Thursday, June 20, 2024

ಸತ್ಯ | ನ್ಯಾಯ |ಧರ್ಮ

‘ಶಕೀಲಾ’ ಹೆಸರಿನ ಅಶ್ಲೀಲತೆ ಅಳಿಸುವ ಆತ್ಮಕಥೆ – ಅರುಣ್ ಜೋಳದಕೂಡ್ಲಿಗಿ

ಶಕೀಲಾ ಎನ್ನುವ ಹೆಸರು ನೆನಪಾದೊಡನೆ ಸಿನೆಮಾ ಪ್ರಿಯ ನಾನಾ ಚಿತ್ರಗಳು ಸೃತಿಪಟಲದಲ್ಲಿ ಮೂಡುತ್ತವೆ. ಗೋಡೆಗಂಟಿಸಿದ್ದ ಪೋಷ್ಟರ್‍ಗಳಲ್ಲಿ ಮಾದಕವಾಗಿ ಕಣ್ಣುಕುಕ್ಕುವ ಅರೆನಗ್ನ ಶಕೀಲ ನಮ್ಮೆದುರು ನಿಲ್ಲುತ್ತಾಳೆ. ಅಂತೆಯೇ ಅವಳ ಸಿನೆಮಾ ದೃಶ್ಯಾವಳಿಗಳು ಒಂದು ಕ್ಷಣ ಹುಸಿರುಗಟ್ಟಿಸುತ್ತವೆ. ಈ ದೃಶ್ಯಗಳಾಚೆ ಶಕೀಲಾ ಏನು? ಅವಳ ದೇಹದರ್ಶನ ಮಾಡಿದ ಕಣ್ಣುಗಳಿಂದ ರೂಪುಗೊಂಡ ಚಿತ್ರಗಳ ತೆರೆ ಸರಿಸಿ ನೋಡಿದರೆ ಅವಳ ಮನಸ್ಸಿನಾಳದಿಂದ ಕಾಣುವ ಶಕೀಲಾ ಹೇಗಿದ್ದಾಳೆ, ಅಥವಾ ಸಿನಿಮೀಯ ದೃಶ್ಯಗಳಾಚೆ ನಿಜದ ಶಕೀಲಾ ಯಾರು? ಎನ್ನುವುದನ್ನು ಅವಳ ಆತ್ಮಕಥೆ ಮಾತನಾಡುತ್ತಾ ಹೋಗುತ್ತದೆ.

ತಮಿಳು ಮತ್ತು ಮಲೆಯಾಳಿ ಚಿತ್ರರಂಗವು ಪ್ರೇಕ್ಷಕ ವರ್ಗಕ್ಕೆ ತೋರಿಸಿದ ಶಕೀಲಾ ಮತ್ತು ಅವಳ ಆತ್ಮಕಥನದ ಮೂಲಕ ಕಾಣುವ ಈ ಎರಡೂ ಭಾಷೆಯ ಸಿನೆಮಾ ಜಗತ್ತಿನ ನಿಜದ ಸ್ವರೂಪ ಎದುರು ಬದುರಾಗಿವೆ. ಇವುಗಳ ಡಿಕ್ಕಿಯಿಂದ ಹೊರಸೂಸುವ ಕಿಡಿಗಳು ಶಕೀಲಾ ಆತ್ಮಕಥನದಲ್ಲಿ ಕಾಣುತ್ತವೆ. ಅದುವೆ ಈ ಕಥನದ ಶಕ್ತಿಯಾಗಿದೆ.

ಶಕೀಲಾ ಆತ್ಮಕಥೆಯು ಹಲ ಬಗೆಯ ಪ್ರಶ್ನೆಗಳನ್ನು ಎತ್ತುತ್ತದೆ. ಸಿನೆಮಾ ಕನಸೊತ್ತು ಸಿನಿ ನಗರಿಗೆ ಬಂದು ದಿಕ್ಕುಕಾಣದಾದ ಮಹಿಳೆಯರ ಸಂಖ್ಯೆ ದೊಡ್ಡದಿದೆ. ಅಂತವರ ಬಗ್ಗೆ ಪುಸ್ತಕ ಬರೆದರೆ ಸಜ್ಜನಿಕೆಯ ಮುಖವಾಡ ಹೊತ್ತ ಗಂಡಸಿನ ಲೋಕ ಅನಾವರಣಗೊಳ್ಳುತ್ತದೆ ಎನ್ನುತ್ತಾರೆ.

