Home ವಿದೇಶ ಇರಾನ್‌ಗೆ ಸಾಥ್ ನೀಡಿದರೆ ಡಾಲರ್ ವ್ಯವಸ್ಥೆಯಿಂದಲೇ ಹೊರಕ್ಕೆ: ಅಮೆರಿಕದ ಕಠಿಣ ಎಚ್ಚರಿಕೆ

ಇರಾನ್‌ಗೆ ಸಾಥ್ ನೀಡಿದರೆ ಡಾಲರ್ ವ್ಯವಸ್ಥೆಯಿಂದಲೇ ಹೊರಕ್ಕೆ: ಅಮೆರಿಕದ ಕಠಿಣ ಎಚ್ಚರಿಕೆ

0

ವಾಷಿಂಗ್ಟನ್: ಇರಾನ್ ವಿರುದ್ಧ ಆರ್ಥಿಕ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿರುವ ಅಮೆರಿಕ, ಇದೀಗ ಇರಾನ್‌ನೊಂದಿಗೆ ಆರ್ಥಿಕ ವಹಿವಾಟು ನಡೆಸುವ ಇತರ ದೇಶಗಳು ಮತ್ತು ಸಂಸ್ಥೆಗಳಿಗೂ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ಗೆ ಹಣ ವರ್ಗಾವಣೆ, ಹಣ ಅಕ್ರಮವಾಗಿ ಚಲಾವಣೆ ಅಥವಾ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ನೆರವಾಗುವ ಯಾವುದೇ ಸಂಸ್ಥೆಯನ್ನು ಅಮೆರಿಕದ ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯಿಂದಲೇ ಹೊರಗಿಡುವುದಾಗಿ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.

ಇರಾನ್‌ನ ಆದಾಯದ ಮೂಲಗಳು ಹಾಗೂ ಜಾಗತಿಕ ಹಣಕಾಸು ಸಂಪರ್ಕಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಹೊಸ ಹಂತದ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ. ಇರಾನ್‌ನೊಂದಿಗೆ ವಾಣಿಜ್ಯ ಸಂಬಂಧ ಮುಂದುವರಿಸುವ ರಾಷ್ಟ್ರಗಳು ಮತ್ತು ಸಂಸ್ಥೆಗಳ ಮೇಲೂ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯನ್ನು ಬೆಸೆಂಟ್ ಸ್ಪಷ್ಟಪಡಿಸಿದ್ದಾರೆ.

‘ಅಮೆರಿಕ ಅಥವಾ ಇರಾನ್’ ಆಯ್ಕೆ ಮಾಡಿಕೊಳ್ಳಿ
ನಿರ್ದಿಷ್ಟ ದೇಶಗಳ ಹೆಸರನ್ನು ಉಲ್ಲೇಖಿಸದ ಬೆಸೆಂಟ್, ಇರಾನ್‌ನ ಆರ್ಥಿಕ ಜಾಲಕ್ಕೆ ನೆರವಾಗುವ ರಾಷ್ಟ್ರಗಳು ಅಮೆರಿಕದ ಆರ್ಥಿಕ ವ್ಯವಸ್ಥೆಯ ಪ್ರಯೋಜನಗಳನ್ನು ಒಂದೆಡೆ ಪಡೆದು, ಮತ್ತೊಂದೆಡೆ ಇರಾನ್‌ಗೆ ನೆರವಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಇರಾನ್‌ನ ತೈಲ ಮಾರಾಟ, ಹಣಕಾಸು ವಹಿವಾಟು, ಸಾಗಣೆ, ಚಿನ್ನ, ತಂತ್ರಜ್ಞಾನ, ವಿಮಾನಯಾನ ಹಾಗೂ ಡಿಜಿಟಲ್ ಆಸ್ತಿ ಕ್ಷೇತ್ರಗಳ ಮೂಲಕ ನಿರ್ಬಂಧಗಳನ್ನು ತಪ್ಪಿಸಿಕೊಳ್ಳುವ ಪ್ರಯತ್ನಗಳ ಮೇಲೆ ಅಮೆರಿಕದ ಹೊಸ ಕ್ರಮಗಳು ಕೇಂದ್ರೀಕೃತವಾಗಿವೆ. ಸುಮಾರು 60 ವ್ಯಕ್ತಿಗಳು, ಸಂಸ್ಥೆಗಳು ಮತ್ತು ಹಡಗುಗಳ ವಿರುದ್ಧ ಹೊಸ ನಿರ್ಬಂಧಗಳನ್ನು ಘೋಷಿಸಲಾಗಿದೆ.

ಚೀನಾ ಸೇರಿದಂತೆ ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೂ ಈ ಎಚ್ಚರಿಕೆಯ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ತಕ್ಷಣವೇ ಚೀನಾದ ಪ್ರಮುಖ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳದೆ ಅಮೆರಿಕ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ ಎಂದು ವರದಿಗಳು ತಿಳಿಸಿವೆ.

ದಾಖಲೆ ಮಟ್ಟಕ್ಕೆ ಕುಸಿದ ಇರಾನ್‌ನ ಕರೆನ್ಸಿ
ಇದರ ನಡುವೆ ಅಮೆರಿಕದ ನಿರ್ಬಂಧಗಳು ಮತ್ತು ಸುಮಾರು ಆರು ತಿಂಗಳಿನಿಂದ ಮುಂದುವರಿದಿರುವ ಯುದ್ಧದ ಪರಿಣಾಮ ಇರಾನ್‌ನ ಆರ್ಥಿಕ ಸಂಕಷ್ಟ ಮತ್ತಷ್ಟು ಉಲ್ಬಣಗೊಂಡಿದೆ. ಇರಾನ್‌ನ ಕರೆನ್ಸಿ ರಿಯಾಲ್ ಅಮೆರಿಕನ್ ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದಿದ್ದು, ಒಂದು ಡಾಲರ್‌ಗೆ ಸುಮಾರು 20.2 ಲಕ್ಷ ರಿಯಾಲ್‌ಗಳವರೆಗೆ ತಲುಪಿದೆ.

ಕರೆನ್ಸಿ ಕುಸಿತದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿನಂತೆ 2026ರಲ್ಲಿ ಇರಾನ್‌ನ ನೈಜ ಜಿಡಿಪಿ ಸುಮಾರು 5.4% ಕುಸಿಯುವ ಸಾಧ್ಯತೆ ಇದೆ.

ಇರಾನ್‌ನ ತೈಲ ಆದಾಯ ಮತ್ತು ವಿದೇಶಿ ವಿನಿಮಯ ಮೂಲಗಳನ್ನು ಮತ್ತಷ್ಟು ನಿರ್ಬಂಧಿಸುವ ಮೂಲಕ ಅಲ್ಲಿನ ಆರ್ಥಿಕತೆಯನ್ನು ದುರ್ಬಲಗೊಳಿಸುವುದು ಅಮೆರಿಕದ ಹೊಸ ಕಾರ್ಯತಂತ್ರದ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಇರಾನ್ ಜೊತೆ ಆರ್ಥಿಕ ಸಂಬಂಧ ಹೊಂದಿರುವ ದೇಶಗಳ ಮೇಲೂ ಒತ್ತಡ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ.

You cannot copy content of this page

Exit mobile version