Sunday, June 23, 2024

ಸತ್ಯ | ನ್ಯಾಯ |ಧರ್ಮ

ಬೆಳ್ಳಗಿನ ಆರಗ ಅವರ ಕಪ್ಪಗಿನ ಮಾತು

ಕಪ್ಪು ಎಂಬುದು ಶ್ರಮಜೀವಿಗಳ ಬಣ್ಣ. ಬಿಸಿಲಿನಲ್ಲಿ ಬೆವರು ಹರಿಸಿ ಕೆಲಸ ಮಾಡುವ ಶ್ರಮಜೀವಿಗಳ ಬಣ್ಣ ಬೆಳ್ಳಗಿರುವುದಿಲ್ಲ. ಒಂದು ದಿನ ಬಿಸಿಲಿನಲ್ಲಿ ದುಡಿದರೆ ಆರಗ ಅವರ ಬಣ್ಣವೂ ಕಪ್ಪಾಗುತ್ತದೆ. ಕಪ್ಪು ಬಣ್ಣವನ್ನು ಗೇಲಿ ಮಾಡುವ ಮೂಲಕ ಆರಗ ಅವರು, ಆರಗರಂಥ ಬೆಳ್ಳಗಿನವರು ಸುಖಕರ ಬದುಕು ಸಾಗಿಸಲು ಮತ್ತು ಬೆಳ್ಳಗಿನ ಮೈ ಬಣ್ಣವನ್ನು ಕಾಪಾಡಿಕೊಂಡು ಬರಲು ಕಾರಣರಾದ ದುಡಿವ ವರ್ಗವನ್ನು ಗೇಲಿ ಮಾಡಿದ್ದಾರೆ – ಶ್ರೀನಿವಾಸ ಕಾರ್ಕಳ, ಸಾಮಾಜಿಕ ಚಿಂತಕರು

‘When a debate is lost, slander becomes tool of a loser’ (ಚರ್ಚೆಯಲ್ಲಿ ಸೋತಾಗ ಚಾರಿತ್ರ್ಯವಧೆ ಸೋತವನ ಅಸ್ತ್ರವಾಗುತ್ತದೆ) ಇದು ಜಗತ್ತಿನ ಶ್ರೇಷ್ಠ ತತ್ತ್ವಜ್ಞಾನಿ ಸಾಕ್ರೆಟಿಸ್ ನ ಮಾರ್ಮಿಕ ಮಾತು.

ಯಾಕೋ ಗೊತ್ತಿಲ್ಲ, ‘ಬೆಳ್ಳಗಿರುವುದೆಲ್ಲ ಚಂದ’ ಎಂಬ ಒಂದು ಮಹಾಸುಳ್ಳನ್ನು ಮಹಾಸತ್ಯ ಎಂಬಂತೆ, ದೀರ್ಘಕಾಲದಿಂದ ಜಗತ್ತಿನ ಬಹುಪಾಲು ಜನಸಂಖ್ಯೆ ನಂಬಿಕೊಂಡು ಬಂದಿದೆ. ಕರ್ನಾಟಕ ವಿಧಾನಸಭೆಯ ಶಾಸಕರಲ್ಲಿ ಅತ್ಯಂತ ಶುಭ್ರವಸನಧಾರಿಯಾಗಿ, ನೀಟ್ ಆಗಿ ಕಾಣುವ ವಿರಳರಲ್ಲಿ ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಒಬ್ಬರು. ಇಸ್ತ್ರಿಯಿಂದ ಗರಿಗರಿಯಾದ ಅವರ ಬೆಳ್ಳಗಿನ ಶರಟು, ಪ್ಯಾಂಟ್ಸ್, ಚೆನ್ನಾಗಿ ಬಾಚಿಕೊಂಡು ಒಪ್ಪ ಓರಣವಾಗಿರಿಸಿಕೊಂಡ ತಲೆಗೂದಲು, ಫಕ್ಕನೆ ಹಿಟ್ಲರ್ ನನ್ನು ನೆನಪಿಸುವ ದಪ್ಪನೆಯ ಮೀಸೆ ನೋಡಿದರೆ ಎಂತಹವರಿಗೂ ಅವರನ್ನು ಇನ್ನೊಮ್ಮೆ ನೋಡೋಣ ಅನಿಸಬೇಕು. ಅಂತಹ ಆಕರ್ಷಕ ಬಾಹ್ಯ ನೋಟ ಆರಗ ಅವರದು.

