Wednesday, June 19, 2024

ಸತ್ಯ | ನ್ಯಾಯ |ಧರ್ಮ

ಸುಳ್ಳು ಸುದ್ದಿಗಳ ಮಹಾಸಾಗರ

ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಮುಕ್ಕಾಲು ಪಾಲು ಸುದ್ದಿಗಳು ಫೇಕ್ ನ್ಯೂಸ್ ಗಳೇ. ಇದರಲ್ಲಿ ಭಾರತದ ದ್ವೇಷ ಭಕ್ತ ಬಲಪಂಥೀಯರ ಕೊಡುಗೆಯೇ ಅತ್ಯಧಿಕ. ಯಾವುದೋ ದೇಶದ ಯಾವುದೋ ಕಾಲದಲ್ಲಿ ನಡೆದ ನರಮೇಧ, ವಿಧ‍್ವಂಸಕ ಕೃತ್ಯಗಳನ್ನೆಲ್ಲ ತಂದು ಹಮಾಸ್ ಗೆ ಜೋಡಿಸಲಾಗುತ್ತಿದೆ. ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಡುವಿಲ್ಲದೆ ಮಾಡಲಾಗುತ್ತಿದೆ – ಶ್ರೀನಿವಾಸ ಕಾರ್ಕಳ

ಎರಡು ದಿನಗಳ ಹಿಂದೆಯಷ್ಟೇ ನಾಡಿನ ಜನ ಒಂದು ಸುದ್ದಿ ಓದಿ ಬೆಚ್ಚಿಬಿದ್ದರು. ಖ್ಯಾತ ಸಂಗೀತ ಕಲಾವಿದ ಮತ್ತು ವಿದ್ವಾಂಸ ಪಂಡಿತ್ ತಾರಾನಾಥರಿಂದ ಮೈಸೂರು ದಸರಾ ಆಯೋಜಕರು ಮೂರು ಲಕ್ಷ ಲಂಚ ಕೇಳಿದರಂತೆ ಎಂಬುದು ಆ ಸುದ್ದಿ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲಿಯೇ ಇದು ಪ್ರಕಟವಾದ ನೆಲೆಯಲ್ಲಿ ಅದನ್ನು ನಂಬದಿರುವುದು ಸಾಧ‍್ಯವೇ ಇರಲಿಲ್ಲ. ಜನ ನಂಬಿದರು. ಆದರೆ, ಮಧ್ಯಾಹ್ನಕ್ಕಾಗುವಾಗ ಅದು ಸುಳ್ಳು ಸುದ್ದಿ ಎಂದು ಹೇಳಲಾಯಿತು. ಯಾವುದನ್ನು ನಂಬುವುದು ಯಾವುದನ್ನು ಬಿಡುವುದು?!

ಲುಲು ಮಾಲ್ ನಲ್ಲಿ ಭಾರತದ ಧ‍್ವಜಕ್ಕಿಂತ ಮೇಲ್ಗಡೆ ಪಾಕಿಸ್ತಾನ ಧ‍್ವಜ ಹಾಕಿದ್ದಾರೆ ಎಂದು ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಸುಳ್ಳು ಸುದ್ದಿ ಹರಡಿ ಕೋಮು ಭಾವನೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಸುಮೋಟೋ ಕೇಸು ದಾಖಲಾಗಿದೆ. ನೀವು ಯಾವ ಕೋನದಲ್ಲಿ ನಿಂತು ಫೋಟೋ ತೆಗೆದಿದ್ದೀರಿ ಎನ್ನುವುದರ ಮೇಲೆ ಒಂದು ಬಾವುಟ ಮೇಲಿದ್ದಂತೆ ಅಥವಾ ಕೆಳಗಿದ್ದಂತೆ ಕಾಣಬಹುದು, ಕಾಣಿಸಬಹುದು ಎಂಬ ಪ್ರಾಥಮಿಕ ಜ್ಞಾನ ಇರುವವರಿಗೆ ಇದು ಮೇಲ್ನೋಟಕ್ಕೇ ಸುಳ್ಳು ಸುದ್ದಿ ಎಂಬುದು ತಿಳಿಯುತ್ತದೆ. ಆದರೂ ಅದನ್ನು ಈ ಹೆಣ್ಣುಮಗಳು ಹಿಂದೆ ಮುಂದೆ ನೋಡದೆ ಹಂಚಿದಳು. ಇದರ ಹಿಂದೆ ಕೆಲಸ ಮಾಡಿದ್ದು ರಾಜಕೀಯ ಮತ್ತು ಕೋಮು ದುರುದ್ದೇಶ.

