ಹಾಸನ: ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದು ರೈತರೊಬ್ಬರು ಹೊಲದಲ್ಲಿಯೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಜಗದೀಶ್ (45) ಎಂದು ಗುರುತಿಸಲಾಗಿದೆ. ಜಗದೀಶ್ ಅವರು ಸ್ವಂತ ಜಮೀನಿನ ಜೊತೆಗೆ ಸುಮಾರು ಎಂಟು ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಅವರು ತಮ್ಮ ಜಮೀನಿನಲ್ಲಿ ಶುಂಠಿ, ಆಲೂಗೆಡ್ಡೆ ಹಾಗೂ ಮೆಕ್ಕೆಜೋಳ ಬೆಳೆದಿದ್ದರು. ಕೃಷಿ ಚಟುವಟಿಕೆಗಳಿಗಾಗಿ ಜಗದೀಶ್ ಅವರು ಕಾವೇರಿ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ವಿವಿಧ ಸಂಘಗಳು ಹಾಗೂ ಕೈಸಾಲ ಸೇರಿದಂತೆ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.ಸಾಲ ಮರುಪಾವತಿ ಮಾಡುವಂತೆ ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ಜಗದೀಶ್ ಅವರಿಗೆ ಎರಡ್ಮೂರು ಬಾರಿ ನೋಟೀಸ್ ನೀಡಲಾಗಿತ್ತು. ನೋಟೀಸ್‌ಗೆ ಹೆದರಿದ ಜಗದೀಶ್, ಪತ್ನಿಯ ಸ್ವಲ್ಪ ಒಡವೆಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲದ ಹಣವನ್ನು ತೀರಿಸಿದ್ದರು.
ಆದರೆ ಬಳಿಕ ಮಳೆ ಕೊರತೆಯಿಂದ ಜಮೀನಿನಲ್ಲಿದ್ದ ಬೆಳೆಗಳು ಒಣಗತೊಡಗಿದ್ದವು. ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜಗದೀಶ್ ಅವರು ಪತ್ನಿಯ ಹೆಸರಿನಲ್ಲಿ ಉಳಿದಿದ್ದ ಒಡವೆಗಳನ್ನೂ ಅಡವಿಟ್ಟು ಮತ್ತೆ ಸಾಲ ಮಾಡಿಕೊಂಡಿದ್ದರು.ಸಾಲವಾಗಿ ಪಡೆದ ಹಣದಲ್ಲಿ ಎರಡು ಬೋರ್‌ವೆಲ್‌ಗಳನ್ನು ಕೊರೆಸಿದ್ದರು. ಆದರೆ ಎರಡೂ ಬೋರ್‌ವೆಲ್‌ಗಳಲ್ಲೂ ನೀರು ಸಿಗದೆ ಜಗದೀಶ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರು.ಇದರ ನಡುವೆ ಮಳೆ ಇಲ್ಲದೆ ಶುಂಠಿ, ಮೆಕ್ಕೆಜೋಳ ಹಾಗೂ ಆಲೂಗೆಡ್ಡೆ ಬೆಳೆಗಳು ಸಂಪೂರ್ಣ ನಾಶವಾಗಿದ್ದವು. ಬೆಳೆ ನಷ್ಟ, ಹೆಚ್ಚಾದ ಸಾಲ ಹಾಗೂ ಆರ್ಥಿಕ ಸಂಕಷ್ಟದಿಂದ ಮನನೊಂದ ಜಗದೀಶ್ ಅವರು ಹೊಲದಲ್ಲಿಯೇ ಕಳೆನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.ವಿಷ ಸೇವಿಸಿದ್ದ ಜಗದೀಶ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.ಘಟನೆ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
