ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತದಾರರ ಪಟ್ಟಿಯಿಂದ ಹೆಸರು ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
₹80ಕ್ಕೆ ಒಂದು ಹೆಸರು ಡಿಲೀಟ್ ಡೀಲ್:
ಮತದಾರರ ಪಟ್ಟಿಯಿಂದ ಒಂದು ಹೆಸರನ್ನು ಅಳಿಸಿ ಹಾಕಲು ಪ್ರತಿ ಹೆಸರಿಗೆ ₹80 ರೂಪಾಯಿಯಂತೆ ಹಣದ ಡೀಲ್ ಮಾಡಲಾಗಿತ್ತು ಎಂದು ಎಸ್‌ಐಟಿ ಬಹಿರಂಗಪಡಿಸಿದೆ. ಈ ಹಣವನ್ನು ನಕಲಿ ಡೇಟಾ ಸೆಂಟರ್ ನಿರ್ವಾಹಕನಿಗೆ ಪಾವತಿಸಲಾಗಿದೆ ಎನ್ನಲಾಗಿದೆ.
ನಕಲಿ ಮನವಿಗಳ ಸಲ್ಲಿಕೆ:
ಮತಪಟ್ಟಿಯಿಂದ ಹೆಸರು ಅಳಿಸಲು ಒಟ್ಟು 6,994 ಮನವಿಗಳು ಬಂದಿದ್ದವು. ಇವುಗಳಲ್ಲಿ ಕೆಲವು ನೈಜ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಬಹುತೇಕ ಮನವಿಗಳು ನಕಲಿಯಾಗಿವೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಆರೋಪಿಗಳ ಗುರುತು:
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಪ್ರಯತ್ನ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು. ಇದೀಗ ಎಸ್ಐಟಿ ಆಂತಹ ಪ್ರಯತ್ನಗಳನ್ನು ಖಚಿತಪಡಿಸಿದೆ. ಈ ಹಗರಣದಲ್ಲಿ ಭಾಗಿಯಾದ ಆರು ಆರೋಪಿಗಳನ್ನು ಎಸ್‌ಐಟಿ ಗುರುತಿಸಿದೆ ಎಂದು ವರದಿಯಾಗಿದೆ.