ಆದರೆ ಬಾಹ್ಯ ನೋಟ ಸುಂದರವಾಗಿದ್ದ ಮಾತ್ರಕ್ಕೆ, ಮನಸು ಮತ್ತು ಮಾತು ಕೂಡಾ ಸುಂದರವಾಗಿರಬೇಕಾಗಿಲ್ಲ ಅಲ್ಲವೇ (ಉತ್ತರ ಕನ್ನಡದ ಸ್ಫುರದ್ರೂಪಿ ಸಂಸದರೊಬ್ಬರು ಬಾಯಿ ತೆರೆದರೆ, ದಲಿತರ ವಿರುದ್ಧ, ಬುದ್ಧಿಜೀವಿಗಳ ವಿರುದ್ಧ ಅತ್ಯಂತ ಅಸಹ್ಯ ಹೇಳಿಕೆಗಳನ್ನು ನೀಡುತ್ತಿದ್ದುದನ್ನು ಮತ್ತು ನಾವು ಅಧಿಕಾರಕ್ಕೆ ಬಂದುದೇ ಸಂವಿಧಾನ ಬದಲಾಯಿಸಲು ಎಂದು ಅಹಂಕಾರದ ಮಾತನ್ನು ಆಡುತ್ತಿದ್ದುದನ್ನು ನಾವು ನೋಡಿಲ್ಲವೇ)? ಆರಗ ಅವರು ಈ ವಾಸ್ತವಸತ್ಯವನ್ನು ಅನೇಕ ಬಾರಿ ಸಾಬೀತುಪಡಿಸಿದ್ದಾರೆ.

ಅತ್ಯಾಚಾರ ಪ್ರಕರಣವೊಂದು ನಡೆದಾಗ ‘ಅವೇಳೆಯಲ್ಲಿ ಹೊರಗೆ ಹೋದುದು ಯುವತಿಯ ತಪ್ಪು’ ಎಂದು ಗೃಹಮಂತ್ರಿ ಹುದ್ದೆಯಲ್ಲಿದ್ದುಕೊಂಡೇ ಹೇಳಿ ವಿವಾದ ಮಾಡಿಕೊಂಡ ಪುಣ್ಯಾತ್ಮ ಇವರು. ತುಳುನಾಡಿನ ಲಕ್ಷಾಂತರ ಜನರ ಆರಾಧ್ಯ ದೈವ ಗುಳಿಗನನ್ನು ‘ಗುಳಿಗೆ ಗುಳಿಗೆ..’ ಎಂದು ಜಾಪಾಳ ಮಾತ್ರೆಗೆ ಹೋಲಿಸಿ ತುಳುವರ ಕೆಂಗಣ್ಣಿಗೆ ಗುರಿಯಾದುದು ಇದೇ ಆರಗ ಅವರು. ಈ ಬಾರಿ ಮಾತ್ರ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣವನ್ನು ಗೇಲಿ ಮಾಡಿ, ತನ್ನ ಕೊಳಕು ವರ್ಣಭೇದ ಆಲೋಚನೆಯನ್ನು ಬಹಿರಂಗಪಡಿಸಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಲೇ ಆರಗ ಅವರು, “ಒಂದು ವೇಳೆ ನನ್ನ ಮಾತಿನಿಂದ ಖರ್ಗೆಯವರ ಮನಸಿಗೆ ನೋವಾಗಿದ್ದರೆ ವಿಷಾದ ಸೂಚಿಸುತ್ತೇನೆ” ಎಂದಿದ್ದಾರೆ.

ನಡೆದುದೇನು?

