Monday, June 17, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್-ಪ್ಯಾಲೆಸ್ತೇನ್‌ ಸಂಘರ್ಷ: ಸುಳ್ಳು ಹರಡಿ ಭಾರತದ ಮರ್ಯಾದೆ ಕಳೆಯಬೇಡಿ!

ಪಾಠ-1: ಮೇಕಪ್‌ ಮಾಡಿ ಮೋಸ ಮಾಡುತ್ತಿದ್ದಾರೆಯೇ ಪ್ಯಾಲಿಸ್ತೇನಿಯರು?

“ಇಸ್ಲಾಮಿಕ್‌ ಯುನಿವರ್ಸಿಟಿ ಆಫ್‌ ವಿಕ್ಟಿಮ್‌ ಕಾರ್ಡ್‌ಗೆ ಸ್ವಾಗತ. ಇಲ್ಲಿ ನೀವು ಮೇಕಪ್‌ ಮಾಡಿಕೊಂಡು, ಅಳುತ್ತಾ ಇಸ್ರೇಲನ್ನು ಹೇಗೆ ಬೈಯಬಹುದು ಎಂಬುದನ್ನು ಕಲಿಯಬಹುದು. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಇಲ್ಲಿ ಸ್ಪೆಷಲ್‌ ಡಿಸ್ಕೌಂಟ್‌ ಇದೆ”

ಹೀಗೊಂದು ಟೈಟಲ್‌ ಜೊತಗೆ ಪ್ಯಾಲಿಸ್ತೇನಿನ ಮುಸಲ್ಮಾನ ಮಹಿಳೆಯೊಬ್ಬಳು ಗಾಯಗೊಂಡಂತೆ ಮೇಕಪ್‌ ಮಾಡಿಕೊಳ್ಳುವ ವಿಡಿಯೋ ವೈರಲ್‌ ಆಗಿದ್ದು. ಇಂತಹ ಅತ್ಯಂತ ವಿಷಕಾರಿಯಾದ ಟೈಟಲ್‌ಗಳ ಜೊತೆಗೆ ನಮ್ಮ ದೇಶದಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಮಂದಿ ಹರಿಯಬಿಟ್ಟಿದ್ದಾರೆ.

ಭಾರತದಲ್ಲಿ ಹರಡಲಾಗಿರುವ ಈ ಸುಳ್ಳು ವಿಡಯೋಗಳನ್ನು ನೋಡಿ: ಇಲ್ಲಿ ಮತ್ತು ಇಲ್ಲಿ

ಭಾರತದಲ್ಲಿ ಜನ ಹುಚ್ಚೆದ್ದು ಇದನ್ನು ಹಂಚಿದರು. ದ್ವೇಷಕಾರುವ ಕಮೆಂಟ್‌ಗಳನ್ನು ಮಾಡಿದರು. ಜನ ಇದನ್ನು ನಂಬಿದರು. ಇಸ್ರೆಲ್‌ ದಾಳಿಗೆ ನಾವು ತತ್ತರಿಸಿಹೋಗಿದ್ದೇವೆ ಎಂದು ಜಗತ್ತಿನ ಮುಂದೆ ಅತ್ತು, ಕನಿಕರ ಪಡೆಯಲು ಈ ರೀತಿ ನಾಟಕ ಆಡುತ್ತಿದ್ದಾರೆ ಎಂದು ಈ ವಿಡಿಯೋವನ್ನು ಹಂಚಿದ್ದೇ ಹಂಚಿದ್ದು. ಈ ವಿಡಿಯೋ ನಿಮ್ಮ ಫೋನಿನಲ್ಲಿಯೂ ಬಂದಿರಬಹುದು.

ಅಸಲಿಗೆ ಸತ್ಯ ಏನು ಗೊತ್ತಾ?

ಈ ವೀಡಿಯೊ 2017 ಫೆಬ್ರವರಿ ತಿಂಗಳದ್ದು. ಗಾಜಾದ ಸಿನೇಮಾ ಇಂಡಸ್ಟ್ರಿಯಲ್ಲಿ ಸ್ಪೆಷಲ್‌ ಇಫೆಕ್ಟ್‌ ಮೇಕಪ್ ಕಲಾವಿದೆಯಾಗಿರುವ ಮರಿಯಮ್ ಸಲೇಹ್ ಅವರು ಮೇಕಪ್‌ ಕೆಲಸ ಮಾಡುತ್ತಿರುವ ವಿಡಿಯೋ.

l Love Israel ಎಂಬ ಯೂಟ್ಯೂಬ್‌ ಚಾನೆಲ್‌ನ ಸುದ್ದಿ ವಿಡಿಯೋ ಒಂದರಲ್ಲಿ ಈ ವಿಡೀಯೋ ಜೊತಗೆ ಮರಿಯಮ್‌ ಸಲೇಹ್‌ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಇದು ಫ್ರೆಂಚ್‌ ಚ್ಯಾರಿಟಿ Doctors of The World (Médecins du Monde) ಗಾಗಿ ಮಾಡಿದ ಒಂದು ವಿಡಿಯೋವಾಗಿದ್ದು, ಇದರ ಬ್ಯಾನರನ್ನು ಈಗ ನಾವು-ನೀವು ಹರಡುತ್ತಿರುವ ಸುಳ್ಳು ವಿಡಿಯೋದಲ್ಲಿಯೂ ನೋಡಬಹುದು! ಇದೇ ವಿಡಿಯೋವನ್ನು 2021ರಲ್ಲಿ ಕೂಡ ಸುಳ್ಳು ಹರಡಲು ಬಳಸಲಾಗಿತ್ತು.

ಅಚ್ಚರಿಯೇನೆಂದರೆ, ಈ ವಿಡಿಯೋವನ್ನು ನಮ್ಮ ದೇಶದಲ್ಲಿ ಯಾಕೆ ನಾಚಿಕೆ ಬಿಟ್ಟು ಹಂಚುತ್ತಿದ್ದೇವೆ ಎಂಬುದು ನಮಗೆ ಅರ್ಥವಾದರೂ ಗೊತ್ತಾಗದವರಂತೆ ನಟಿಸುತ್ತಿದ್ದೇವೆ.

ಶ್ರೀನಿವಾಸ ಕಾರ್ಕಳರವರು ಬರೆದಿರುವ ಈ ಲೇಖನ ಓದಿ: ಸುಳ್ಳು ಸುದ್ದಿಗಳ ಮಹಾಸಾಗರ

ಪಾಠ-2: ಡೆತ್‌ ಟು ಅಮೇರಿಕಾ: ಇರಾನ್‌ ಪಾರ್ಲಿಮೆಂಟಿನಲ್ಲಿ ಘೋಷಣೆ!

ಟೈಮ್ಸ್‌ ನೌ ಎಂಬುದು ಭಾರತದ ಅತ್ಯಂತ ದೊಡ್ಡ ನ್ಯೂಸ್‌ ಚಾನೆಲ್.‌ ಈ ಚಾನೆಲ್‌ ಒಂದು ವಿಡಿಯೋವನ್ನು ಹಿಡಿದುಕೊಂಡು ಸುದ್ದಿ ಮಾಡುತ್ತದೆ. ಅದೇನಪ್ಪಾ ಅಂದರೆ,

ಕೇಬಲ್ ನ್ಯೂಸ್ ನೆಟ್‌ವರ್ಕ್ (CNN) ನಿಂದ ಉದ್ದೇಶಿಸಲಾದ ವೀಡಿಯೋದಲ್ಲಿ ಇರಾನಿನ ಶಾಸಕರು “Death To America – ಅಮೇರಿಕಾ ಸಾಯಲಿ” ಎಂಬ ಘೋಷಣೆಗಳನ್ನು ಕೂಗುತ್ತಾರೆ. ಟೆಲ್ ಅವಿವ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಬಂಡುಕೋರರು ದಾಳಿ ಮಾಡಿದ ನಡುವೆ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ ಎಂದು ಇಸ್ರೇಲ್-ಪ್ಯಾಲಿಸ್ತೇನ್‌ ಸಂಘರ್ಷಕ್ಕೆ ಇದನ್ನು ತಳುಕು ಹಾಕಲಾಯಿತು. ಇದನ್ನು ಮಾಡಿದ್ದು ಬೇರೆ ಯಾರೂ ಅಲ್ಲ, ಟೈಮ್ಸ್ ನೌ ಎಂಬ ಎಂದು ಮಾಧ್ಯಮ ಸಂಸ್ಥೆ!

ಜನ ಹುಚ್ಚೆದ್ದು ನಂಬಿದರು. ಹಿಂದೆ ಮುಂದೆ ನೋಡದೆ ಇದನ್ನು ಹಂಚಿದರು. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಸಾವಿರಾರು ಜನ ಹಂಚಿ ದ್ವೇಷ ಕಾರಿದರು.

ಈ ವಿಡಿಯೋವನ್ನು ಎಲ್ಲೆಲ್ಲಿ ಹರಡಿದ್ದಾರೆ ಎಂದರೆ, ಅಲ್ಲಿ ಮತ್ತು ಇಲ್ಲಿ , ಇಕೋ ಇಲ್ಲೂ…..ಎಲ್ಲೆಲ್ಲೂ ಈ ಸುಳ್ಳು ಹರಡಲಾಗಿದೆ!

ಅಸಲಿಗೆ ಈ ವಿಡಿಯೋ ಜನವರಿ 2020ಕ್ಕೂ ಹಿಂದಿನದು. ಇರಾನ್ ಸೇನಾಧಿಕಾರಿ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಇರಾನ್ ಶಾಸಕರು ಅಮೆರಿಕ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಇದು.

ಇದಕ್ಕೂ ಇಸ್ರೇಲ್‌ – ಪ್ಯಾಲಿಸ್ತೇನ್‌ ಸಂಘರ್ಷಕ್ಕೂ ಸಂಬಂಧವೇ ಇಲ್ಲ. ಟೈಮ್ಸ್‌ ನೌ ಮತ್ತು ನಾವು -ನೀವು, ಸುಳ್ಳು ಹಂಚುವಾಗ ಸ್ವಲ್ಪವೇ ಸ್ವಲ್ಪವಾದರೂ ನಾಚಿಕೆಯಾಗಬೇಕು, ಅಲ್ವಾ?

ಪಾಠ-3: ಹಮಾಸ್‌ ವಿರುದ್ದ ಹೋರಾಡಲು ನೆತನ್ಯಾಹು ಮಗ ಸೇನೆ ಸೇರಿದ್ದು ಎಷ್ಟು ಸತ್ಯ?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಮಗನನ್ನು ಪ್ಯಾಲೆಸ್ತೀನ್ ಬಂಡುಕೋರ ಸಂಘಟನೆ ಹಮಾಸ್ ವಿರುದ್ಧ ಹೋರಾಡಲು ಸೈನ್ಯಕ್ಕೆ ಸೇರಿಸುತ್ತಿದ್ದಾರೆ ಎಂದು ಫೋಟೋವೊಂದು ಭಾರಿ ವೈರಲ್‌ ಆಗುತ್ತಿತ್ತು. ಭಾರತದಲ್ಲಿ ಇದನ್ನು ಹಂಚಿದ್ದೇ ಹಂಚಿದ್ದು.

ಸ್ವತಃ ಮಗನ್ನೇ ಸೈನ್ಯಕ್ಕೆ ಕಳಿಸುತ್ತಿದ್ದಾರೆ ಎಂದು ಭಾರತದಲ್ಲಿ ʼದೇಶಭಕ್ತಿʼಯ ಲೇಬಲ್‌ ಅಂಟಿಸಿ ಭಾರೀ ಪ್ರಚಾರ ಮಾಡಿದರು. ಇದೊಂದು ಅಪ್ಪಟ ಸುಳ್ಳು…ಹಸಿ ಹಸಿ ಸುಳ್ಳು!

ಈ ಸುಳ್ಳನ್ನು ಕೋಟ್ಯಾಂತರ ಜನ ಹಂಚಿ ಕೋಟಿ ಕೋಟಿಗೂ ಮಿಕ್ಕಿ ಭಾರತೀಯರ ದಾರಿ ತಪ್ಪಿಸಿದರು.

ಎಲ್ಲೆಲ್ಲಿ ಜನರ ಹಾದಿ ತಪ್ಪಿಸಲಾಗಿದೆ ಗೊತ್ತಾ?

ಇಲ್ಲಿ ನೋಡಿ….!

ಇಲ್ಲೂ ನೋಡಿ….! 

ಎಲ್ಲೆಲ್ಲೂ ನೋಡಿ!

ಸತ್ಯ ಏನು ಗೊತ್ತಾ? ಇದು ನೆತನ್ಯಾಹು ತನ್ನ ಕಿರಿಯ ಮಗ ಅವ್ನರ್ ನೆತನ್ಯಾಹು ಜೊತೆಗೆ ಇರುವ 2014 ರ ಹಳೆಯ ಚಿತ್ರವಾಗಿದೆ. ಇದು ಈತ ಐಡಿಎಫ್‌ ಸೇರುವಾಗ ತೆಗೆದ ಫೋಟೋವಾಗಿದ್ದು Times of Isreal ಇದನ್ನು ಡಿಸೆಂಬರ್‌ 1,2014 ರಂದು ಪ್ರಕಟಿಸಿತ್ತು! ಇದನ್ನು Jerusalem Post ಕೂಡ ಡಿಸೆಂಬರ್‌ 1,2014 ರಂದು ಪ್ರಕಟಿಸಿತ್ತು.

ಹಮಾಸ್‌ ವಿರುದ್ಧ ಹೋರಾಡಲು ನೇತನ್ಯಾಹು ಮಗ ಮೊನ್ನೆ ಮಿಲಿಟರಿ ಸೇರಿದ ಎಂಬುದು ಅಪ್ಪಟ ಸುಳ್ಳು…ನಂಬದಿರಿ!

ಶ್ರೀನಿವಾಸ ಕಾರ್ಕಳರವರು ಬರೆದಿರುವ ಈ ಲೇಖನ ಓದಿ: ಸುಳ್ಳು ಸುದ್ದಿಗಳ ಮಹಾಸಾಗರ

ಪಾಠ-4: ಸಿನಿಮಾದ ವಿಡಿಯೋ ತೋರಸಿ ಮಂಗ ಮಾಡಿದ್ದು!

ಗಾಯಗೊಂಡ ಬಾಲಕನೊಬ್ಬನ ಸುತ್ತಮುತ್ತ ಕ್ಯಾಮರಾಗಳನ್ನು ಹಿಡಿದುಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿತ್ತು. ಇದನ್ನು ಇಸ್ರೇಲಿಗರು ಫೇಕ್‌ ವಿಡಿಯೋ ತಯಾರು ಮಾಡ್ತಾ ಇದ್ದಾರೆ ಎಂದು ಈ ವಿಡಿಯೋವನ್ನು ಬಳಸಿ ಸುಳ್ಳು ಹರಡಲಾಗಿತ್ತು. ಭಾರತದಲ್ಲಿ ಈ ವಿಡಿಯೋವನ್ನು ಬೇಜಾನ್‌ ಜನ ಮೆದುಳನ್ನು ಪಕ್ಕಕ್ಕೆ ಇಟ್ಟು ಹಂಚಿದ್ದರು!

ಅಸಲಿಗೆ ಅದೇನು ಗೊತ್ತಾ? ಸಿನೇಮಾವೊಂದರ ತೆರೆಯ ಹಿಂದಿನ (ಶೂಟಿಂಗ್) ವಿಡಿಯೋ!

ನೀವು ಈ ರೀತಿ ಕ್ಯಾಪ್ಷನ್‌ ಹಾಕಿ ಹಂಚಿದ್ದನ್ನು ಇಲ್ಲಿ ನೋಡಬಹುದುಇಲ್ಲೂ ಕೂಡ….ಇಲ್ಲಿ ನೋಡಿ!

