Home ಕೋಮುವಾದ ವಿಧಾನಸಭೆಯಲ್ಲಿ ‘ದ್ವೇಷ ಭಾಷಣ (ಪ್ರತಿಬಂಧಕ) ವಿಧೇಯಕ–2025’ ಮಂಡನೆ; ಬಿಜೆಪಿಯಿಂದ ತೀವ್ರ ವಿರೋಧ

ವಿಧಾನಸಭೆಯಲ್ಲಿ ‘ದ್ವೇಷ ಭಾಷಣ (ಪ್ರತಿಬಂಧಕ) ವಿಧೇಯಕ–2025’ ಮಂಡನೆ; ಬಿಜೆಪಿಯಿಂದ ತೀವ್ರ ವಿರೋಧ

0

ಬೆಳಗಾವಿ: ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ದ್ವೇಷ ಭಾಷಣ ಮತ್ತು ಸಾಮಾಜಿಕ ಅಸಮರಸ್ಯಕ್ಕೆ ತಡೆ ನೀಡುವ ಉದ್ದೇಶದಿಂದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025’ ಅನ್ನು ರಾಜ್ಯ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಕೆಲ ದಿನಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾದ ಈ ಮಸೂದೆ, ಬಿಜೆಪಿ ಶಾಸಕರ ತೀವ್ರ ವಿರೋಧದ ನಡುವೆಯೇ ಸಭಾಪೀಠಕ್ಕೆ ಬಂದಿತು.

ಸಮಾಜದಲ್ಲಿ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ, ಸಾಮರಸ್ಯ ಮತ್ತು ಅಶಾಂತಿಗೆ ಕಾರಣವಾಗುವ ಭಾಷಣಗಳು, ಪ್ರಕಟಣೆಗಳು ಹಾಗೂ ಪ್ರಚಾರವನ್ನು ತಡೆಯಲು ಈ ಕಾನೂನು ಅಗತ್ಯವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದ್ವೇಷ ಅಪರಾಧಗಳಿಂದ ಬಂದಿರುವ ಹಾನಿಗೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನೂ ಮಸೂದೆ ಒಳಗೊಂಡಿದೆ.

ವಿಧೇಯಕದ ಪ್ರಕಾರ, ದ್ವೇಷ ಭಾಷಣ ಮಾಡಿದವರಿಗೆ 1 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಪ್ರಾವಧಾನ ಮಾಡಲಾಗಿದೆ. ಇದೇ ಅಪರಾಧವನ್ನು ಪುನರಾವರ್ತಿಸಿದಲ್ಲಿ 2 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ರಿಂದ ₹1 ಲಕ್ಷವರೆಗೆ ದಂಡ ವಿಧಿಸಲು ಮಸೂದೆ ಶಿಫಾರಸು ಮಾಡಿದೆ. ಇಂತಹ ಕೃತ್ಯಗಳನ್ನು ಜಾಮೀನುರಹಿತ ಅಪರಾಧಗಳೆಂದು ಪರಿಗಣಿಸಲಾಗುವುದು.

ದ್ವೇಷ ಅಪರಾಧಗಳಿಗೆ ಒಳಪಡುವ ಪ್ರಕರಣಗಳ ವಿಚಾರಣೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಲಿದೆ. ಈಗಿರುವ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 153A, 295A ಮತ್ತು 505 ಸೇರಿದಂತೆ ಹಲವು ವಿಧಿಗಳನ್ನು ಸದ್ಯದಲ್ಲಿ ದ್ವೇಷ ಭಾಷಣ ಪ್ರಕರಣಗಳಿಗೆ ಬಳಸಲಾಗುತ್ತಿದ್ದು, ಹೊಸ ವಿಧೇಯಕವು ಅವಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ಹೇಳಿದೆ.

ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, “ಈ ಕಾಯ್ದೆಯಡಿ ನೋಂದಾಯಿತ ಮತ್ತು ನೋಂದಾಯಿತವಲ್ಲದ ಸಂಘಟನೆಗಳಿಗೂ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿದೆ. ಇದರ ಮೂಲಕ ಆರ್‌ಎಸ್‌ಎಸ್‌ನ್ನು ಪರೋಕ್ಷವಾಗಿ ಗುರಿ ಮಾಡಲಾಗಿದೆ,” ಎಂದು ಆರೋಪಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ಗದ್ದಲವೂ ಉಂಟಾಯಿತು.

ಇನ್ನು ದ್ವೇಷ ಭಾಷಣ ಒಳಗೊಂಡಿರುವ ಆನ್‌ಲೈನ್, ಸಾಮಾಜಿಕ ಜಾಲತಾಣ ಮತ್ತು ಇತರೆ ಡಿಜಿಟಲ್ ಕಂಟೆಂಟ್‌ಗಳನ್ನು ಡೊಮೇನ್‌ನಿಂದ ಬ್ಲಾಕ್ ಮಾಡಲು ಅಥವಾ ತೆಗೆದು ಹಾಕಲು ಅಧಿಕಾರ ನೀಡುವ ಪ್ರಾವಧಾನವೂ ವಿಧೇಯಕದಲ್ಲಿ ಸೇರಿಸಲಾಗಿದೆ.

ರಾಜ್ಯದಲ್ಲಿ ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮಕ್ಕೆ ಮಾರ್ಗಸುಚಿಯಾಗಲಿರುವ ಈ ಮಸೂದೆ, ಮುಂದಿನ ಚರ್ಚೆಗಳು ಮತ್ತು ಅನುಮೋದನೆಗಳ ನಂತರ ಕಾನೂನಾಗುವ ಸಾಧ್ಯತೆ ಇದೆ.

You cannot copy content of this page

Exit mobile version