ಕಸ್ತೂರಿ ರಂಗನ್ ವರದಿ ಜ್ಯಾರಿ ವಿರೋಧಿಸಿ ಆಗಸ್ಟ್ 1, 2023ರಂದು ತೀರ್ಥಹಳ್ಳಿ ಪಟ್ಟಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, “ಕಸ್ತೂರಿ ರಂಗನ್ ವರದಿ ಜ್ಯಾರಿ ಮಾಡಿದರೆ ಮಲೆನಾಡು ಭಾಗಕ್ಕೆ ಆಗಬಹುದಾದ ದುಷ್ಪರಿಣಾಮ ಏನು ಎಂಬ ಬಗ್ಗೆ ಸರಕಾರಕ್ಕೆ ಅರಿವಿರಬೇಕು. ನಮ್ಮ ದುರದೃಷ್ಟ ಎಂದರೆ, ಆ (ಉತ್ತರ ಕರ್ನಾಟಕ) ಭಾಗದವರು ಅರಣ್ಯ ಸಚಿವರಾಗಿದ್ದಾರೆ. ಕಾಡಿನ ಬಗ್ಗೆ ಅರಿವೇ ಇರದಂತಹ ಜನಪ್ರತಿನಿಧಿಯನ್ನು ಅರಣ್ಯ ಸಚಿವರನ್ನಾಗಿ ಮಾಡಿದರೆ ಇಂತಹ ವರದಿಗಳು ಜ್ಯಾರಿಯಾಗುತ್ತವೆ. ಅವರಿಗೆ ಮರ-ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳು ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತೆ, ಪಾಪ. ತಲೆಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ. ಮಲೆನಾಡು ಮತ್ತು ಪಶ್ಚಿಮ ಘಟ್ಟದ ಬದುಕು ಅವರಿಗೆ ಗೊತ್ತಿಲ್ಲ” ಎಂದು ಹೇಳಿದ್ದರು.

ಈ ಘನಘೋರ ವರ್ಣಭೇದದ ಹೇಳಿಕೆಯ ಮೂಲಕ ತಾನು ತಪ್ಪು ಮಾಡಿದ್ದೇನೆ ಎಂದು ಆರಗ ಅವರಿಗೆ ಅನಿಸಿದೆ, ಅವರ ವಿಷಾದದ ಮಾತು ಪ್ರಾಮಾಣಿಕವಾದುದು ಎನ್ನುತ್ತೀರಾ? ಹೌದಾಗಿದ್ದರೆ ಅವರು “ನಾನು ಹಾಗೆ ಹೇಳಬಾರದಿತ್ತು, ಆಡಬಾರದ ಮಾತು ಆಡಿದ್ದಕ್ಕೆ ನಿಶ್ಶರ್ತ ಕ್ಷಮೆ ಕೋರುತ್ತೇನೆ” ಎನ್ನುತ್ತಿದ್ದರು. ಆದರೆ ಅವರು ಹೇಳಿದ್ದು- ನನ್ನ ಮಾತಿನಿಂದ ‘ನೋವಾಗಿದ್ದರೆ’, ‘ವಿಷಾದ ಸೂಚಿಸುತ್ತೇನೆ’ ಎಂದು. ‘ನೋವಾಗಿದ್ದರೆ’ ಮತ್ತು ‘ವಿಷಾದ’ ಈ ಪದಗಳು ಏನನ್ನು ಸೂಚಿಸುತ್ತವೆ? ತಪ್ಪನ್ನು ಒಪ್ಪಿಕೊಳ್ಳದಿರುವುದನ್ನು ಮತ್ತು ತಪ್ಪಿಗೆ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡದಿರುವುದನ್ನು ಅಲ್ಲವೇ?

ಇದು ಮಾತಿನ ಭರಾಟೆಯಲ್ಲಿ ಆಡಿದ ಮಾತು ಎನ್ನುತ್ತಾರೆ ಆರಗ ಅವರು. ಆದರೆ ಮಾತು ಸುಮ್ಮನೆ ಹೊರ ಬರುವುದಿಲ್ಲ. ಅಂತಹ ಮನುಷ್ಯವಿರೋಧಿ ಆಲೋಚನೆ ಮನದಾಳದಲ್ಲಿ ಇದ್ದಾಗಲೇ ಅದು ಮಾತಿನ ರೂಪದಲ್ಲಿ ಹೊರಬರುವುದು. ಜಾತಿ ಎಂಬ ಶಾಪದಿಂದ ನರಳುತ್ತಿರುವ ದೇಶದಲ್ಲಿ ಈ ಜಾತಿ ಭೇದವು ವರ್ಣಭೇದ ಸಹಿತ ನಾನಾ ರೂಪಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ. ಅದನ್ನು ಮುಚ್ಚಿಡುವುದು ಬಲು ಕಷ್ಟ.

ಜಾತಿ ವ್ಯವಸ್ಥೆಯಲ್ಲಿ ಕೆಲವೇ ಜಾತಿಗಳಿರುವುದಲ್ಲ. ಅಲ್ಲಿ ಅಸಂಖ್ಯ ಜಾತಿಗಳಿದ್ದು, ಆ ಪ್ರತಿಯೊಂದು ಜಾತಿಯಲ್ಲೂ ಅನೇಕ ಏಣಿಶ್ರೇಣಿಗಳಿರುತ್ತವೆ. ಪ್ರತಿಯೊಂದು ಜಾತಿಯವರೂ ತನಗಿಂತ ಕೆಳಗಿನ ಅಂದುಕೊಂಡಿರುವ ಜಾತಿಯವರನ್ನು ತುಚ್ಛವಾಗಿ ಕಾಣುತ್ತಾರೆ ಮತ್ತು ತಾವು ಶ್ರೇಷ್ಠರು ಎಂಬ ಅಹಂನ ರೋಗದಿಂದ ನರಳುತ್ತಿರುತ್ತಾರೆ. ಈ ತಾರತಮ್ಯದ ಬ್ರಾಹ್ಮಣ್ಯಕ್ಕೆ ಕೊನೆ ಎಂಬುದಿಲ್ಲ.

ಆರಗ ಅವರಿಗೆ ಕಪ್ಪು ಮೈಬಣ್ಣದ ಬಗ್ಗೆ ಅಸಹನೆಯಿದೆ. ಅದು ಕೀಳು ಎಂಬ ಭಾವನೆಯಿದೆ. ಹಾಗಾಗಿ ಕಪ್ಪು ಬಣ್ಣದ ನೆನಪಾಗುತ್ತಲೇ ಅವರಿಗೆ ಖರ್ಗೆಯವರ ನೆನಪಾಗಿದೆ. ಖರ್ಗೆ ಅವರು ದಲಿತ ಎಂಬುದೂ ಇದಕ್ಕೆ ಕಾರಣವಾಗಿರಬಹುದು.

ಆದರೆ ಆರಗ ಅವರಿಗೆ ಒಂದು ಸಂಗತಿ ನೆನಪಿರಬೇಕಾಗಿತ್ತು. ಕಪ್ಪು ಎಂಬುದು ಶ್ರಮಜೀವಿಗಳ ಬಣ್ಣ. ಬಿಸಿಲಿನಲ್ಲಿ ಬೆವರು ಹರಿಸಿ ಕೆಲಸ ಮಾಡುವ ಶ್ರಮಜೀವಿಗಳ ಬಣ್ಣ ಬೆಳ್ಳಗಿರುವುದಿಲ್ಲ. ಒಂದು ದಿನ ಬಿಸಿಲಿನಲ್ಲಿ ದುಡಿದರೆ ಆರಗ ಅವರ ಬಣ್ಣವೂ ಕಪ್ಪಾಗುತ್ತದೆ. ಕಪ್ಪು ಬಣ್ಣವನ್ನು ಗೇಲಿ ಮಾಡುವ ಮೂಲಕ ಆರಗ ಅವರು ಬಹುದೊಡ್ಡ ಶ್ರಮಜೀವಿ ವರ್ಗವನ್ನು, ಆರಗರಂಥ ಬೆಳ್ಳಗಿನವರು ಸುಖಕರ ಬದುಕು ಸಾಗಿಸಲು ಮತ್ತು ಬೆಳ್ಳಗಿನ ಮೈ ಬಣ್ಣವನ್ನು ಕಾಪಾಡಿಕೊಂಡು ಬರಲು ಕಾರಣರಾದ ದುಡಿವ ವರ್ಗವನ್ನು ಗೇಲಿ ಮಾಡಿದ್ದಾರೆ.

