ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕುರ್ಚಿಯೂ ಖಾಲಿ ಇಲ್ಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ (ಕೆಪಿಸಿಸಿ) ಹುದ್ದೆಯೂ ಖಾಲಿ ಇಲ್ಲ. ಈ ಬಗ್ಗೆ ಚರ್ಚಿಸುವುದು ಅನಗತ್ಯ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಯತೀಂದ್ರ ಹೇಳಿಕೆ ಅಪ್ರಸ್ತುತ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಗಳ ಧ್ವನಿ ಎಂಬಂತೆ ಬಿಂಬಿಸುವುದು ಸರಿಯಲ್ಲ. ಈಗಾಗಲೇ ಯತೀಂದ್ರ ಅವರೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ತಾವು ಏನೂ ಹೇಳುವ ಅಗತ್ಯವಿಲ್ಲ ಎಂದರು.
ಜಾತಿ, ಧರ್ಮದ ಮೇಲೆ ನಾಯಕತ್ವ ನಿರ್ಧಾರವಾಗದು:
ಯಾವುದೇ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರವಾಗುವುದಿಲ್ಲ. ಪಕ್ಷವು 2028ರಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದೆ. ಆಗ ಪಕ್ಷದ ವರಿಷ್ಠರು, ಸೂಕ್ತ ಸಂದರ್ಭದಲ್ಲಿ, ಎಲ್ಲ ಜಾತಿ, ಸಮುದಾಯದವರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
‘ನವೆಂಬರ್ ಕ್ರಾಂತಿ ಭ್ರಾಂತಿ’:
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಿಬರುತ್ತಿರುವ ‘ನವೆಂಬರ್ ಕ್ರಾಂತಿ’ ಎಂಬುದು ಸಂಪೂರ್ಣ ಭ್ರಾಂತಿ (illusory). ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದೆ ಎಂದು ಅವರು ದೃಢವಾಗಿ ಹೇಳಿದರು.