ಈಗ ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಸಂದರ್ಭದಲ್ಲಿಯಂತೂ ಫೇಕ್ ನ್ಯೂಸ್ ಗಳದೇ ಕಾರುಬಾರು. ಈ ಫೇಕ್ ನ್ಯೂಸ್ ಗಳಿಗೆ ಜಗತ್ತಿನ ದೊಡ್ಡ ದೊಡ್ಡ ಮಾಧ್ಯಮಗಳೇ ಮೋಸ ಹೋಗುತ್ತಿವೆ.

ಲುಲು ಮಾಲ್

40 ಶಿಶುಗಳ ಶಿರಚ್ಛೇದದ ಕತೆ

ಉದಾಹರಣೆಗೆ, ಹಮಾಸ್ ಉಗ್ರರು ಇಸ್ರೇಲ್ ನ 40 ಶಿಶುಗಳ ತಲೆ ಕತ್ತರಿಸಿದ್ದಾರೆ ಎಂಬ, ಜಗತ್ತೇ ಬೆಚ್ಚಿಬೀಳುವ ಒಂದು ಸುದ್ದಿ ಹೊರಬಂತು. ಸುದ್ದಿಯ ಮೂಲ ಯಾವುದು ಎಂಬ ಗೋಜಿಗೆ ಹೋಗದೆ ಜಗತ್ತಿನ ಬಹುತೇಕ ದೊಡ್ಡ ದೊಡ್ಡ ಮಾಧ್ಯಮಗಳು ಪೈಪೋಟಿಯ ಮೇಲೆ ಅದಕ್ಕೆ ಒಂದಿಷ್ಟು ಮಸಾಲೆ ಬೆರೆಸಿ ಪ್ರಕಟಿಸಿದವು. ಅಮೆರಿಕಾ ಅಧ್ಯಕ್ಷರೇ ಇದು ಸತ್ಯ ಸುದ್ದಿಯೇನೋ ಎಂಬಂತೆ ಹೇಳಿಕೆ ನೀಡಿದ ಮೇಲೆ ಅದನ್ನು ನಂಬದಿರಲು ಸಾ‍ಧ್ಯವೇ ಇರಲಿಲ್ಲ. ‘ನೋಡಿದ್ರಾ.. ಅಮೆರಿಕ ಅಧ್ಯಕ್ಷ ಬೈಡನ್ ಅವರೇ ಹೇಳಿದ್ದಾರೆ..’ ಎಂದು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳ ತೊಡಗಿದರು ಅನೇಕರು. ಸ್ವಲ್ಪವೇ ಹೊತ್ತಿನಲ್ಲಿ ‘ಬೈಡನ್ ಹೇಳಿದ್ದು ಪ್ರಬಲ ಪುರಾವೆ ಇದ್ದು ಅಲ್ಲ, ಕೇವಲ ವರದಿಗಳನ್ನು ನಂಬಿ’ ಎಂದು ಶ್ವೇತ ಭವನ ಹೇಳಿತು. ಸುದ್ದಿಯನ್ನು ಸಮರ್ಥಿಸಲು ಇಸ್ರೇಲ್ ಸೇನೆಯೂ ನಿರಾಕರಿಸಿತು! 40 ಮಕ್ಕಳ ತಲೆ ಕತ್ತರಿಸಿದ್ದಕ್ಕೆ ಪುರಾವೆಯೇ ಇರಲಿಲ್ಲ.