ತಾರತಮ್ಯದ ಸಿದ್ಧಾಂತ

ಆರಗ ಜ್ಞಾನೇಂದ್ರ ಅವರು ಖರ್ಗೆಯವರ ಮೈಬಣ್ಣವನ್ನು ಅಪಹಾಸ್ಯ ಮಾಡಿದ್ದಾರೆ. ಉಡುಪಿ ಶಾಸಕ ಯಶಪಾಲ ಸುವರ್ಣ ಅವರು ಇತ್ತೀಚೆಗೆ ಗೃಹಮಂತ್ರಿ ಡಾ. ಜಿ ಪರಮೇಶ್ವರ ಅವರ, ಲಿಂಗ ಪರಿವರ್ತನೆ ಮಾಡಿಕೊಂಡ ಮಗನ ಬಗ್ಗೆ ಕುಹಕದ ಮಾತು ಆಡಿದ್ದಾರೆ. ಬಲಪಂಥೀಯ ಸಮರ್ಥಕಿ ಶಕುಂತಲಾ ಎಂಬವರು ಸಿದ್ದರಾಮಯ್ಯ ಅವರ ಮಡದಿ ಮತ್ತು ಸೊಸೆಯ ಬಗ್ಗೆ ಆಡಬಾರದ ಮಾತು ಆಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪುರುಷತ್ವದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕ ಈಶ್ವರಪ್ಪ ಅವರ ವಿವಾದಾಸ್ಪದ ಮಾತುಗಳ ಪಟ್ಟಿ ದೀರ್ಘವಿದೆ. ಜೆಡಿಎಸ್ ನಾಯಕ ಕುಮಾರಸ್ವಾಮಿಯವರ ಮೈ ಬಣ್ಣವನ್ನು ಗೇಲಿ ಮಾಡುತ್ತಾ ‘ಕರಿಇಡ್ಲಿ’ ಎಂದವರು ಇದೇ ಬಲ ಸಿದ್ಧಾಂತದ ಬೆಂಬಲಿಗರಲ್ಲವೇ? ಸಂಘಪರಿವಾರದ ಬೆಂಬಲಿಗರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವೈಯಕ್ತಿಕ ವಿಚಾರ ಎತ್ತಿಕೊಂಡು ಆಡಿದ ಮಾತುಗಳಾದರೂ ಎಷ್ಟು? ಆರ್ ಎಸ್ ಎಸ್ ನಿಯತಕಾಲಿಕ ‘ಪಾಂಚಜನ್ಯ’ದ ಮಾಜಿ ಸಂಪಾದಕ ತರುಣ್ ವಿಜಯ್ ಅವರು ದಕ್ಷಿಣ ಭಾರತೀಯರ ಮೈ ಬಣ್ಣದ ಬಗ್ಗೆ ಜನಾಂಗೀಯ ನಿಂದನೆಯ ಮಾತು ಆಡಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದರು.

ಇವರೆಲ್ಲ ‘ತಾವು ಸಂಘದ ಶಾಖೆಯಲ್ಲಿ ಸಂಸ್ಕಾರ ಪಡೆದು ಬಂದವರು’ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳುತ್ತಾರೆ. ಈಗ ಅವರು ಪಡೆದಿರುವುದು ಹೆಮ್ಮೆ ಪಡುವಂತಹ ಒಳ್ಳೆಯ ಸಂಸ್ಕಾರವೇ? ಇದು ಸಂಘದ ಶಾಖೆಯಲ್ಲಿ ದಕ್ಕಿದ ಸಂಸ್ಕಾರವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದ್ದರೆ ನೀವು ಸಂಘದ ಸಂರಚನೆ ಅದರ ಸಿದ್ದಾಂತ ಮತ್ತು ಇತಿಹಾಸದತ್ತ ಕಣ್ಣು ಹಾಯಿಸಬೇಕು.

