Home ವಿದೇಶ ಗಡಿಯಲ್ಲಿ ಮಿತಿಮೀರಿದ ಉದ್ವಿಗ್ನತೆ: ಅಫ್ಘಾನ್ ನಗರಗಳ ಮೇಲೆ ಪಾಕ್ ಬಾಂಬ್ ದಾಳಿ; 270ಕ್ಕೂ ಹೆಚ್ಚು ಸಾವು.

ಗಡಿಯಲ್ಲಿ ಮಿತಿಮೀರಿದ ಉದ್ವಿಗ್ನತೆ: ಅಫ್ಘಾನ್ ನಗರಗಳ ಮೇಲೆ ಪಾಕ್ ಬಾಂಬ್ ದಾಳಿ; 270ಕ್ಕೂ ಹೆಚ್ಚು ಸಾವು.

0

ಕಾಬೂಲ್/ಇಸ್ಲಾಮಾಬಾದ್: ತಿಂಗಳುಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿದ್ದ ಘರ್ಷಣೆಗಳು ಈಗ ತಾರಕಕ್ಕೇರಿವೆ. ಗಡಿಯಲ್ಲಿ ಉಭಯ ದೇಶಗಳ ನಡುವೆ ಭೀಕರ ದಾಳಿಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ, ಇದು ನೆರೆಹೊರೆಯ ದೇಶಗಳ ನಡುವಿನ ‘ಬಹಿರಂಗ ಯುದ್ಧ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಅಸಿಫ್ ಶುಕ್ರವಾರ ಘೋಷಿಸಿದ್ದಾರೆ. “ಇನ್ನು ನಮ್ಮ ಸಹನೆ ಮುಗಿದಿದೆ” ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ. “ಗುರುವಾರ ರಾತ್ರಿಯಿಂದ ಒಟ್ಟು 22 ಮಿಲಿಟರಿ ಗುರಿಗಳ ಮೇಲೆ ಪಾಕ್ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 12 ಮಂದಿ ಪಾಕ್ ಸೈನಿಕರು ಮರಣ ಹೊಂದಿದ್ದರೆ, 274 ಮಂದಿ ತಾಲಿಬಾನ್ ಅಧಿಕಾರಿಗಳು ಮತ್ತು ಉಗ್ರರು ಮೃತಪಟ್ಟಿದ್ದಾರೆ” ಎಂದು ಪಾಕ್ ಸೇನಾ ವಕ್ತಾರ ಅಹ್ಮದ್ ಶರೀಫ್ ಚೌಧರಿ ತಿಳಿಸಿದ್ದಾರೆ. ತಾವು ಕೂಡ ಅಷ್ಟೇ ಬಲವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ಅಫ್ಘಾನ್ ಸರ್ಕಾರ ಹೇಳಿದೆ.

ಡ್ರೋನ್ ಬಳಸಿ ಪಾಕಿಸ್ತಾನದ ಮಿಲಿಟರಿ ಗುರಿಗಳ ಮೇಲೆ ಯಶಸ್ವಿಯಾಗಿ ವೈಮಾನಿಕ ದಾಳಿ ನಡೆಸಿದ್ದೇವೆ ಎಂದು ಅಫ್ಘಾನ್ ರಕ್ಷಣಾ ಇಲಾಖೆ ಮತ್ತು ಸರ್ಕಾರದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ. ಅಫ್ಘಾನ್ ವಾಯುಪ್ರದೇಶದಲ್ಲಿ ಪಾಕ್ ನಿಗಾ ವಿಮಾನಗಳು ಹಾರಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ರಾತ್ರಿ ಪಾಕ್ ಪಡೆಗಳ ಮೇಲೆ ಅಫ್ಘಾನ್ ಪಡೆಗಳು ದಾಳಿ ನಡೆಸಿದ ನಂತರ ಪಾಕಿಸ್ತಾನವು ಈ ಕಾರ್ಯಾಚರಣೆಯನ್ನು ಆರಂಭಿಸಿದೆ. ಹೀಗೆ ಉಭಯ ಪಕ್ಷಗಳ ನಡುವೆ ಹೋರಾಟ ಮುಂದುವರಿದಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ 2,611 ಕಿಲೋಮೀಟರ್ ಉದ್ದದ ‘ಡ್ಯುರಾಂಡ್’ ಗಡಿ ರೇಖೆಯಿದೆ. ಇದನ್ನು ಅಫ್ಘಾನಿಸ್ತಾನ ಗುರುತಿಸುತ್ತಿಲ್ಲ. ತಾಲಿಬಾನ್‌ಗಳು ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ವ್ಯೂಹಾತ್ಮಕವಾಗಿ ಮುನ್ನಡೆಯಬಹುದು ಎಂದು ಪಾಕಿಸ್ತಾನ ಆಶಿಸಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ತಾಲಿಬಾನ್‌ಗಳ ಬೆಳವಣಿಗೆಯು ಈ ಪ್ರದೇಶದ ಸಂಪೂರ್ಣ ಪರಿಸ್ಥಿತಿಯನ್ನೇ ಬದಲಿಸಿದೆ.

