ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಎರಡು ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ರೈತನೊಬ್ಬನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಇತ್ತೀಚೆಗೆ ಮೂರು ಮತ್ತು ಎಂಟು ವರ್ಷ ಪ್ರಾಯದ ಎರಡು ಹುಲಿಗಳ ಮೃತದೇಹಗಳು ಕಾಡಿನ ನೀರಿನ ಹೊಂಡದಲ್ಲಿ ನೀರಿನಲ್ಲಿ ಬಿದ್ದಿದ್ದವು. ಈ ಕುರಿತು ತನಿಖೆ ನಡೆಸಿದಾಗ, ಹುಲಿಗಳ ಶವದ ಬಳಿ ಮತ್ತೊಂದು ಹಸು ಶವವಾಗಿ ಪತ್ತೆಯಾಗಿದೆ.
ನಂತರ ಮೂರೂ ದೇಹಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕೊಯಮತ್ತೂರ್‌ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಮೃತದೇಹದಲ್ಲಿ ಕೀಟನಾಶಕಗಳ ಅವಶೇಷಗಳಿದ್ದವು ಎಂಬ ವರದಿ ಬಂದಿದೆ.
ವಿಷಪೂರಿತ ಹಸುವಿನ ಮೃತದೇಹವನ್ನು ತಿಂದು ಹುಲಿಗಳು ಸಾವನ್ನಪ್ಪಿರುವುದು ಕಂಡುಬಂದಿದೆ. ಹಸುವಿನ ಮಾಲೀಕ ಶೇಖರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಹತ್ತು ದಿನಗಳ ಹಿಂದೆ ಹುಲಿ ತನ್ನ ಹಸುವನ್ನು ಕೊಂದಿದೆ ಎಂದು ಶೇಖರ್ ಹೇಳಿದ್ದಾನೆ.
ಹುಲಿಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ತಾನು ಹುಲಿ ಅರ್ಧ ತಿಂದಿದ್ದ ದನದ ಶವಕ್ಕೆ ವಿಷ ಬೆರೆಸಿದ್ದಾಗಿ ವಿಚಾರಣೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆ.