ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ತಂಡವು ಕನ್ನಡ ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಎವಿಆರ್ ಗ್ರೂಪ್ ಸಂಸ್ಥಾಪಕ ಹಾಗೂ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕನಾಗಿರುವ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಬೆಂಗಳೂರಿನಲ್ಲಿ ಬಂಧಿಸಿದೆ ಎಂದು ವರದಿಯಾಗಿದೆ.
ಚಲನಚಿತ್ರ ನಟಿಯಂತೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐದು ದಿನಗಳ ಹಿಂದೆ ಈ ಪ್ರಕರಣವನ್ನು ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಗೋವಿಂದರಾಜನಗರ ಇನ್ಸ್ಪೆಕ್ಟರ್ ಸುಬ್ರಮಣಿ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಬಂಧನ ಕಾರ್ಯಾಚರಣೆ ನಡೆಸಲಾಯಿತು.
ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿ ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಸಮಯದಲ್ಲಿ, ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿಗೊಳಿಸಿದ್ದರು.
ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿ ಎವಿಆರ್ ಗ್ರೂಪ್‌ಗೆ ಸಂಸ್ಥಾಪಕರಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕ ಮತ್ತು ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ. ಸಿನಿಮಾ ಇಂಡಸ್ಟ್ರಿ ಜೊತೆಗೇ ಕ್ರಿಕೆಟ್ ಟೂರ್ನಮೆಂಟ್‌ಗಳನ್ನು ಆಯೋಜಿಸಿ, ಪ್ರಸಿದ್ಧಿ ಪಡೆದಿದ್ದಾರೆ.
ಬಂಧನದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಮುಂದೆ ಲಭ್ಯವಾಗುವ ಸಾಧ್ಯತೆ ಇದೆ.