ನೆರೆಯ ದೇಶ ಪಾಕಿಸ್ತಾನದೊಂದಿಗಿನ ಘರ್ಷಣೆಯನ್ನು ಬಗೆಹರಿಸಿಕೊಳ್ಳಲು ತಾವು ಮಾತುಕತೆಗೆ ಸಿದ್ಧವಿರುವುದಾಗಿ ಅಫ್ಘಾನ್ ಸರ್ಕಾರ ಶುಕ್ರವಾರ ಘೋಷಿಸಿದೆ. ಶಾಂತಿಯುತ ಪರಿಹಾರ ಬೇಕು ಎಂದು ಪ್ರತಿ ಬಾರಿಯೂ ಹೇಳುತ್ತಲೇ ಬಂದಿದ್ದೇವೆ ಮತ್ತು ಈಗಲೂ ಚರ್ಚೆಯ ಮೂಲಕವೇ ಪರಿಹರಿಸಿಕೊಳ್ಳಲು ಬಯಸುತ್ತೇವೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇತ್ತೀಚಿನ ದಾಳಿಯಲ್ಲಿ 55 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ನೆರೆಹೊರೆಯ ದೇಶಗಳ ನಡುವೆ ಏರ್ಪಟ್ಟಿರುವ ಈ ಉದ್ವಿಗ್ನತೆಯ ಬಗ್ಗೆ ರಷ್ಯಾ, ಚೀನಾ, ಇರಾನ್, ಸೌದಿ ಅರೇಬಿಯಾ, ಕತಾರ್, ಬ್ರಿಟನ್ ಮತ್ತು ಟರ್ಕಿ ಸೇರಿದಂತೆ ಹಲವು ದೇಶಗಳು ತೀವ್ರ ಆತಂಕ ವ್ಯಕ್ತಪಡಿಸಿವೆ. ತಕ್ಷಣವೇ ದಾಳಿಗಳನ್ನು ನಿಲ್ಲಿಸಿ ಚರ್ಚೆ ನಡೆಸಬೇಕು ಎಂದು ರಷ್ಯಾ ಕೋರಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿರುವುದಾಗಿ ‘ರಿಯಾ’ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಚೀನಾ, ಉಭಯ ಪಕ್ಷಗಳೊಂದಿಗೆ ಮಾತನಾಡುತ್ತಿರುವುದಾಗಿ ಮತ್ತು ತಕ್ಷಣವೇ ಕದನ ವಿರಾಮ ಜಾರಿಯಾಗಬೇಕು ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಕೋರಿದ್ದಾರೆ. ಸಾಧ್ಯವಾದಷ್ಟು ರಕ್ತಪಾತವನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.

ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಇರಾನ್ ಮುಂದೆ ಬಂದಿದೆ. ಮಾತುಕತೆಗೆ ಅವಕಾಶ ಕಲ್ಪಿಸಲು ಮತ್ತು ಅವರ ನಡುವೆ ತಿಳುವಳಿಕೆ ಹಾಗೂ ಸಹಕಾರವನ್ನು ಹೆಚ್ಚಿಸಲು ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ಪರಿಸ್ಥಿತಿಯನ್ನು ಸರಿಪಡಿಸಲು ಸೌದಿ ಅರೇಬಿಯಾ ಮತ್ತು ಕತಾರ್ ಕೂಡ ರಂಗಕ್ಕಿಳಿದಿವೆ. ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳುವುದೇ ಸದ್ಯದ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

You cannot copy content of this page

Exit mobile version