ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರದ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಉಗ್ರರಿಂದ ವಶಪಡಿಸಿಕೊಂಡು ಸಂಗ್ರಹಿಸಲಾಗಿದ್ದ ಸ್ಫೋಟಕ ಸಾಮಗ್ರಿಗಳು ಅವಘಡವಾಗಿ ಸ್ಫೋಟಗೊಂಡ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಭೀತಿ ಆಡಳಿತ ಮೂಲಗಳು ವ್ಯಕ್ತಪಡಿಸುತ್ತಿವೆ. ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸ್ಫೋಟಕಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳೇ ಆಗಿದ್ದಾರೆ. ಶ್ರೀನಗರ ಆಡಳಿತದ ನಯಬ್ ತಹಶೀಲ್ದಾರ್ ಸೇರಿದಂತೆ ಇಬ್ಬರು ಅಧಿಕಾರಿಗಳೂ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಸಶಸ್ತ್ರ ಸೇನೆಯ 92 ಬೇಸ್ ಆಸ್ಪತ್ರೆ ಹಾಗೂ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (SKIMS) ಸಾಗಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದಾರೆ.
ಈ ಘಟನೆಯ ಹಿನ್ನೆಲೆ ನೌಗಮ್ ಪೊಲೀಸ್ ಠಾಣೆಯು ಭೇದಿಸಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪೋಸ್ಟರ್‌ಗಳ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಮೂಲಗಳು ಹೇಳುತ್ತಿವೆ. ಈ ತನಿಖೆಯೇ ಇತ್ತೀಚೆಗೆ ಹಲವಾರು ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಮತ್ತು “ವೈಟ್-ಕಾಲರ್” ಭಯೋತ್ಪಾದಕ ಜಾಲವನ್ನು ಪತ್ತೆಹಚ್ಚಲು ದಾರಿ ಮಾಡಿತ್ತು. ಅಕ್ಟೋಬರ್‌ನಲ್ಲಿ ಬಂಧಿತರಾದ ವೈದ್ಯ ಅದೀಲ್ ಅಹ್ಮದ್ ರಾಥರ್ ಅವರ ಬಂಧನದಿಂದ ಈ ಜಾಲದ ರೂಪು ಬಹಿರಂಗಗೊಂಡಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇದನ್ನು “ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿರುವ, ತೀವ್ರಗಾಮಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ವೈಟ್-ಕಾಲರ್ ಭಯೋತ್ಪಾದಕ ಪರಿಸರ ವ್ಯವಸ್ಥೆ” ಎಂದು ವಿವರಿಸಿದ್ದಾರೆ.
ಈ ಘಟನೆಯು ಕಾಶ್ಮೀರದಲ್ಲಿ ಭದ್ರತೆ ಮತ್ತು ಉಗ್ರ ಚಟುವಟಿಕೆಗಳ ಬಗ್ಗೆ ಹೊಸ ಆತಂಕಗಳನ್ನು ಮತ್ತೊಮ್ಮೆ ತೋರಿಸಿದೆ.
