ಬೆಂಗಳೂರು: ತಿರುಪತಿ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಉಂಟಾದ ವಿವಾದ ಹೆಚ್ಚು ಹೆಚ್ಚು ರಾಜಕೀಯ ತಿರುವನ್ನು ಪಡೆಯುತ್ತಿದ್ದು, ಕೆಲವು ರಾಜಕೀಯ ಹಿತಾಸಕ್ತಿಗಳು ಈ ಘಟನೆಯನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಸಹ ಹಬ್ಬಿಸುತ್ತಿವೆ.
ತಿರುಪತಿಗೆ ತುಪ್ಪ ಸರಬರಾಜು ಮಾಡಿದೆ ಎನ್ನಲಾದ ಎ ಆರ್ ಫುಡ್ಸ್ ಕಂಪನಿಯ ಹೆಸರಿನಲ್ಲಿ ಈ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಕಂಪನಿಯ ಮೇಲ್ಮಟ್ಟದ ಅಧಿಕಾರಿಗಳೆಲ್ಲ ಮುಸ್ಲಿಮರಾಗಿದ್ದು ಅವರು ಕೆಲಸ ಮಾಡುವ ಕಂಪನಿ ತಿರುಪತಿಗೆ ತುಪ್ಪ ಸಪ್ಲೈ ಮಾಡಿದ್ದಾರೆ ಎನ್ನುವ ಅರ್ಥ ಬರುವಂತೆ ಪೋಸ್ಟ್ ಮಾಡುತ್ತಿದ್ದಾರೆ.
ವಾಸ್ತವದಲ್ಲಿ ಪಾಕಿಸ್ತಾನದಲ್ಲಿಯೂ ಎ ಆರ್ ಫುಡ್ಸ್ ಹೆಸರಿನ ಕಂಪನಿಯೊಂದು ಇದ್ದು, ಅದರಲ್ಲಿನ ಅಧಿಕಾರಗಳ ಹೆಸರನ್ನು ಚೆನೈ ಮೂಲದ ಎ ಆರ್ ಫುಡ್ಸ್ ಎನ್ನುವ ಕಂಪನಿಯ ಅಧಿಕಾರಿಗಳ ಹೆಸರು ಎನ್ನುವಂತೆ ಬಿಂಬಿಸಿ ಶೇರ್ ಮಾಡಲಾಗುತ್ತಿದೆ.
ಪ್ರಸ್ತುತ ಪೋಸ್ಟಿನಲ್ಲಿ ನಸೀಮ್ ಜಾವೆದ್, ಮೊಹಮ್ಮದ್ ನಸೀಮ್, ಮೊಹಮ್ಮದ್ ನೌಮನ್ ಹಾಗೂ ರಹೀಲ್ ರೆಹಮಾನ್ ಎನ್ನುವ ಹೆಸರುಗಳಿವೆ. ಇವರುಗಳೇ ತುಪ್ಪ ಸಪ್ಲೈ ಮಾಡಿದ ಕಂಪನಿಯ ಆಡಳಿತ ಮಂಡಳಿ ಎಂದು ಅದರಲ್ಲಿ ಹೇಳಲಾಗಿದೆ.
ಆದರೆ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಚೆನ್ನೈ ಮೂಲದ ಎ ಆರ್ ಫುಡ್ಸ್ ಎನ್ನುವ ಕಂಪನಿಯನ್ನು 1995ರಲ್ಲಿ ಸ್ಥಾಪಿಸಲಾಗಿದ್ದು, ರಾಜಶೇಖರನ್ ಆರ್, ಸೂರ್ಯ ಪ್ರಭಾ ಆರ್ ಮತ್ತು ಶ್ರೀನಿವಾಸನ್ ಎಸ್ ಆರ್ ಎನ್ನುವವರು ಇದನ್ನು ನಡೆಸುತ್ತಿದ್ದಾರೆ.