ಅಸಲಿಗೆ ಇದು ಅಹಮದ್‌ ಮನಸ್ರಾ ಎಂಬ ಪ್ಯಾಲಿಸ್ತೇನಿ ಬಂಧಿತ ಬಾಲಕನ ಬಗ್ಗೆ ಇರುವ Empty Place ಎಂಬ ಕಿರು ಚಿತ್ರದ ಶೂಟಿಂಗ್‌ ದೃಶ್ಯಗಳು! ಬೇರೆ ಆಂಗಲ್‌ನಿಂದ ಚಿತ್ರಿಸಿರುವ ಇದೇ ವಿಡಿಯೋವನ್ನು @awawdehproduction ಎಂಬ ಟಿಕ್‌ಟಾಕ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಟಿಕ್‌ಟಾಕ್‌ನಲ್ಲಿ ಈ ವಿಡಿಯೋವನ್ನು Behind the scenes of filming a short film about the story of the child prisoner Ahmed Manasra.” ಎಂಬ (ಅರೇಬಿಕ್‌ನಲ್ಲಿದೆ) ಕ್ಯಾಪ್ಷನ್‌ ಜೊತೆಗೆ ಪೋಸ್ಟ್‌ ಮಾಡಲಾಗಿದೆ.

ಪಾಠ-5: ಹಮಾಸ್‌ ದಾಳಿಯೆಂದು ವಿಡಿಯೋ ಗೇಮ್‌ ಬಳಸಿ ಮೂರ್ಖರನ್ನಾಗಿ ಮಾಡಿದ ಕಥೆ!

ವ್ಯಕ್ತಿಯೊಬ್ಬ ಕ್ಷಿಪಣಿಯನ್ನು ಹಾರಿಸುತ್ತಿರುವ ವೀಡಿಯೊ X, ಫೇಸ್‌ಬುಕ್..ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದು ಗಾಜಾದಲ್ಲಿ ಇಸ್ರೇಲಿನ ಹೆಲಿಕಾಪ್ಟರನ್ನು ಹಮಾಸ್‌ ಬಂಡುಕೋರರು ಹೊಡೆದುರುಳಿಸುತ್ತಿರುವ ವಿಡಿಯೋ ಎಂದು ಎಲ್ಲಾ ಕಡೆ ಪ್ರಚಾರವಾಗುತ್ತಿದೆ.

ಜನ ಇದನ್ನು ಸ್ವಲ್ಪ ಕೂಡ ಯೋಚನೆ ಮಾಡದೆ ಎಲ್ಲಾ ಕಡೆ ಹಂಚಿದ್ದಾರೆ…..ಇಲ್ಲಿ ಕೂಡ ನೋಡಿ!

ವಿಪರ್ಯಾಸ ಏನಪ್ಪಾ ಅಂದ್ರೆ  ARMA 3 ಎಂಬ ವಿಡಿಯೋಗೇಮಿನ ಆನಿಮೇಟೆಡ್‌ ವಿಡಿಯೋವನ್ನು ನಾವು ನಿಜ ಎಂಬಂತೆ ನಂಬಿದ್ದು! ಇದು ಅಗಸ್ಟ್‌ 16 ರಂದು ಫೇಸ್‌ಬುಕ್‌ನಲ್ಲಿ ಫೋಸ್ಟ್‌ ಆಗಿತ್ತು!