ಜನಾಂಗ ದ್ವೇಷದ ಕುಲುಮೆಯಲ್ಲಿಯೇ ಸೃಷ್ಟಿಯಾದ ಸಂಘಕ್ಕೆ ಭವಿಷ್ಯಕ್ಕಿಂತಲೂ ಭೂತಕಾಲದ ಬಗ್ಗೆಯೇ ಹೆಚ್ಚು ಆಸಕ್ತಿ. ಆಧುನಿಕ ಆಲೋಚನೆಗಳೆಂದರೆ ಅದಕ್ಕೆ ಆಗದು. ವರ್ಣವ್ಯವಸ್ಥೆಯ ಮನುವಾದದಲ್ಲಿ ಪ್ರಬಲ ನಂಬಿಕೆ ಇರಿಸಿರುವ ಅದು ತನ್ನ ಹಿಂಬಾಲಕರನ್ನೆಲ್ಲ ಭೂತಕಾಲಕ್ಕೆ ಒಯ್ಯವ ಯತ್ನ ಮಾಡುತ್ತಲೇ ಇರುತ್ತದೆ.

ಆರೆಸೆಸ್ ನ ಪರಿಕಲ್ಪನೆಯ ಹಿಂದೂ ಧರ್ಮ ಅಂದರೆ ಬ್ರಾಹ್ಮಣ ಧರ್ಮ; ಹಿಂದೂ ರಾಷ್ಟ್ರ ಅಂದರೆ ಬ್ರಾಹ್ಮಣ ರಾಷ್ಟ್ರ. ರಾಜೇಂದ್ರ ಸಿಂಗ್  (ರಾಜು ಭೈಯ್ಯಾ) ಹೊರತುಪಡಿಸಿದರೆ, ಹೆಚ್ಚು ಕಡಿಮೆ ನೂರು ವರ್ಷಗಳ ಅದರ ಇತಿಹಾಸದಲ್ಲಿ ಅದರ ಸರಸಂಘ ಚಾಲಕರಾಗಿದ್ದ ಎಲ್ಲರೂ ಚಿತ್ಪಾವನ ಬ್ರಾಹ್ಮಣರು. ಸಂಘದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಭಾರತೀಯ ಸಮಾಜದಲ್ಲಿ ಮಹಿಳೆ ಇರಬೇಕಾದುದು ಮನೆಯೊಳಗಡೆಯೇ ಎಂಬರ್ಥದಲ್ಲಿ ಸಂಘದ ಮುಖ್ಯಸ್ಥ ಮೋಹನ ಭಾಗವತರು ಅನೇಕ ಬಾರಿ ಹೇಳಿಕೆ ನೀಡಿದ್ದಾರೆ.

ಭಾರತದ ರಾಷ್ಟ್ರಗೀತೆಯನ್ನಾಗಲೀ, ತ್ರಿವರ್ಣ ಧ್ವಜವನ್ನಾಗಲೀ ಬಾಬಾ ಸಾಹೇಬರ ಭಾರತ ಸಂವಿಧಾನವನ್ನಾಗಲೀ ಪೂರ್ಣ ಮನಸಿನಿಂದ ಎಂದೂ ಒಪ್ಪಿಕೊಳ್ಳದ ಸಂಘಕ್ಕೆ ಈಗಲೂ ಮನುಸ್ಮೃತಿಯೇ ಇಷ್ಟ. ಮನುಸ್ಮೃತಿ ಎಂದರೆ ವರ್ಣವ್ಯವಸ್ಥೆಯ ಮೇಲು-ಕೀಳು ಸಿದ್ಧಾಂತ. ಅಂದಮೇಲೆ ಸಂಘದ ಸಿದ್ಧಾಂತವನ್ನೇ ಪ್ರೀತಿಸುವ, ಜೀವಿಸುವ ಆರಗರಂಥವರ ಮನಸಿನ ಆಳದಲ್ಲಿ ಕರಿಯರು ಮತ್ತು ದಲಿತರ ಬಗ್ಗೆ ತುಚ್ಛ ಭಾವನೆ ಇರುವುದರಲ್ಲಿ ಅಚ್ಚರಿಯಾದರೂ ಏನು?!