ಹಾಗಾಗಿ ಇದು ಶಕೀಲಾ ಆತ್ಮಕಥೆಯಷ್ಟೆ ಅಲ್ಲದೆ ತಮಿಳು ಮತ್ತು ಮಲಯಾಳ ಸಿನೆಮಾ ರಂಗದ ಒಳಜಗತ್ತಿನ ಪುರುಷ ಕ್ರೌರ್ಯವನ್ನು ತೋರಿಸುವ ಕಥನವೂ ಆಗಿದೆ. ಈ ಜಗತ್ತನ್ನು ನೊಂದ ಹೆಣ್ಣೊಬ್ಬಳು ನೋಡುವ ದೃಷ್ಟಿಕೋನದ ಎಳೆಯೊಂದಿದೆ.

ಕೇರಳ ಮಾತೃಸಂಸ್ಕøತಿಯ ನೆಲೆಯ ನಾಡು. ಇಂತಹ ನಾಡು ಶಕೀಲಳನ್ನು ನಡೆಸಿಕೊಂಡ ಬಗೆ ಮತ್ತು ಅವಳಿಗೆ ಮಾಡಿದ ಮೋಸದ ರೀತಿಗಳು ಆ ನಾಡಿನ ಭಿನ್ನ ಮುಖವೊಂದನ್ನು ತೋರಿಸುತ್ತದೆ.

ತೆರೆಮೇಲೆ ಶಕೀಲ ದೇಹ ಕಂಡರೂ ಆ ದೃಶ್ಯಗಳನ್ನು ಸೃಷ್ಟಿಸಿದ ಪುರುಷಕೇಂದ್ರಿತ ಮನಸ್ಸು ನಮಗೆ ಕಾಣುವುದಿಲ್ಲ. ಹಾಗಾಗಿ ಶಕೀಲಾಳಿಗೆ ಮಾತ್ರ ಅಶ್ಲೀಲತೆಯ ಸೋಂಕು ಅಂಟಿತು ಆದರೆ ಅವಳ ಸಿನಿಮಾದಿಂದ ಲಾಭ ಮಾಡಿಕೊಂಡ ನಿರ್ದೇಶಕ ನಿರ್ಮಾಪಕರಿಗೆ ಈ ಸೋಂಕು ತಗಲದಂತೆ ನೋಡಿಕೊಂಡರು. ಇದು ಸಿನೆಮಾ ಜಗತ್ತನ್ನು ಹೆಣ್ಣಿನ ಕಣ್ಣೋಟದಿಂದ ನೋಡಿದಾಗ ಮಾತ್ರ ಗೋಚರಿಸುವ ಸತ್ಯವಾಗಿದೆ.

ಈ ಆತ್ಮಕಥೆಯನ್ನು ಶಕೀಲಾ ಬರೆಯದೆ ಹೋಗಿದ್ದರೆ, ಬಹುಶಃ ಅವಳ ಹೆಸರಿಗಂಟಿದ ಅಶ್ಲೀಲತೆಯ ಪೊರೆ ಕಳಚುತ್ತಿರಲಿಲ್ಲ. ಹಾಗಾಗಿ ಇವಳ ಆತ್ಮಕಥೆಯನ್ನು ನೋಡುವ ನೋಟಕ್ರಮಕ್ಕೂ ಭಿನ್ನ ಲೋಕದೃಷ್ಟಿಯ ಅಗತ್ಯವಿದೆ.

ಪ್ರಸಿದ್ಧ ವ್ಯಕ್ತಿಗಳ ಆತ್ಮಕಥನದಂತೆ ನೋಡಿದರೆ, ಇದರ ಒಳಗಣ ನೋವು, ದುಃಖದ ಮಡುವು ಅರ್ಥವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಕೀಲಾ ತನ್ನ ಕಥೆಯನ್ನು ಹೇಳಿಕೊಳ್ಳಲು ದೈರ್ಯ ತೋರಿರುವುದೆ ಮುಖ್ಯವಾದ ಸಂಗತಿ. ಅಂತೆಯೇ ಅವಳು ನಿಷ್ಠುರವಾಗಿ ಅನೇಕ ಸಂಗತಿಗಳನ್ನು ನಿರೂಪಿಸಿರುವುದು ಕೂಡ ಮಹತ್ವದ್ದು.