ಇಲ್ಲಿಗೆ ಪಾಠಗಳು ಮುಗಿದಿಲ್ಲ. ಯಾಕೆಂದರೆ ನಿರಂತರವಾಗಿ ಇಸ್ರೇಲ್‌ ಹಾಗೂ ಪ್ಯಾಲಿಸ್ತೇನಿನ ಸಂಘರ್ಷದ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು, ತಿರುಚಿದ ವಿಡಿಯೋಗಳನ್ನು ಹರಿಯಬಿಡಲಾಗುತ್ತಿದೆ. ಭಾರತ ದಿನೇ ದಿನೇ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಫ್ಯಾಕ್ಟರಿಯಾಗಿ ಬದಲಾಗುತ್ತಿದೆ. ದೇಶದಾದ್ಯಂತ ಆನೇಕ ಪ್ರಜ್ಷಾವಂತರು ಸುಳ್ಳು ಸುದ್ದಿಗಳನ್ನು ಬಯಲಿಗೆ ತರುವ ಕೆಲಸ ಮಾಡುತ್ತಿದ್ದರೂ, ಇವು ಅಲ್ಲಲ್ಲಿ ವಿಷಕಾರಿ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇಂತಹ ಸುಳ್ಳು ಸುದ್ದಿಗಳನ್ನು ಈ ದೇಶದ ʼಮುಖ್ಯವಾಹಿನಿಯ ದೊಡ್ಡ ದೊಡ್ಡ ಚಾನೆಲ್‌ಗಳು” ಲಜ್ಜೆಗಟ್ಟು ಹಬ್ಬಿಸುತ್ತಿವೆ.

ನಾವು ಜಾಗೃತರಾಗಿರಬೇಕು. ವಾಟ್ಸಾಪ್‌, ಫೇಸ್ಬುಕ್‌ನಲ್ಲಿ ಬಂತು ಎಂದು ನಂಬಲು ಹೋಗಬಾರದು. ಇಷ್ಟು ಮಾತ್ರವಲ್ಲ, ಭಾರತದ ಯಾವುದೇ ಪ್ರಮುಖ ಮಾಧ್ಯಮಗಳನ್ನೂ ಈ ವಿಚಾರದಲ್ಲಿ ನಂಬಲು ಸಾಧ್ಯವಿಲ್ಲ.

ಸುಳ್ಳು ಸುದ್ದಿಗಳನ್ನು ಹುಟ್ಟಿಸುವುದು ಮತ್ತು ಹರಡುವುದು ʼತಿಳಿಯದೆʼ ಮಾಡುವ ಕೆಲಸವಲ್ಲ. ಇದೊಂದು ವ್ಯವಸ್ಥಿತವಾದ ಜಾಲ. ಕೋಮುಗಲಬೆ, ಚುನಾವಣೆಗಳು ನಡೆದಾಗ ವ್ಯವಸ್ಥಿತವಾಗಿ ಐಟಿ ಸೆಲ್‌ಗಳು ಈ ವಿಕೃತಿಗೆ ಇಳಿಯುತ್ತವೆ. ಜನರು ʼವಿವೇಚನೆʼ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂಬ ಬಲವಾದ ನಂಬಿಕೆ ಅವರ ಅಸ್ತ್ರವಾಗಿದೆ. ಅದಕ್ಕೆ ಪೂರಕವಾಗಿ ಅವರು ಸೃಷ್ಟಿಸುವ ಸುಳ್ಳುಗಳನ್ನು ನಾವು ಹಂಚುತ್ತಿದ್ದೇವೆ.

ಒಂದೊಮ್ಮೆ, ಇಡೀ ಭಾರತವನ್ನು ಇಂತಹ ಸುಳ್ಳುಗಳಿಂದ ತುಂಬಿಸಿದ್ದೇ ಆದಲ್ಲಿ, ನಾವು ಈ ದೇಶವನ್ನ ಜ್ಞಾನ ಸಂಪತ್ತನ್ನು ಕೊಂದ ಹಾಗೆ…! ಸುಳ್ಳು ಸುದ್ದಿಗಳ ಬಗ್ಗೆ ಸದಾ ಎಚ್ಚರವಾಗಿರೋಣ….ಯಾವುದನ್ನೂ ವಿವೇಚಿಸದೇ, ಸತ್ಯಾಸತ್ಯ ತಿಳಿಯದೆ ಹಂಚಲು ಹೋಗದಿರೋಣ.

ಶ್ರೀನಿವಾಸ ಕಾರ್ಕಳರವರು ಬರೆದಿರುವ ಈ ಲೇಖನ ಓದಿ: ಸುಳ್ಳು ಸುದ್ದಿಗಳ ಮಹಾಸಾಗರ

Related Articles

ಇತ್ತೀಚಿನ ಸುದ್ದಿಗಳು