ಬೃಹತ್ ನಗರವೊಂದರ ಬಹುಮಹಡಿ ಕಟ್ಟಡಗಳು ಬೆಂಕಿ ಪೊಟ್ಟಣಗಳ ಹಾಗೆ ಉರುಳುವ ವೀಡಿಯೋ ಒಂದನ್ನು ಹಾಕಿ ಇದು ಇಸ್ರೇಲ್ ದಾಳಿಗೆ ಉರುಳುತ್ತಿರುವ ಕಟ್ಟಡಗಳು ಎನ್ನಲಾಯಿತು. ಅಸಲಿಗೆ ಅದು ಚೀನಾದಲ್ಲಿ ನಿಯಂತ್ರಿತ ರೀತಿಯಲ್ಲಿ ಉರುಳಿಸಲಾದ ಕಟ್ಟಡಗಳು. ಅದು ಉಕ್ರೇನ್ ಯುದ್ಧ ಇರಬಹುದು, ಹಮಾಸ್ ಇಸ್ರೇಲ್ ಸಂಘರ್ಷ ಇರಬಹುದು ವರದಿಗಳ ಜತೆಯಲ್ಲಿ ಕೆಲವೊಮ್ಮೆ ಯುದ್ಧದ ವೀಡಿಯೋ ಗೇಮ್ ಗಳ ತುಣುಕುಗಳೂ ಇರುವುದಿದೆ. ಭಾರತದ ಗೋದಿ ಮೀಡಿಯಾಗಳೇ ಈ ಕೆಲಸ ಮಾಡಿದುದೂ ಇದೆ.

ಫ್ಯಾಕ್ಟ್ ಚೆಕ್ಕರ್ ಗಳಿಗೆ ಕೈತುಂಬ ಕೆಲಸ

ಫ್ಯಾಕ್ಟ್ ಚೆಕ್ಕರ್ ಮಹಮದ್ ಜುಬೇರ್ ಅಂಥವರಿಗೆ ಕಳೆದ ಒಂದು ವಾರದಿಂದ ಬಿಡುವಿಲ್ಲದ ಕೆಲಸ- ಸುಳ್ಳು ಸುದ್ದಿಗಳ ಮಿಥ್ಯೆಯನ್ನು ಒಡೆಯುವುದು. ಅವರು ಬಹಿರಂಗಪಡಿಸಿದ ಸುಳ್ಳು ಸುದ್ದಿಗಳ ಸಂಖ್ಯೆ ನೋಡಿದರೆ ಗಾಬರಿಯಾದೀತು. ಹಮಾಸ್ ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೊರಬರುತ್ತಿರುವ ಮುಕ್ಕಾಲು ಪಾಲು ಸುದ್ದಿಗಳು ಫೇಕ್ ನ್ಯೂಸ್ ಗಳೇ. ಇದರಲ್ಲಿ ಭಾರತದ ದ್ವೇಷ ಭಕ್ತ ಬಲಪಂಥೀಯರ ಕೊಡುಗೆಯೇ ಅತ್ಯಧಿಕ. ಯಾವುದೋ ದೇಶದ ಯಾವುದೋ ಕಾಲದಲ್ಲಿ ನಡೆದ ನರಮೇಧ, ವಿಧ‍್ವಂಸಕ ಕೃತ್ಯಗಳನ್ನೆಲ್ಲ ತಂದು ಹಮಾಸ್ ಗೆ ಜೋಡಿಸಲಾಗುತ್ತಿದೆ. ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಡುವಿಲ್ಲದೆ ಮಾಡಲಾಗುತ್ತಿದೆ.

ಪ್ರಾಯಶಃ ತಮ್ಮ ಇತ್ತೀಚಿನ ಬದುಕಿನಲ್ಲಿ ಫೇಕ್ ನ್ಯೂಸ್ ಗೆ ಬಲಿಯಾಗದ ಒಬ್ಬನೇ ಒಬ್ಬ ವ್ಯಕ್ತಿ ಸಿಗಲಾರನೇನೋ. ನೀವು ವಾಟ್ಸಪ್ ಅಥವಾ ಫೇಸ್ ಬುಕ್ ನಲ್ಲಿ ಇರುವವರಾದರೆ ಸುದ್ದಿ ನಿಜ ಎಂದು ತಪ್ಪು ತಿಳಿದು ನೀವು ಒಮ್ಮೆಯಾದರೂ ಫೇಕ್ ನ್ಯೂಸ್ ಹಂಚಿಕೊಂಡಿದ್ದೀರೋ ಇಲ್ಲವೋ.. ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ತಪ್ಪು ಪೂರ್ತಿ ನಿಮ್ಮದಲ್ಲ. ಆ ಸುದ್ದಿಯನ್ನು ನಂಬುವಂತೆಯೇ ಸೃಷ್ಟಿಸಿರಲಾಗಿರುತ್ತದೆ. ಮತ್ತು ಸ್ವಲ್ಪ ಮಟ್ಟಿಗೆ ಅದನ್ನು ಹರಡುವಲ್ಲಿ ನಿಮ್ಮ ಆತುರದ ಮನಸಿನ ಕೊಡುಗೆಯೂ ಇರುತ್ತದೆ.

