ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಿಂದ ದಿನಗೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಗುರುವಾರ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಆಳವಾದ ಕಮರಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 22 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಈವರೆಗೆ ರಕ್ಷಣಾ ಸಿಬ್ಬಂದಿ ಸ್ಥಳದಿಂದ 13 ಶವಗಳನ್ನು ಹೊರತೆಗೆದಿದ್ದು, ಉಳಿದವರಿಗಾಗಿ ತೀವ್ರ ಶೋಧ–ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಾಹಿತಿ ಪ್ರಕಾರ, ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುತ್ತಿದ್ದ ಟ್ರಕ್ ತೀವ್ರ ತಿರುವು ಹಾದಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸರು, ಜಿಲ್ಲಾಧಿಕಾರಿ ತಂಡ ಹಾಗೂ ವಿಪತ್ತು ಪ್ರತಿಕ್ರಿಯಾ ದಳಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ದುರ್ಗಮ ಪ್ರದೇಶ, ಹವಾಮಾನ ತೊಂದರೆ ಮತ್ತು ಕಡಿದಾದ ಕಮರು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ವ್ಯಕ್ತವಾಗಿದೆ.
ಇದೇ ವೇಳೆ, ಡಿಸೆಂಬರ್ 7ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ತಾಲ್ಲೂಕಿನ ಸಪ್ತಶ್ರಿಂಗ್ ಘರ್ ಘಾಟ್ನಲ್ಲಿ 600 ಅಡಿ ಆಳದ ಕಂದಕಕ್ಕೆ ಕಾರು ಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ ಘಟನೆ ಇನ್ನೂ ಮಾಸದಿರುವಾಗಲೇ ಈ ಘಟನೆ ಸಂಭವಿಸಿದೆ.