ಕಪ್ಪು ಬಣ್ಣದ ಬಗ್ಗೆ ದ್ವೇಷ ಇರುವ ಆರಗ ಜ್ಞಾನೇಂದ್ರರಂಥವರಿಗೆಂದೇ ಪುರಂದರ ದಾಸರು ಹೀಗೊಂದು ಕೀರ್ತನೆ ರಚಿಸಿದ್ದಾರೆ-

ಕಪ್ಪು ಎನ್ನಲು ಬೇಡವೋ, ಶ್ರೀ ಹರಿಯನ್ನು

ಕಪ್ಪು ಎನ್ನಲು ಬೇಡವೋ ||ಪ||

ಹರಿಯ ಮಧ್ಯದಿ ಕಪ್ಪು, ಹಾಲಾಹಲವು ಕಪ್ಪು, ಪರಮ ಅಶ್ವವೆ ಕಪ್ಪು

ಪಾರಿಜಾತವೆ ಕಪ್ಪು, ಕರಿಗಳೆಲ್ಲವು ಕಪ್ಪು, ಸುಲಲಿತವರನೆ ಕಪ್ಪು

ಸನ್ನುತವಾದ ಹರಿಹಯ ನೀಲಿಕಪ್ಪು, ಅಂಗನೆ ಕೇಳು

ಜಗದೊಳಗೆ ಗುಲಗಂಜಿ ಶಿರಗಳೆಲ್ಲವು ಕಪ್ಪು ||

ಬರೆವ ಕಂಟವೆ ಕಪ್ಪು, ಭಾರದ್ವಾಜವೆ ಕಪ್ಪು, ವರರಾಘವನ್ನ

ಪಾವನಾಂಗವೆ ಕಪ್ಪು, ಎರೆವ ಭೂಮಿಯು ಕಪ್ಪು, ಎಸೆವ ಕಸ್ತೂರಿ ಕಪ್ಪು

ಸುಲಲಿತವರನೆ ಕಪ್ಪು, ಅಂಗನೆ ಕೇಳು

ಮೂರುಲೋಕದಿ ನಮ್ಮ ಮುದ್ದುಕೃಷ್ಣನೆ ಕಪ್ಪು ||

ಶಾಲಿಗ್ರಾಮವೆ ಕಪ್ಪು, ಸರಸಿಜೋದ್ಭವ ಕಪ್ಪು, ಲೋಲಂಬಗಳು ಕಪ್ಪು

ರುಚಿತ ಕೋಗಿಲೆ ಕಪ್ಪು, ಮಾಲವುತ್ವವೆ ಕಪ್ಪು, ನಿರ್ಮಲಚಿತ್ತವೆ ಕಪ್ಪು

ಕಾಲಿಂದೀ ನದಿಯೆ ಕಪ್ಪು, ಕಾಮಿನಿಯರ ಕರಿಮಣಿಸರವೆ ಕಪ್ಪು, ಅಂಗನೆ ಕೇಳು

ಮೂರುಲೋಕದಿ ನಮ್ಮ ಪುರಂದರವಿಠಲ ಮೂರುತಿ ಕಪ್ಪು ||

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ ವರ್ಣದ್ವೇಷದ ಹೇಳಿಕೆ: ಕ್ಷಮೆಯಾಚಿಸಿದ ಆರಗ ಜ್ಞಾನೇಂದ್ರ

ರೇಸಿಸ್ಟ್‌ ಹೇಳಿಕೆ: ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

Related Articles

ಇತ್ತೀಚಿನ ಸುದ್ದಿಗಳು