ಬಟಾಟೆಯಿಂದ ಚಿನ್ನ ತೆಗೆದ ಕತೆ

ಇತ್ತೀಚಿನ ಭಾರತದ ಅತಿ ದೊಡ್ಡ ಫೇಕ್ ನ್ಯೂಸ್ ಅಂದರೆ ರಾಹುಲ್ ಗಾಂಧಿ ‘ಬಟಾಟೆಯಿಂದ ಚಿನ್ನ ತಯಾರಿಸುತ್ತೇನೆ’ ಎಂದು ಹೇಳಿದ್ದು. ಇದನ್ನು ಮಹಾ ಮಹಾ ಬುದ್ಧಿವಂತರೂ ನಂಬಿ ಬೇಸ್ತು ಬಿದ್ದುದೆ. ಅದರ ನಿಜ ಕತೆ ಏನು ಗೊತ್ತೇ? ಗುಜರಾತ್ ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿಯವರು ಮೋದಿಯವರನ್ನು ಗೇಲಿ ಮಾಡುತ್ತಾ, ‘ಮೋದಿಯವರು ನಿಮ್ಮನ್ನು ಹೇಗೆ ಮೋಸ ಮಾಡುತ್ತಾರೆ ಎಂದರೆ, ನಾನು ಒಂದು ಮಶೀನ್ ಹಾಕುತ್ತೇನೆ ಅದರ ಈ ಬದಿಯಲ್ಲಿ ನೀವು ಆಲೂ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ ಎನ್ನುತ್ತಾರೆ. ನೀವು ಮೋಸ ಹೋಗುತ್ತೀರಿ’ ಎಂದುದು. ಬಿಜೆಪಿ ಐಟಿ ಸೆಲ್ ನವರು ಈ ವೀಡಿಯೋವನ್ನು ತಮಗೆ ಬೇಕಾದಂತೆ ಕತ್ತರಿಸಿ ಅದು ರಾಹುಲ್ ಗಾಂಧಿ ಹೇಳಿದ್ದು ಎಂದು ಬಿಂಬಿಸಿದರು. ದಿನಬೆಳಗಾಗುವುದರೊಳಗೆ ಅದು ವೈರಲ್ ಆಯಿತು. ಜನ ಅದನ್ನು ನಂಬಿದರು. ಈಗಲೂ ನಂಬುತ್ತಲೇ ಇದ್ದಾರೆ! ಇದು ಸತ್ಯೋತ್ತರ ಯುಗದಲ್ಲಿ ಸುಳ್ಳಿನ ಶಕ್ತಿ.

ಸುಳ್ಳು ಸುದ್ದಿ ಸೃಷ್ಟಿಸುವುದು ಹೊಸ ಸಂಗತಿಯಲ್ಲ. ಹಿಂದೆಯೂ ಅದು ನಡೆಯುತ್ತಲೇ ಇತ್ತು (ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಮೊದಲಾದವರ ಬಗ್ಗೆ ಅನೇಕ ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗಿತ್ತು). ಆದರೆ ಈಗ ನಾವಿರುವುದು ಮೊಬೈಲ್ ಇಂಟರ್ನೆಟ್ ಯುಗ. ನಮ್ಮ ಬಳಿ ಫೇಸ್ ಬುಕ್, ವಾಟ್ಸಪ್, ಟ್ವಿಟರ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮಗಳಿವೆ. ಅವುಗಳ ಮೂಲಕ ಜಾಗತಿಕವಾಗಿ ಯಾರನ್ನು ಬೇಕಾದರೂ ನೀವು ಕ್ಷಣಗಳಲ್ಲಿ ತಲಪಬಹುದು. ತಲಪಬಹುದು ಅಂದ ಮೇಲೆ ಸುಳ್ಳು ಸುದ್ದಿಗಳನ್ನೂ ತಲಪಿಸಬಹುದು, ಅಲ್ಲವೇ? ಈಗ ಆಗುತ್ತಿರುವುದೂ ಅದೇ.

