದ ಗಟ್ಟಿತನ ನಾಯಕನೊಬ್ಬ ಅವನ ವಿರುದ್ಧ ಟೀಕೆ, ವಿರೋಧಗಳು ಕೇಳಿಬಂದಾಗ ಅವನು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದನ್ನು ಅವಲಂಬಿಸಿದೆ. ಜನರು ತನ್ನ ನಡೆಗಳನ್ನು ವಿರೋಧಿಸಿದಾಗ ನಿಜವಾದ ನಾಯಕ ಅದರ ಕುರಿತು ಆತ್ಮಾವಲೋಕನ ನಡೆಸಿಕೊಳ್ಳುತ್ತಾನೆ. ಒಬ್ಬ ಪ್ರಬುದ್ಧ ನಾಯಕ ಸದಾ ತನ್ನ ವಿರುದ್ಧದ ಟೀಕೆಗಳಿಗೆ ತೆರೆದುಕೊಂಡಿರುತ್ತಾನೆ. ಟೀಕೆಗಳಲ್ಲಿ ನಿಜವಿದ್ದರೆ ತನ್ನನ್ನು ತಿದ್ದಿಕೊಳ್ಳುತ್ತಾನೆ. ಅದುವೇ ನಿಜವಾದ ಪ್ರಜಾಪ್ರಭುತ್ವ ಎಂದು ಅವರು ಅಭಿಪ್ರಾಯಪಟ್ಟರು.

ಮೊನ್ನೆ ಭಾನುವಾರ, ಇಂಜಿನಿಯರ್ಸ್ ದಿನದಂದು, ಪುಣೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಗಡ್ಕರಿ ಉಪಸ್ಥಿತರಿದ್ದರು. ಇಲ್ಲಿ ಅವರು ಪಾರದರ್ಶಕತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ಮಿತಿಗಳನ್ನು ನಿಗದಿಪಡಿಸುವ ಬಗ್ಗೆ ಒತ್ತಿ ಹೇಳಿದರು. ತಿಳಿವಳಿಕೆ ಇರುವ ವ್ಯಕ್ತಿಗೆ ಕಾನೂನಿನ ಹಿಂದಿರುವ ಚೈತನ್ಯ ಅರ್ಥವಾಗದಿದ್ದರೆ ಅದರಿಂದ ಏನು ಪ್ರಯೋಜನ ಎಂದು ಹೇಳಿದರು.

You cannot copy content of this page

Exit mobile version