ಬೆಂಗಳೂರು: ಜನ ನಮ್ಮೊಂದಿಗಿದ್ದಾರೆ, ಹಾಗಾಗಿ ನನಗೆ ಯಾವುದೇ ಎಸ್ಕಾರ್ಟ್ (ಭದ್ರತಾ ಬೆಂಗಾವಲು) ಅಗತ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಥಸಂಚಲನ ಅಥವಾ ರ್‍ಯಾಲಿಗಳ ಬಗ್ಗೆ ಶುಕ್ರವಾರ ಕೋರ್ಟ್ ತೀರ್ಮಾನ ಮಾಡಲಿದೆ. “ಯಾರೇ ಆಗಿರಲಿ, ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕು ಅಷ್ಟೇ,” ಎಂದು ಅವರು ಪುನರುಚ್ಛರಿಸಿದರು.
ಆರ್‌ಎಸ್‌ಎಸ್ ಮತ್ತು ಹಣಕಾಸು ಪ್ರಶ್ನೆ:
ಆರ್‌ಎಸ್‌ಎಸ್ ಹೆಸರಿನಲ್ಲಿ ಕಟ್ಟಡ ಇಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, “ಆರ್‌ಎಸ್‌ಎಸ್ ಹೆಸರಿನಲ್ಲಿ ಕಟ್ಟಡ ಇಲ್ಲವೇ ಇಲ್ಲ. ಅದನ್ನೇ ನಾವು ಹೇಳುತ್ತಿರುವುದು. ಅವರಿಗೆ ಎಲ್ಲಿಂದ ಹಣ ಬರುತ್ತದೆ? ಜನ ಸ್ವಯಂಪ್ರೇರಿತವಾಗಿ ಕೊಡುತ್ತಾರಾ? ಕಾರ್ಯಕ್ರಮದ ಖರ್ಚು-ವೆಚ್ಚದ ಲೆಕ್ಕ ಬೇಕಲ್ಲವೇ?” ಎಂದು ಪ್ರಶ್ನಿಸಿದರು.
ವೈಯಕ್ತಿಕ ಟೀಕೆಗಳಿಗೆ ತಿರುಗೇಟು:
“ನಾವು ಈ ಎಲ್ಲ ಪ್ರಶ್ನೆಗಳನ್ನು ಕೇಳಿದರೆ, ವೈಯಕ್ತಿಕವಾಗಿ ಮಾತನಾಡುತ್ತಾರೆ. ನನ್ನ ಬಣ್ಣ, ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾನು ಎಡವೋ, ಬಲವೋ ಅಂತ ಮಾತನಾಡುತ್ತಾರೆ. ಬೌದ್ಧಿಕವಾಗಿ ಬಿಜೆಪಿಗರು ದಿವಾಳಿಯಾಗಿದ್ದಾರೆ,” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
“ನಾವು ಕೇಳುವ ಪ್ರಶ್ನೆಗೆ ಉತ್ತರ ಕೊಡಲಿ. ಮತ್ತೊಂದು ಪ್ರಶ್ನೆಯನ್ನೇ ಕೇಳುವುದಿಲ್ಲ,” ಎಂದು ಅವರು ಸವಾಲು ಹಾಕಿದರು.