ಈ ಆತ್ಮಕಥನದ ಬಗೆಗೆ ವಿಮರ್ಶಕರಾದ ಎಂ.ಎಸ್.ಆಶಾದೇವಿ ಅವರು ಗಂಭೀರ ವಿಮರ್ಶೆ ಮಾಡಿ ‘ಆತ್ಮವಿಮರ್ಶೆ ಇಲ್ಲದ ಸ್ವಮೋಹದ ಕಥನ’ ಎಂದು ಪ್ರಜಾವಾಣಿಗೆ ಬರೆದಿದ್ದರು. ನಂತರ ಈ ವಿಮರ್ಶೆ ಚರ್ಚೆಯನ್ನು ಹುಟ್ಟಿಸಿತು. ಪ್ರಸಿದ್ಧ ವ್ಯಕ್ತಿಗಳ ಆತ್ಮಕಥನದಂತೆ ಇಂಥವರ ಆತ್ಮಕತೆಗಳನ್ನು ವಿಮರ್ಶಿಸಬಾರದು, ಇಂತವರ ಲೋಕದ ಅನಾವರಣವೆ ಸ್ಥಾಪಿತ ದೃಷ್ಟಿಕೋನವನ್ನು ಬದಲಿಸುತ್ತದೆ. ಹಾಗಾಗಿ ಮಾನವೀಯ ನೆಲೆಯಲ್ಲಿ ಈ ಕಥನವನ್ನು ನೋಡಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.

ಶಕೀಲಾ ನಟಿಯಾಗಬೇಕೆಂಬ ಕನಸೊತ್ತು ಸಿನಿಮಾ ಜಗತ್ತನ್ನು ಪ್ರವೇಶಿಸಿದರೆ ‘ವಯಸ್ಕರ ಸಿನೆಮಾಕ್ಕೆ’ ತನ್ನನ್ನು ಕಟ್ಟಿಹಾಕಿದರು. ಇದರಿಂದ ಬೇಸತ್ತು ಇಂತಹ ಸಿನೆಮಾಗಳನ್ನು ಮಾಡಲಾರೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಈಗಲೂ ಒಳ್ಳೆಯ ಸಿನೆಮಾಗಳಿಗಾಗಿ ಕಾಯುತ್ತಿರುವೆ ಎನ್ನುವ ಮನವಿಯನ್ನೂ ಮಾಡುತ್ತಾರೆ. ಬಹುಶಃ ಈ ನಿರ್ಧಾರವೆ ಅವರನ್ನು ಆತ್ಮಕತೆ‌ ಬರೆಯುವಂತೆ ಪ್ರೇರೇಪಿಸಿರಬಹದು.‌ ಹಾಗಾಗಿ ಈ ಬರಹ ಅವರ ಬಗೆಗಿನ ಲೋಕದ ತಿಳಿವನ್ನು ತಿದ್ದುವ ಪ್ರಯತ್ನದಂತೆಯೂ ಕಾಣುತ್ತದೆ.

ಕನ್ನಡದ್ದೆ ಕೃತಿ ಎನ್ನುವಷ್ಟು ಉತ್ತಮವಾಗಿ ಅನುವಾದ ಮಾಡಿದ ಕೆ.ಕೆ.ಗಂಗಾಧರನ್ ಅವರು ಅಭಿನಂದನಾರ್ಹರು. ಈ ಅನುವಾದದಿಂದ ಏನೆಲ್ಲ ಪ್ರತಿಕ್ರಿಯೆಗಳು ಬಂದವು ಎನ್ನುವುದನ್ನು ಸ್ವಾರಸ್ಯಕರವಾದ ಪ್ರಬಂಧವನ್ನೂ ಬರೆದಿದ್ದಾರೆ.

~ ಅರುಣ್ ಜೋಳದಕೂಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು