ಬೇಲೂರು (ಹಾಸನ): ಜಮೀನಿಗೆ ತೆರಳಿದ್ದ ರೈತರೊಬ್ಬರ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ನಡೆಸಿ ತುಳಿದು ಸಾಯಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಗ್ರಾಮದ ನಿವಾಸಿ ರಾಜಶೆಟ್ಟಿ (65) ಮೃತಪಟ್ಟ ದುರ್ದೈವಿ. ಭಾನುವಾರ ಬೆಳಿಗ್ಗೆ ಎಂದಿನಂತೆ ರಾಜಶೆಟ್ಟಿ ಅವರು ತಮ್ಮ ಕೃಷಿ ಜಮೀನಿಗೆ ಕೆಲಸಕ್ಕೆ ತೆರಳಿದ್ದಾಗ, ಅಲ್ಲಿನ ಪೊದೆಯೊಂದರಲ್ಲಿ ಅಡಗಿದ್ದ ಒಂಟಿ ಆನೆ ಏಕಾಏಕಿ ದಾಳಿ ನಡೆಸಿದೆ. ಸೊಂಡಿಲಿನಿಂದ ಎತ್ತಿ ಎಸೆದ ಆನೆಯು, ಬಳಿಕ ಅವರನ್ನು ತುಳಿದು ಸಾಯಿಸಿದೆ.
ದಾಳಿಯ ನಂತರವೂ ಆನೆಯು ಶವದ ಬಳಿಯೇ ಸುಮಾರು ಹೊತ್ತು ಠಿಕಾಣಿ ಹೂಡಿದ್ದರಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯ ಮೂಲಕ ಆನೆಯನ್ನು ಕಾಡಿಗೆ ಓಡಿಸಿದರು. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮತ್ತು ಶಾಸಕ ಎಚ್.ಕೆ. ಸುರೇಶ್ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಸ್ಥಳದಲ್ಲೇ ಅರಣ್ಯ ಇಲಾಖೆಯ ವತಿಯಿಂದ 20 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ಅನ್ನು ಮೃತರ ವಾರಸುದಾರರಿಗೆ ಹಸ್ತಾಂತರಿಸಿದರು. ಪದೇ ಪದೇ ಆನೆಗಳು ನಾಡಿಗೆ ಬರುತ್ತಿರುವುದರಿಂದ ಆತಂಕದಲ್ಲಿರುವ ಜನರು, ಕಾಡಾನೆಗಳ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
