ದೆಹಲಿ: ಭಾರತದ ಆರ್ಥಿಕತೆ ‘ಸತ್ತಿದೆ’ ಎಂಬುದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ದೇಶದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕರು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಆಗಲಿದ್ದು, ಅದನ್ನು ಟ್ರಂಪ್ ನಿರ್ಧರಿಸುತ್ತಾರೆ ಮತ್ತು ಅಮೆರಿಕ ಅಧ್ಯಕ್ಷರು ಹೇಳಿದಂತೆ ಪ್ರಧಾನಿ ಮೋದಿ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 25ರಷ್ಟು ಸುಂಕ ಮತ್ತು ದಂಡವನ್ನು ವಿಧಿಸುವುದಾಗಿ ಘೋಷಿಸಿದ ನಂತರ ಮತ್ತು ಭಾರತ ಹಾಗೂ ರಷ್ಯಾವನ್ನು ‘ಸತ್ತ ಆರ್ಥಿಕತೆಗಳ/ಡೆಡ್ ಎಕಾನಮೀಸ್ ‘ ಎಂದು ಕರೆದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಭಾರತದ ಆರ್ಥಿಕತೆಯನ್ನು ‘ಸತ್ತಿರುವ ಆರ್ಥಿಕತೆ’ ಎಂದು ಟ್ರಂಪ್ ಕರೆದಿರುವ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿ, “ಅವರು ಹೇಳಿದ್ದು ಸರಿ, ಪ್ರಧಾನಿ ಮತ್ತು ಹಣಕಾಸು ಸಚಿವರ ಹೊರತುಪಡಿಸಿ ಎಲ್ಲರಿಗೂ ಇದು ತಿಳಿದಿದೆ. ಭಾರತದ ಆರ್ಥಿಕತೆ ‘ಸತ್ತಿರುವ ಆರ್ಥಿಕತೆ’ ಎಂದು ಎಲ್ಲರಿಗೂ ತಿಳಿದಿದೆ. ಅಧ್ಯಕ್ಷ ಟ್ರಂಪ್ ಸತ್ಯ ಹೇಳಿರುವುದಕ್ಕೆ ನನಗೆ ಸಂತೋಷವಿದೆ” ಎಂದರು. ಬಿಲಿಯನೇರ್ ಗೌತಮ್ ಅದಾನಿ ಅವರಿಗೆ ಸಹಾಯ ಮಾಡಲು ಬಿಜೆಪಿ ಭಾರತದ ಆರ್ಥಿಕತೆಯನ್ನು ನಾಶ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ವಿದೇಶಾಂಗ ಸಚಿವರು ನಾವು ಜಾಣ ವಿದೇಶಾಂಗ ನೀತಿಯನ್ನು ಹೊಂದಿದ್ದೇವೆ ಎಂದು ಭಾಷಣ ಮಾಡುತ್ತಾರೆ. ಒಂದು ಕಡೆ ಅಮೆರಿಕ ನಿಮ್ಮನ್ನು ಬೈಯುತ್ತಿದೆ ಮತ್ತು ಮತ್ತೊಂದೆಡೆ ಚೀನಾ ನಿಮ್ಮ ಬೆನ್ನಟ್ಟುತ್ತಿದೆ. ಮೂರನೆಯದಾಗಿ, ನೀವು ಜಗತ್ತಿನ ದೇಶಗಳಿಗೆ ನಿಯೋಗಗಳನ್ನು ಕಳುಹಿಸಿದಾಗ, ಯಾವ ದೇಶವೂ ಪಾಕಿಸ್ತಾನವನ್ನು ಖಂಡಿಸುವುದಿಲ್ಲ. ಅವರು ದೇಶವನ್ನು ಹೇಗೆ ನಡೆಸುತ್ತಿದ್ದಾರೆ? ಅವರಿಗೆ ದೇಶವನ್ನು ನಡೆಸಲು ತಿಳಿದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
ಮಂಗಳವಾರ ಲೋಕಸಭೆಯಲ್ಲಿ ಮೋದಿ ಮಾಡಿದ ಭಾಷಣವನ್ನು ಉಲ್ಲೇಖಿಸಿ, ಪ್ರಧಾನಿ ಟ್ರಂಪ್ ಅಥವಾ ಚೀನಾ ಹೆಸರನ್ನು ತೆಗೆದುಕೊಳ್ಳಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. “ಅವರು (ಮೋದಿ) ಪಾಕಿಸ್ತಾನವನ್ನು ಯಾವುದೇ ದೇಶ ಖಂಡಿಸಿಲ್ಲ ಎಂದು ಹೇಳಲಿಲ್ಲ. ಪಹಲ್ಗಾಮ್ ದಾಳಿಯ ಹಿಂದಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥನೊಂದಿಗೆ ಟ್ರಂಪ್ ಊಟ ಮಾಡುತ್ತಿದ್ದಾರೆ ಮತ್ತು ಅವರು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಇದು ಎಂತಹ ಯಶಸ್ಸು?” ಎಂದು ಅವರು ಪ್ರಶ್ನಿಸಿದರು.