ಫೇಕ್ ನ್ಯೂಸ್ ಉಂಟು ಮಾಡಿರುವ ಅನಾಹುತಗಳು

ಪ್ರತಿಯೊಂದಕ್ಕೂ ಎರಡು ಮುಖವಿದೆ. ಇಂಟರ್ ನೆಟ್, ಸೋಶಿಯಲ್ ಮೀಡಿಯಾ ಇವೆಲ್ಲ ಎರಡು ಅಲಗಿನ ಕತ್ತಿಗಳು. ಕತ್ತಿಯನ್ನು ಕೃಷಿ ಕೆಲಸಗಳಿಗೂ ಬಳಸಬಹುದು, ಯಾರದಾದರೂ ತಲೆ ಕತ್ತರಿಸಲೂ ಬಳಸ ಬಹುದು. ಕತ್ತಿ ಯಾರ ಕೈಯಲ್ಲಿ ಇದೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.

ಫೇಕ್ ನ್ಯೂಸ್ ಗಳು ಭಾರತದಂತಹ ದೇಶಗಳಲ್ಲಿ ಮಾಡಿರುವ ಅನಾಹುತಗಳು ಅಸಂಖ್ಯ. ಮಕ್ಕಳ ಕಳ್ಳರು ಎಂಬ ಸುಳ್ಳು ಸುದ್ದಿ ನಂಬಿ ಅಪರಿಚಿತರನ್ನು ಬಡಿದು ಸಾಯಿಸಿದ ಉದಾಹರಣೆ ಇದೆ. ಗೋಮಾಂಸದ ಸುಳ್ಳು ಸುದ್ದಿಯ ಮೇಲೆ ಕೊಲೆಗಳು ನಡೆದಿವೆ. ಧರ್ಮವನ್ನು ದೇವರನ್ನು ಕುರಿತ ಸುಳ್ಳು ಸುದ್ದಿಗಳನ್ನ ನಂಬಿ ಕೋಮು ಗಲಭೆ ನಡೆದ ಉದಾಹರಣೆಯಿದೆ. ಬದುಕಿರುವವರನ್ನೂ, ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ಹರಡಿ, ಸಾಯಿಸಿ ‘ಓಂ ಶಾಂತಿ, ರಿಪ್’ ಎಂದ ಉದಾಹರಣೆಯಿದೆ. ದುಷ್ಟರ ಮತ್ತು ಅವಿವೇಕಿಗಳ ಕೈಯಲ್ಲಿ ಈಗ ಸ್ಮಾರ್ಟ್ ಫೋನ್ ಇದೆ.  ಸೋಶಿಯಲ್ ಮೀಡಿಯಾದ ಕಾರಣಕ್ಕಾಗಿಯೇ ಈಗ ಭಾರತ ಜ್ವಾಲಾಮುಖಿಯ ಮೇಲೆ ಕುಳಿತಿದೆ. ಅದು ಯಾವ ಕ್ಷಣದಲ್ಲಿಯೂ ಸಿಡಿಯಬಹುದು.

ಈವತ್ತು ನಾವು ಎಂತಹ ಸುಳ್ಳು ಸುದ್ದಿಗಳ ಸಾಗರದ ಮಧ್ಯದಲ್ಲಿದ್ದೇವೆ ಎಂದರೆ ನಿಜ ಸುದ್ದಿಯನ್ನೂ ನಂಬುವುದೋ ಬಿಡುವುದೋ ಎಂಬ ಗೊಂದಲಕ್ಕೊಳಗಾಗುವಂತಾಗಿದೆ. ಹಾಗಾಗಿ ಯಾವುದೇ ಸುದ್ದಿಯನ್ನು ನಂಬುವ ಮತ್ತು ಅದಕ್ಕೂ ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವ ಮುನ್ನ ಒಂದುಬಾರಿ ಎರಡು ಬಾರಿಯಲ್ಲ ನೂರು ಬಾರಿ ಯೋಚಿಸುವಂತಾಗಿದೆ. ಈ ಸುಳ್ಳು ಸುದ್ದಿಗಳು ದೊಡ್ಡ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿರುವ ನೆಲೆಯಲ್ಲಿ ಅವಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಕಡಿವಾಣ ಹಾಕುವುದು ಹೇಗೆ, ಯಾರು ಮತ್ತು ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ

Related Articles

ಇತ್ತೀಚಿನ ಸುದ್ದಿಗಳು