ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ಹೊಸ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ. ಸೋಮವಾರ (ಜುಲೈ 13) ಸೌದಿ ಅರೇಬಿಯಾದ ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಹೌತಿ ಪಡೆಗಳು ಹೇಳಿಕೆ ಬಿಡುಗಡೆ ಮಾಡಿವೆ.
ಹೌತಿ ವಕ್ತಾರರ ಪ್ರಕಾರ, ಯೆಮೆನ್‌ನ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅಭಾ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹಲವು ಕ್ಷಿಪಣಿಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರೊಂದಿಗೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಸನಾ ವಿಮಾನ ನಿಲ್ದಾಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವವರೆಗೆ ಸೌದಿ ಅರೇಬಿಯಾದ ವಾಯುಪ್ರದೇಶದಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಹೌತಿ ಪಡೆಗಳು ಎಚ್ಚರಿಕೆ ನೀಡಿವೆ.
ಇತ್ತೀಚೆಗೆ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯನ್ನು ಹೌತಿ ಸಂಘಟನೆ ತೀವ್ರವಾಗಿ ಖಂಡಿಸಿತ್ತು. ಯೆಮೆನ್‌ನ ಸಾರ್ವಭೌಮತ್ವದ ಮೇಲಿನ ಅತಿಕ್ರಮಣ ಎಂದು ಆರೋಪಿಸಿದ್ದ ಹೌತಿಗಳು, ಅದಕ್ಕೆ ತಕ್ಕ ಪ್ರತೀಕಾರ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಆ ಎಚ್ಚರಿಕೆಯ ಕೆಲವೇ ಗಂಟೆಗಳಲ್ಲಿ ಅಭಾ ವಿಮಾನ ನಿಲ್ದಾಣದ ಮೇಲಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯಿಂದ ಈಗಾಗಲೇ ಅಮೆರಿಕಾ–ಇರಾನ್ ಸಂಘರ್ಷದಿಂದ ಉದ್ವಿಗ್ನಗೊಂಡಿರುವ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ. ಹೌತಿ ಪಡೆಗಳ ನೇರ ದಾಳಿಯಿಂದ ಯುದ್ಧದ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದೆ.