“ನಾನು (ಭಾರತ ಮತ್ತು ಪಾಕಿಸ್ತಾನದ ನಡುವೆ) ಕದನ ವಿರಾಮ ಮಾಡಿಸಿದ್ದೇನೆ ಎಂದು ಟ್ರಂಪ್ 30 ಬಾರಿ ಹೇಳಿದ್ದಾರೆ. ಭಾರತದ ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಹೇಳಿದ್ದರು, ಈಗ ನಾನು ಶೇ. 25ರಷ್ಟು ಸುಂಕ ವಿಧಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಮೋದಿ ಏಕೆ ಉತ್ತರ ನೀಡುತ್ತಿಲ್ಲ ಎಂದು ನೀವು ಕೇಳಿದ್ದೀರಾ? ಕಾರಣವೇನು? ನಿಯಂತ್ರಣ ಯಾರ ಕೈಯಲ್ಲಿದೆ?” ಎಂದು ಅವರು ಪ್ರಶ್ನಿಸಿದರು.
ಇಂದು ಭಾರತದ ಮುಂದಿರುವ ಮುಖ್ಯ ಸಮಸ್ಯೆಯೆಂದರೆ, ಸರ್ಕಾರವು ದೇಶದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು “ನಾಶ” ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು. “ಅವರು ಈ ದೇಶವನ್ನು ನೆಲಸಮ ಮಾಡುತ್ತಿದ್ದಾರೆ. ಪ್ರಧಾನಿ ಕೇವಲ ಒಬ್ಬ ವ್ಯಕ್ತಿಗಾಗಿ ಕೆಲಸ ಮಾಡುತ್ತಾರೆ – ಅದಾನಿ. ಎಲ್ಲಾ ಸಣ್ಣ ವ್ಯಾಪಾರಗಳು ನಾಶವಾಗಿವೆ” ಎಂದು ಅವರು ಹೇಳಿದರು.
ಚರ್ಚೆಯಲ್ಲಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಉಲ್ಲೇಖಿಸಿ, ಈ ಒಪ್ಪಂದ ನಡೆಯುತ್ತದೆ ಮತ್ತು ಅದನ್ನು ಟ್ರಂಪ್ ನಿರ್ಧರಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು. “ಟ್ರಂಪ್ ಹೇಳಿದಂತೆ ಮೋದಿ ನಡೆದುಕೊಳ್ಳುತ್ತಾರೆ” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ನಂತರ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, “ಭಾರತದ ಆರ್ಥಿಕತೆ ಸತ್ತಿದೆ. ಅದನ್ನು ಮೋದಿ ಕೊಂದಿದ್ದಾರೆ. 1. ಅದಾನಿ-ಮೋದಿ ಪಾಲುದಾರಿಕೆ. 2. ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್‌ಟಿ. 3. ವಿಫಲವಾದ ‘ಅಸೆಂಬಲ್ ಇನ್ ಇಂಡಿಯಾ’ ಯೋಜನೆ. 4. ಎಂಎಸ್‌ಎಂಇಗಳು ನಾಶವಾಗಿವೆ. 5. ರೈತರು ನಲುಗಿ ಹೋಗಿದ್ದಾರೆ” ಎಂದು ಹೇಳಿದರು. ಉದ್ಯೋಗಗಳಿಲ್ಲದ ಕಾರಣ ಮೋದಿ ಭಾರತದ ಯುವಕರ ಭವಿಷ್ಯವನ್ನು ನಾಶ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.